ಬೆಂಗಳೂರು(ಡಿ.16): ಪ್ರತಿಭಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯ ಜನದಟ್ಟಣೆ ಸೇರುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುವ ಕಡೆ ಸೋಂಕು ಪರೀಕ್ಷೆ ನಡೆಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹೋರಾಟ, ಪ್ರತಿಭಟನೆ ನಡೆಯುವ ಸ್ಥಳಗಳಲ್ಲಿ ಮೊಬೈಲ್‌ ವಾಹನದ ಮೂಲಕ ಸೋಂಕು ಪರೀಕ್ಷೆ ನಡೆಸಲಾಗುವುದು. ಈಗಾಗಲೇ ಜನ ನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಬಸ್‌ ನಿಲ್ದಾಣ ಸೇರಿದಂತೆ ಮೊದಲಾದ ಕಡೆ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಟೆಸ್ಟ್‌ ಕಡಿಮೆ ಮಾಡಿಲ್ಲ:

ನಗರದ ಹೊರ ವಲಯ ಮತ್ತು ಕೆಲವು ನಿರ್ದಿಷ್ಟವಾರ್ಡ್‌ಗಳಲ್ಲಿ ಕೊರೋನಾ ಸೋಂಕು ಪರೀಕ್ಷೆ ಹೆಚ್ಚಿಸಲಾಗಿದೆ. ನಿತ್ಯ ಸರಾಸರಿ 41,500 ಜನರಿಗೆ ಕೋವಿಡ್‌ ಟೆಸ್ಟ್‌ ಮಾಡುತ್ತಿದ್ದೇವೆ. ಸೋಂಕು ದೃಢಪಡುವುದು ಕಡಿಮೆಯಾದರೂ, ಪರೀಕ್ಷೆ ಮಾಡುವುದು ಕಡಿಮೆ ಮಾಡಿಲ್ಲ. ಮಾಡುವುದೂ ಇಲ್ಲ ಎಂದರು.

ರಾಜ್ಯದಲ್ಲಿ ಮತ್ತೆ ಮೂರಂಕಿ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ: ಇರಲಿ ಎಚ್ಚರಿಕೆ

1.49 ಲಕ್ಷ ಕೊರೋನಾ ವಾರಿಯರ್ಸ್‌ಗೆ ಲಸಿಕೆ

ಮೊದಲ ಹಂತದಲ್ಲಿ ನಗರದ 1.49 ಲಕ್ಷ ಕೊರೋನಾ ವಾರಿರ್ಯಸ್‌ಗೆ ಕೋವಿಡ್‌ ಲಸಿಕೆ ನೀಡಲು ಈಗಾಗಲೇ ನಿರ್ಧರಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಲಿದ್ದೇವೆ. ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಕೋವಿಡ್‌ ವಾರ್‌ ರೂಮ್‌ನಲ್ಲಿ ಲಸಿಕೆ ತೆಗೆದುಕೊಳ್ಳುವವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪಾಲಿಕೆ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೆಡಿಕಲ್‌ ಕಾಲೇಜಿನ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಮಾಹಿತಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಇನ್ನು ಎರಡು ದಿನದಲ್ಲಿ ಮಾಹಿತಿ ಸಂಗ್ರಹ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೋಂಕು ಪರೀಕ್ಷೆ

ಕಳೆದ ಒಂದು ವಾರದಿಂದ ನಡೆಯುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಹೋರಾಟಗಳಿಂದ ಹೆಚ್ಚು ಜನ ಒಂದೇ ಜಾಗದಲ್ಲಿ ಹೆಚ್ಚು ಜನ ಗುಂಪು ಸೇರಿದ್ದು, ಸೋಂಕು ಹಬ್ಬುವ ಸಾಧ್ಯತೆ ಇದೆ. ಸಾರಿಗೆ ನೌಕರರ ಮುಷ್ಕರದಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಿದ್ದರು. ಹಾಗಾಗಿ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಎಲ್ಲಿ ಸೋಂಕು ಪರೀಕ್ಷೆ ನಡೆಸುವುದಕ್ಕೆ ಅವಕಾಶವಿದೆ ಎಂಬುದರ ಬಗ್ಗೆ ವಿವರ ನೀಡುವಂತೆ ಎರಡೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.