ವಿಜಯಪುರ (ಸೆ.24): ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ತೆಗೆದುಕೊಂಡು ಹೋಗಲು ಬಾಕಿ ಬಿಲ್‌ ಪಾವತಿಸುವಂತೆ ಹೇಳಿದ ಖಾಸಗಿ ಆಸ್ಪತ್ರೆ ವೈದ್ಯರ ನಡೆಗೆ ಆಕ್ರೋಶಗೊಂಡ ಮೃತನ ಸಂಬಂಧಿಕರು, ಮುಖಂಡರು, ಬಾಕಿ ಬಿಲ್‌ ಕಟ್ಟಲು ತಮಟೆ ಬಾರಿಸಿ ಭಿಕ್ಷಾಟನೆ ನಡೆಸಿದ ಘಟನೆ ಬುಧವಾರ ಪಟ್ಟಣದಲ್ಲಿ ನಡೆಯಿತು.

 ಬೆಳಗಾವಿ ಜಿಲ್ಲೆ ಸಂಕೇಶ್ವರ ಮೂಲದ 40 ವರ್ಷದ ಸೋಂಕಿತ ವ್ಯಕ್ತಿ ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತನ ಸಂಬಂಧಿಕರು ಈಗಾಗಲೇ .4.87 ಲಕ್ಷ ಬಿಲ್‌ ಪಾವತಿಸಿದ್ದಾರೆ. ಆದರೆ, ಆಸ್ಪತ್ರೆಯವರು ಇನ್ನೂ ಬಾಕಿ 3 ಲಕ್ಷ ರು. ಬಿಲ್‌ ಭರಿಸಿ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತ​ವಾ​ಯಿತು.

ನಿಯಂತ್ರಣಕ್ಕೆ ಬಂದಿಲ್ಲ ಕೊರೋನಾ; ಟಫ್‌ ರೂಲ್ಸ್‌ ಜಾರಿಗೆ ಮುಂದಾಗ್ತಾರಾ ಮೋದಿ? ...

ಮೃತನ ಸಂಬಂಧಿಕರು ಆಸ್ಪತ್ರೆ ಎದುರು, ಭಿಕ್ಷೆ ಬೇಡಿ ತಮಟೆ ಬಾರಿಸುವುದರ ಮೂಲಕ ಆಸ್ಪತ್ರೆ ವೈದ್ಯರ ವಿರುದ್ಧ ಕಿಡಿಕಾಡಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಣ ಪಾವತಿಸದೇ ಮೃತದೇಹ ಕೊಡಲು ಆಸ್ಪತ್ರೆಯವರನ್ನು ಒಪ್ಪಿಸಿದ ಬಳಿಕ ಮೃತನ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟರು.