ಹಾವೇರಿ ಜಿಲ್ಲೆಯ 419 ಗ್ರಾಮಗಳಿಗೆ ವ್ಯಾಪಿಸಿದ ಕೊರೋನಾ..!
* ಕೇವಲ 280 ಹಳ್ಳಿಗಳು ಸೋಂಕಿನಿಂದ ಬಚಾವ್
* ಮೊದಲ ಅಲೆಯಲ್ಲಿ ಬಹುತೇಕ ಹಳ್ಳಿಗಳು ಕೊರೋನಾದಿಂದ ಮುಕ್ತ
* 2ನೇ ಅಲೆಯಲ್ಲಿ ಹಳ್ಳಿಗಳೇ ಹಾಟ್‌ಸ್ಪಾಟ್
ಹಾವೇರಿ(ಜೂ.07): ಕೊರೋನಾ ಎರಡನೇ ಅಲೆಯಲ್ಲಿ ಹಳ್ಳಿಗಳೇ ಹಾಟ್‌ಸ್ಪಾಟ್ ಆಗಿವೆ. ಜಿಲ್ಲೆಯ 699 ಕಂದಾಯ ಗ್ರಾಮಗಳ ಪೈಕಿ 419 ಗ್ರಾಮಗಳಲ್ಲಿ ಸೋಂಕು ಹರಡಿದೆ. ಮುಂಜಾಗ್ರತಾ ಕ್ರಮದಿಂದ 280 ಹಳ್ಳಿಗಳು ಮಾತ್ರ ಬಚಾವ್ ಆಗಿವೆ.
ಒಂದನೇ ಅಲೆಯಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿದ್ದ ಕೊರೋನಾ ಸೋಂಕು ಎರಡನೇ ಅಲೆಯಲ್ಲಿ ಗ್ರಾಮಗಳಲ್ಲೇ ಅಧಿಕ ಎಂಬ ಅಂಕಿ-ಅಂಶ ಲಭ್ಯವಾಗಿದೆ. ಜಿಲ್ಲೆಯ 223 ಗ್ರಾಪಂಗಳ ವ್ಯಾಪ್ತಿಯಲ್ಲಿ 699 ಗ್ರಾಮಗಳಿವೆ. ಅದರಲ್ಲಿ ಶೇ. 80ರಷ್ಟುಗ್ರಾಮಗಳಿಗೆ ಈಗಾಗಲೇ ಕೊರೋನಾ 2ನೇ ಅಲೆಯ ಸೋಂಕು ಹರಡಿದೆ. ಹಳ್ಳಿಗಳಿಗೆ ಸೋಂಕು ಹರಡುವುದನ್ನು ತಡೆಗಟ್ಟುವಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳುವಂತೆ ಸರ್ಕಾರ, ಸಚಿವರು ಸೂಚಿಸುತ್ತ ಬಂದರೂ ಸಕಾಲದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ್ದರಿಂದ ಸೋಂಕು ಹೆಚ್ಚಿದೆ.
ಲಾಕ್‌ಡೌನ್ ಹಿನ್ನೆಲೆ ನಗರಗಳಿಂದ ಅನೇಕರು ಹಳ್ಳಿಗಳಿಗೆ ಮರಳಿದ್ದಾರೆ. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈ ಬಾರಿ ನಗರಗಳಿಂದ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡದೇ ಇರುವುದು ಹಳ್ಳಿಗಳಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಆದ್ದರಿಂದ ಸೋಂಕು ಹೆಚ್ಚಳದೊಂದಿಗೆ ಸಾವು ಕೂಡ ಗ್ರಾಮೀಣ ಭಾಗದಲ್ಲಿ ಅಧಿಕವಾಗಿರುವುದು ಆತಂಕ ಮೂಡಿಸಿದೆ.
'ಕೋವಿಡ್ ಟೆಸ್ಟ್‌ಗೆ ಸಹಕರಿಸದ ಗ್ರಾಮ ಕಂಪ್ಲೀಟ್ ಲಾಕ್‌ಡೌನ್'
ಕಟ್ಟುನಿಟ್ಟು ಇಲ್ಲದ್ದರಿಂದ ಸೋಂಕು:
ಕಳೆದ ವರ್ಷ ಕೊರೋನಾ ಶುರುವಾದಾಗ ಸೋಂಕು ಹರಡದಂತೆ ಎಲ್ಲ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿತ್ತು. ಹೊರ ಜಿಲ್ಲೆ, ರಾಜ್ಯಗಳಿಂದ ಬರುವುದಕ್ಕೆ ನಿರ್ಬಂಧ, ನಗರಗಳಿಂದ ಹಳ್ಳಿಗೆ ಬರುವವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಕ್ವಾರಂಟೈನ್‌ನಲ್ಲಿ ಇರಿಸಿ ಕ್ರಮ ಕೈಗೊಳ್ಳಲಾಗಿತ್ತು.
2ನೇ ಅಲೆ ಆರಂಭವಾದ ಕೂಡಲೇ ಪಿಡಿಒ, ಆಶಾ ಕಾರ್ಯಕರ್ತೆಯರಿಗೆ ಗ್ರಾಮಕ್ಕೆ ಹೊರಗಿನಿಂದ ಬಂದವರ ಮೇಲೆ ನಿಗಾ ಇಟ್ಟು ಕ್ವಾರಂಟೈನ್ ಮಾಡಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಿಲ್ಲ. ಆದ್ದರಿಂದ ಪ್ರತಿ ಹಳ್ಳಿಗಳೂ ಕೊರೋನಾಮಯವಾಯಿತು. ಪಾಸಿಟಿವ್ ಬಂದವರು ತಮ್ಮ ಮನೆಯಲ್ಲೇ ಕ್ವಾರಂಟೈನ್ ಆದರು. ಇದು ಸೋಂಕು ಮತ್ತಷ್ಟುಹೆಚ್ಚಲು ಕಾರಣವಾಯಿತು. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಕೆಲ ನಿರ್ಬಂಧಗಳನ್ನು ಹಾಕಿ ಅನುಮತಿ ನೀಡಿದರು. ಆದರೆ ಸರ್ಕಾರ ಸೂಚಿಸಿದ್ದ 50ಕ್ಕಿಂತ ಹೆಚ್ಚಿನ ಜನರು ಸೇರದಂತೆ ತಡೆಯಲು ಯಾವ ಅಧಿಕಾರಿಗಳು ಮುಂದಾಗಲಿಲ್ಲ. ಮದುವೆಗಳಲ್ಲಿ 200ರಿಂದ 500ರಷ್ಟು ಜನರು ಸೇರುತ್ತಿದ್ದರು. ಅನೇಕರು ನಗರಗಳಲ್ಲಿ ಮದುವೆ ಮಾಡುವುದಕ್ಕಿಂತ ಹಳ್ಳಿಯಲ್ಲಿಯೇ ಮಾಡುವುದು ಸೂಕ್ತ ಎಂದು ಹಳ್ಳಿಯಲ್ಲೇ ಮದುವೆ ಸಮಾರಂಭ ಮಾಡಿದರು. ನಿಯಮ ಮೀರಿ ನೂರಾರು ಮದುವೆಗಳು ನಡೆದರೂ ಒಂದೇ ಒಂದು ದೂರನ್ನು ಸಹ ಅಧಿಕಾರಿಗಳು ದಾಖಲಿಸಲಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡಿತು.
ಯಾವಾಗ ಸೋಂಕು ಹಳ್ಳಿಗಳಲ್ಲಿಯೂ ವ್ಯಾಪಕವಾಗತೊಡಗಿತೋ ಆಗ ಕಠಿಣ ಕ್ರಮಕ್ಕೆ ಮುಂದಾಗಿ, ಮನೆ ಮನೆ ಸಮೀಕ್ಷೆ ಆರಂಭಿಸಿದರು. ಪಾಸಿಟಿವ್ ಬಂದ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಯಿತು. ಅಷ್ಟರಲ್ಲಾಗಲೇ ಹಳ್ಳಿಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿಬಿಟ್ಟಿತ್ತು.
ರಾಜಕೀಯವಾಗಿ ಕೊರೋನಾ ಬಳಸಲು ಕಾಂಗ್ರೆಸ್ ಹುನ್ನಾರ: ವಿರೂಪಾಕ್ಷಪ್ಪ ಬಳ್ಳಾರಿ
ಜನರ ನಿರ್ಲಕ್ಷ್ಯ:
ಮೊದಲ ಅಲೆಯ ಸಮಯದಲ್ಲಿ ಗ್ರಾಮಸ್ಥರೇ ಸ್ವಯಂ ಲಾಕ್‌ಡೌನ್ ಘೋಷಿಸಿಕೊಂಡಿದ್ದರು. ಬೇರೆ ಕಡೆಯಿಂದ ಗ್ರಾಮಕ್ಕೆ ಯಾರು ಪ್ರವೇಶಿಸದಂತೆ ಮುಳ್ಳು ಬೇಲಿಗಳನ್ನು ನಿರ್ಮಿಸಿಕೊಂಡಿದ್ದರು. ನಗರದಿಂದ ಗ್ರಾಮದವರೇ ಬಂದರೂ ಅವರನ್ನು ತೋಟದ ಮನೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದರು. ಅಲ್ಲದೇ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆಯ ಮೂಲಕ ಜ್ವರ, ಕೆಮ್ಮು, ನೆಗಡಿಯ ಮಾಹಿತಿ ಸಂಗ್ರಹಿಸಿ ಪಾಸಿಟಿವ್ ಲಕ್ಷಣವುಳ್ಳವರನ್ನು ಪರೀಕ್ಷೆ ಮಾಡಿ ಕ್ವಾರಂಟೈನ್ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿತ್ತು.
ಹೀಗಾಗಿ ಮೊದಲ ಅಲೆಯಲ್ಲಿ ಬಹುತೇಕ ಹಳ್ಳಿಗಳು ಕೊರೋನಾದಿಂದ ಮುಕ್ತವಾಗಿದ್ದವು. ಈ ಬಾರಿ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸದ ಪರಿಣಾಮ ಹಳ್ಳಿಗಳೇ ಹಾಟ್‌ಸ್ಪಾಟ್ ಎನಿಸಿವೆ. ಸದ್ಯ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಿರುವುದು ಆಶಾವಾದ ಹೆಚ್ಚಿಸಿದೆ.
ಹಾವೇರಿಯಲ್ಲಿ ಹೆಚ್ಚು:
ಜಿಲ್ಲೆಯಲ್ಲಿ 223 ಗ್ರಾಪಂಗಳಿದ್ದು, ಅದರಲ್ಲಿ ಹಾನಗಲ್ಲ ತಾಲೂಕಿನಲ್ಲಿ ಅತಿ ಹೆಚ್ಚು 42 ಗ್ರಾಪಂಗಳು 154 ಗ್ರಾಮಗಳಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಮಗಳು ಕೊರೋನಾದಿಂದ ಮುಕ್ತವಾಗಿವೆ. ಹಾವೇರಿ ತಾಲೂಕಿನಲ್ಲಿ 32 ಗ್ರಾಪಂಗಳಿದ್ದು, 89 ಗ್ರಾಮಗಳಿವೆ. ಇದರಲ್ಲಿ 5 ಗ್ರಾಮಗಳನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಮಗಳಲ್ಲಿ ಕೊರೋನಾ ಸೋಂಕು ಹರಡಿದೆ.