ಶ್ರವಣಬೆಳಗೊಳ ಜೈನಮಠ ಪೀಠಾಧಿಪತಿ ಆಗಮಕೀರ್ತಿ ಶ್ರೀಗಳ ಪಟ್ಟಾಭಿಷೇಕ
ವಿಧಿ ವಿಧಾನಗಳೊಂದಿಗೆ ಪಟ್ಟ ಅಲಂಕರಿಸಿದ ಆಗಮಕೀರ್ತಿ ಸ್ವಾಮಿಗಳು, ಇತ್ತೀಚೆಗೆ ನಿಧನರಾಗಿದ್ದ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಗಳು.
ಚನ್ನರಾಯಪಟ್ಟಣ(ಮಾ.28): ತಾಲೂಕಿನ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿನ ಜೈನಮಠಕ್ಕೆ ನೂತನ ಪೀಠಾಧಿಪತಿಯ ಪಟ್ಟಾಭಿಷೇಕ ಮಹೋತ್ಸವವು ಸೋಮವಾರದಂದು ಶ್ರೀಮಠದ ಶ್ರೀಚಂದ್ರನಾಥಸ್ವಾಮಿ ಸನ್ನಿಧಿಯಲ್ಲಿ ಸಮಸ್ತ ಜೈನ ಮಠಾಧಿಪತಿಗಳ ಸಾನಿಧ್ಯದಲ್ಲಿ, ಸಾವಿರಾರು ಭಕ್ತರ ಸಾಕ್ಷಿಯಾಗಿ ವಿಜೃಂಭಣೆಯಿಂದ ನಡೆಯಿತು. ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಆಶಯದಂತೆ ನೂತನ ಪೀಠಾಧಿಪತಿಯಾಗಿ ಆಯ್ಕೆಯಾಗಿರುವ ಸ್ವಸ್ತಿಶ್ರೀ ಆಗಮಕೀರ್ತಿ ಸ್ವಾಮಿಗಳ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 9ಕ್ಕೆ ಆರಂಭವಾದ ಪಟ್ಟಾಭಿಷೇಕ ಪ್ರಯುಕ್ತ ಪೂರ್ವ ಕ್ರಿಯೆಗಳು, ಸಿಂಹಾಸನ ಪೂಜೆ ಇತ್ಯಾದಿ ಜರುಗಿ ಸಮಯ 9.21ರ ಶುಭ ವೃಷಭ ಲಗ್ನದಲ್ಲಿ ಶ್ರೀಗಳ ಪಟ್ಟಾಭಿಷೇಕ ನಡೆಯಿತು. ಶ್ರೀಗಳ ಸಿಂಹಾಸನಾರೋಹಣದ ತರುವಾಯ ಪಟ್ಟದ ಉಂಗುರ, ಪರಂಪರಾಗತ ಸುವರ್ಣಪಿಂಛ ಶಿಖಾಮೊಹರು ಸಮರ್ಪಣೆ ಮಾಡಿ, ಸುವರ್ಣ ಪಾದುಕೆಗಳಿಗೆ, ಶ್ರೀಗಳ ಪಾದಪೂಜೆ ನೆರವೇರಿಸಿ ಶ್ರೀಮಠಕ್ಕೆ ಸ್ವಸ್ತೀಶ್ರೀ ಅಭಿನವ ಭಟ್ಟಾರಕ ಸ್ವಾಮೀಜಿಯಾದರು.
ಬೆಳಗ್ಗೆ ನಿತ್ಯಕರ್ಮಕ್ಕೆ ಎದ್ದು ಬಂದಿದ್ದ ಶ್ರೀಗಳು, ಕಾಲು ಜಾರಿಬಿದ್ದು ಗಾಯಗೊಂಡಿದ್ದರು!
ಪೀಠಾಧಿಪತಿ ಹಿನ್ನೆಲೆ:
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ ಅಭಿನವ ಸ್ತಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ಆಗಮ ಇಂದ್ರ. ಅಶೋಕ್ ಕುಮಾರ್ ಇಂದ್ರ ಮತ್ತು ಅನಿತಾ ಅಶೋಕ್‌ಕುಮಾರ್‌ರವರ ಎರಡನೇ ಮಗನಾಗಿ ಫೆಬ್ರವರಿ 26, 2001ರಂದು ಜನಿಸಿದರು.
ಸಾಗರದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಕಲಿತು, ಪದವಿ ಪೂರ್ವ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪಡೆದು, ಪದವಿಯನ್ನು ಸಾಗರದ ಎಲ್‌ಬಿ ಅಂಡ್ ಎಸ್‌ಬಿ ಎಸ್ ಕಾಲೇಜಿನಲ್ಲಿ ಪಡೆದಿದ್ದಾರೆ. ಬೇಸಿಕ್ ಆಫೀಸ್ ಅಡ್ಮಿನಿಸ್ಪ್ರೇಷನ್, ಆಟೋಮೆಷನ್, ಟ್ಯಾಲಿ, ಇಆರ್‌ಪಿ-9, ಕಂಪ್ಯೂಟರ್ ಜ್ಞಾನ ಹೊಂದಿದ್ದಾರೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಬಲ್ಲ ಶ್ರೀಗಳು ಆಗಮವನ್ನು ಅರ್ಥಪೂರ್ಣವಾಗಿ ಅಧ್ಯಯನ ಮಾಡಿ ಆಗಮ ಕೀರ್ತಿ ಎನ್ನಿಸಿಕೊಂಡಿದ್ದರು.