ಲಾಕ್ಡೌನ್ ಘೋಷಣೆ : ಮಹಾ ವಲಸೆ ಶುರು, ಆತಂಕ ಸೃಷ್ಟಿ
ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಈ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇದರಿಂದ ಕಾರ್ಮಿಕರು ಮರಳಿ ತಮ್ಮ ಊರುಗಳತ್ತ ವಲಸೆ ಶುರು ಮಾಡಿದ್ದಾರೆ.
ಕಲಬುರಗಿ (ಏ.17): ಮಹಾರಾಷ್ಟ್ರ ಗಡಿಗೆ ಅಂಟಿರುವ ಕಲಬುರಗಿ ಪಾಲಿಗೆ ಸೆರಗಲ್ಲೇ ಕೊರೋನಾ ಕೆಂಡ, 2ನೇ ಅಲೆ ನಿಗಿನಿಗಿ ಕೆಂಡವಾಗಿ ಸುಡಲು ಶುರುವಿಟ್ಟಿದೆ.
ಕೊರೋನಾ 2ನೇ ಅಲೆ ಉಪಟಳದಿಂದ ತತ್ತರಿಸಿರುವ ಮಹಾರಾಷ್ಟ್ರ ಸರ್ಕಾರ ಅಲ್ಲಿ ಲಾಕ್ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಹೊಟ್ಟೆಹೊರೆಯಲು ಅಲ್ಲಿಗೆ ಹೋಗಿದ್ದ ಜಿಲ್ಲೆಯ ಸಾವಿರಾರು ವಲಸೆ ಕಾರ್ಮಿಕರು ಸಹ ಕುಟುಂಬ, ಪರಿವಾರ ಸಮೇತರಾಗಿ ತವರು ಜಿಲ್ಲೆಯತ್ತ ಧಾವಿಸುತ್ತಿದ್ದಾರೆ.
ಇನ್ನಷ್ಟು ಜಿಲ್ಲೆಗೆ ಕರ್ಫ್ಯೂ ವಿಸ್ತರಣೆ : ಸಿಎಂ .
ಏಕಾಏಕಿ ಕಂಡಿರುವ ಈ ಬೆಳವಣಿಗೆಯಿಂದಾಗಿ ಮುಂಬೈ, ಪುಣೆ ಹಾಗೂ ಸೊಲ್ಲಾಪುರದಿಂದ ಕಲಬುರಗಿಗೆ ಬರುವ ಎಲ್ಲಾ ರೈಲು ಹಾಗೂ ಖಾಸಗಿ ಬಸ್ಸುಗಳು ತುಂಬಿ ತುಳುಕುತ್ತಿವೆ. ನಿತ್ಯ ಮುಂಬೈನಿಂದ ಬರುವ ಉದ್ಯಾನ, ಹುಸೇನ್ ಸಾಗರ್, ಚೆನ್ನೈ ಎಕ್ಸಪ್ರೆಸ್, ಸೂಪರ್ ಪಾಸ್ಟ್ ಮುಂತಾದ ರೈಲುಗಳಿಂದ ನಿತ್ಯ 500ರಿಂದ ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರು ಮಕ್ಕಳು, ಮರಿಗಳು, ಗಂಟು- ಮೂಟೆ ಸಮೇತ ಕಲಬುರಗಿ, ಶಹಾಬಾದ್, ವಾಡಿ, ನಾಲವಾರ್, ಚಿತ್ತಾಪುರ, ಅಫಜಲ್ಪುರ, ಗಬ್ಬೂರ ಸೇರಿದಂತೆ ತಮ್ಮೂರುಗಳಿಗೆ ಮರಳುತ್ತಿದ್ದಾರೆ. ಇದರಿಂದಾಗಿ ಕೊರೋನಾ ಮತ್ತೆಲ್ಲಿ ಸ್ಫೋಟಗೊಳ್ಳುವುದೋ ಎಂಬ ಆತಂಕ ಜಿಲ್ಲೆಯಲ್ಲಿ ಮನೆ ಮಾಡಿದೆ.
ಮಹಾರಾಷ್ಟ್ರದಿಂದ ಬರುವವರಿಗೆ ಜಿಲ್ಲಾಡಳಿತ ಥರ್ಮಲ್ ಗನ್ ಬಳಸಿ ಅವರ ದೇಹದ ಉಷ್ಣತೆ ತಪಾಸಣೆ ಮಾಡುತ್ತಿದೆ. ಯಾರಿಗೂ ಕೊರೋನಾ ನೆಗೆಟಿವ್ ಟೆಸ್ಟ್ ಕಡ್ಡಾಯ ಮಾಡಲಾಗಿಲ್ಲ. ಹೀಗೆ ಗೂಡು ಸೇರುತ್ತಿರುವವರಲ್ಲಿ ಬಂಜಾರಾ ಸಮುದಾಯದ ಕಾರ್ಮಿಕರ ಅತ್ಯಧಿಕವಾಗಿದ್ದಾರೆ.
ರೈಲಿನಿಂದ ಬಂದವರಿಗಿಲ್ಲ ಟೆಸ್ಟ್ : ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಹೊಂದಿರಬೇಕೆಂದು ಜಿಲ್ಲಾಡಳಿತ 1 ತಿಂಗಳ ಹಿಂದೆಯೇ ನಿಯಮ ಮಾಡಿದೆ. ರಸ್ತೆ ಮಾರ್ಗವಾಗಿ ಬರುವ ಮಹಾರಾಷ್ಟಿ್ರಗರ ಮೇಲೆ ನಿಗಾ ಇಡಲಾಗಿದ. ಆದರೆ ರೈಲಿನಿಂದ ಬರುತ್ತಿರುವ ಸಾವಿರಾರು ಕಾರ್ಮಿಕರ ಮೇಲೆ ಜಿಲ್ಲಾಡಳಿತ ನಿಗಾ ಇಡುವ ಗೋಜಿಗೆ ಹೋಗಿಲ್ಲ.