ಕಾರವಾರ(ನ.16): ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಆದರೆ, ದೀಪಾವಳಿ ಹಬ್ಬದಲ್ಲಿ ಜನರ ಓಡಾಟದಿಂದ ಮತ್ತೆ ಏರಿಕೆಯಾದೀತೆ ಎಂಬ ಆತಂಕ ಕಾಡತೊಡಗಿದೆ.

ಮುಂಬಯಿ, ಗೋವಾ, ಬೆಂಗಳೂರು, ಮಂಗಳೂರು, ಧಾರವಾಡ, ಬೆಳಗಾವಿ, ಉಡುಪಿ ಹೀಗೆ ಬೇರೆ ಬೇರೆ ರಾಜ್ಯ, ಜಿಲ್ಲೆಗಳಲ್ಲಿ ನೆಲೆಸಿರುವ ಜಿಲ್ಲೆಯ ಮೂಲದವರು ದೀಪಾವಳಿ ಹಬ್ಬಕ್ಕಾಗಿ ತವರಿಗೆ ಮರಳಿದ್ದಾರೆ. ಕುಟುಂಬದವರೆಲ್ಲ ಒಟ್ಟಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಮನೆ ಮನೆಗಳಲ್ಲಿ ಹಬ್ಬದ ಸಂಭ್ರಮದಲ್ಲಿ ಮೈಮರೆತಿದ್ದಾರೆ. ಈ ನಡುವೆ ಬೇರೆ ಬೇರೆ ಕಡೆಗಳಲ್ಲಿಂದ ಮನೆಗೆ ಮರಳಿದರೂ ಮನೆಯಲ್ಲಂತೂ ಮಾಸ್ಕ್‌ ಧರಿಸುವುದಿಲ್ಲ. ಸಾಮಾಜಿಕ ಅಂತರವೂ ಇಲ್ಲ. ಯಾರೇ ಒಬ್ಬ ಸೋಂಕಿತರಿದ್ದರೂ ಮನೆ ಮಂದಿಗೆಲ್ಲ ಸೋಂಕು ಹರಡುವ ಸಾಧ್ಯತೆ ಇದೆ. ಇದರಿಂದ ಮತ್ತೆ ಕೊರೋನಾ ಹಾವಳಿ ಹೆಚ್ಚಲಿದೆಯೇ ಎಂಬ ಕಳವಳ ಉಂಟಾಗಿದೆ.

ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲೂ ದೀಪಾವಳಿಗೆ 3-4 ದಿನಗಳ ಹಿಂದಿನಿಂದಲೆ ಜನಜಂಗುಳಿ ಉಂಟಾಗಿತ್ತು. ವ್ಯಾಪಾರ ವಹಿವಾಟು ಜೋರಾಗಿತ್ತು. ಹಬ್ಬದ ಸಡಗರಕ್ಕಾಗಿ ಅಲಂಕಾರಿಕ ಸಾಮಗ್ರಿಗಳು, ವಿದ್ಯುದ್ದೀಪಗಳು, ಹೂವು, ಹಣ್ಣು, ದಿನಸಿ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.

ದೀಪಾವಳಿ ಹಬ್ಬದಲ್ಲಿ ಸಿಹಿ ತಿಂಡಿಗಳ ವಿನಿಮಯವೂ ಆಗಲೇಬೇಕು. ಇದೊಂದು ಸಂಪ್ರದಾಯವಾಗಿದೆ. ಇದರಿಂದ ಸಿಹಿತಿಂಡಿಗಳು, ಡ್ರೈಫ್ರುಟ್ಸ್‌ ಶಾಪ್‌ಗಳ ಎದುರು ಜನತೆ ಮುಗಿಬಿದ್ದು ಖರೀದಿಸಿದ್ದರು. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರ ಕಂಡುಬರಲಿಲ್ಲ. ಮಾರುಕಟ್ಟೆಗಳಲ್ಲಿ ಜನಜಂಗುಳಿ ಹಾಗೂ ಕೊರೋನಾ ಮುನ್ನೆಚ್ಚರಿಕೆ ಕ್ರಮದ ಪಾಲನೆ ಸಮರ್ಪಕವಾಗಿ ಆಗದೆ ಇರುವುದರಿಂದ ಕೋವಿಡ್‌-19 ಹೆಚ್ಚಲಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಓಲ್ಡ್‌ ಫೋನ್‌ ಅಂತ ಎಸಿಬೇಡಿ: ಹಳೆಯ ಮೊಬೈಲ್‌ಗ​ಳಿಗೆ ಭಾರಿ ಡಿಮ್ಯಾಂಡ್‌..!

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆಲ್ಲ ಪ್ರತಿದಿನ 200 ಹಾಗೂ 100ಕ್ಕೂ ಹೆಚ್ಚು ಕೋವಿಡ್‌ ಸೋಂಕಿತ ಪ್ರಕರಣಗಳು ವರದಿಯಾಗುತ್ತಿತ್ತು. ಕೋವಿಡ್‌ ವಾರ್ಡ್‌ಗಳು ಭರ್ತಿಯಾಗಿಯೇ ಇರುತ್ತಿತ್ತು. ಆದರೆ ಕಳೆದ 15-20 ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ರಾಜ್ಯದಲ್ಲಿಯೇ ಕೋವಿಡ್‌ ನಿಯಂತ್ರಣದಲ್ಲಿ ಉತ್ತರ ಕನ್ನಡ ಪ್ರಥಮ ಸ್ಥಾನದಲ್ಲಿದೆ. ಪ್ರತಿ ದಿನ ಈಗ ವರದಿಯಾಗುವ ಪ್ರಕರಣಗಳು ಎರಡಂಕಿಯಷ್ಟೇ ಇವೆ. ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ದೀಪಾವಳಿ ಹಬ್ಬದಲ್ಲಿ ಮೈಮರೆತು ಮತ್ತೆ ತೀವ್ರವಾದರೆ ಎಂಬ ಕಳವಳ ಹುಟ್ಟಿಸಿದೆ.

ಈ ಬಾರಿ ಕೊರೋನಾ ವ್ಯಾಪಕವಾಗಿ ಇದ್ದುದರಿಂದ ಗಣೇಶೋತ್ಸವ ಹಾಗೂ ದಸರಾದ ವಿಜೃಂಭಣೆಗೆ ಸರ್ಕಾರದ ನಿಯಮಾವಳಿ ಜತೆಗೆ ಜನತೆ ಸ್ವಯಂ ಕಡಿವಾಣ ಹಾಕಿಕೊಂಡಿದ್ದರು. ಈಗ ಸೋಂಕಿನ ಪ್ರಕರಣಗಳು ಕಡಿಮೆಯಾಗಿದ್ದರಿಂದ ಜನರು ಕೊರೋನಾ ಬಗ್ಗೆ ನಿರ್ಲಕ್ಷ್ಯ ವಹಿಸಿದಂತೆ ಕಂಡುಬರುತ್ತಿದೆ. ಆದರೆ, ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾಸ್ಕ್‌ ಧರಿಸುವಲ್ಲಿ ಮಾತ್ರ ಜನರು ಹೆಚ್ಚಿನ ಕಾಳಜಿ ತೋರುತ್ತಿರುವುದು ಕಂಡುಬಂದಿದೆ.

ಕೊರೋನಾ ಇಳಿಮುಖವಾಯಿತೆಂದು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆ ಮತ್ತಿತರ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ತೀವ್ರವಾಗುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯೆ ಡಾ. ಅಶ್ವಿನಿ ತಿಳಿಸಿದ್ದಾರೆ.