ಬೆಂಗಳೂರು [ಮಾ.12]:  ಸಾಂಕ್ರಾಮಿಕ ರೋಗವಾದ ಕೊರೋನಾ ವೈರಸ್‌ ಜನಸಂದಣಿ ಪ್ರದೇಶಗಳಲ್ಲಿ ಬಹುಬೇಗ ಹರಡುತ್ತದೆ ಎಂಬ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೇ ಮೆಟ್ರೋ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.10ಕ್ಕಿಂತ ಅಧಿಕ ಕುಸಿತ ಕಂಡುಬಂದಿದೆ.

ಪ್ರಸ್ತುತ ಪ್ರತಿ ದಿನ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 3.80 ಲಕ್ಷದಿಂದ 4 ಲಕ್ಷಕ್ಕಿಂತ ಹೆಚ್ಚಿದೆ. ಕೆಲವೊಮ್ಮೆ 4.50 ಲಕ್ಷಕ್ಕಿಂತ ಹೆಚ್ಚು ಮಂದಿ ಪ್ರಯಾಣಿಕರು ಪ್ರಯಾಣಿಸಿದ ದಾಖಲೆ ಇದೆ. ಆದರೆ, ಕೊರೋನಾ ವೈರಾಣು ಬೆಂಗಳೂರಿನಲ್ಲಿ ಪತ್ತೆಯಾದ ಬಳಿಕ ಜನಸಂದಣಿ ಪ್ರದೇಶದಲ್ಲಿ ಇರಲು ಕೂಡ ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ದಿನಕ್ಕೆ ನಾಲ್ಕು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದ ಮೆಟ್ರೋದಲ್ಲಿ ಕಳೆದೊಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಶೇ.10ಕ್ಕಿಂತ ಹೆಚ್ಚು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ರಜೆ ಘೋಷಣೆ ಮಾಡಿರುವುದು ಹಾಗೂ ಶಾಲಾ ಕಾಲೇಜು ಪರೀಕ್ಷೆಗಳು ಮತ್ತು ಕೆಲವು ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಆದೇಶಿಸಿರುವುದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿಯಲು ಕಾರಣ. ಜತೆಗೆ ಜನರಲ್ಲಿ ಹೆಚ್ಚುತ್ತಿರುವ ಕೊರೋನಾ ವೈರಸ್‌ ಸೋಂಕಿನ ಭೀತಿಯೇ ಮೆಟ್ರೋ ರೈಲಿಗೆ ಪ್ರಯಾಣಿಕರು ಬರದಿರಲು ಪ್ರಮುಖ ಕಾರಣವೆನ್ನಬಹುದು ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮ:

ಕೊರೋನಾ ಸೋಂಕು ಹರಡದಂತೆ ಈಗಾಗಲೆ ಮೆಟ್ರೋ ನಿಲ್ದಾಣಗಳಲ್ಲಿ ಸಾಕಷ್ಟುಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಟ್ಟಣೆ ಅವಧಿ ಮುಗಿದ ಕೂಡಲೇ ಡಿಪೋಗೆ ಬರುವ ಮೆಟ್ರೋ ರೈಲುಗಳನ್ನು ಸೋಂಕು ನಿವಾರಕ ರಾಸಾಯನಿಕದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಈ ಹಿಂದೆ ರಾತ್ರಿ ವೇಳೆಯಲ್ಲಿ ಮಾತ್ರ ಸ್ವಚ್ಛತೆ ಕೈಗೊಳ್ಳಲಾಗುತ್ತಿತ್ತು. ರೈಲಿನ ಆಸನಗಳು, ಕಿಟಕಿಗಳು, ದ್ವಾರಗಳು, ರೈಲಿನ ನೆಲಹಾಸು, ಹಿಡಿಕೆ ಇತ್ಯಾದಿಗಳನ್ನು ಈಗ ದಿನಕ್ಕೆ ಮೂರು ಬಾರಿ ಸೋಂಕು ನಿವಾರಕ ರಾಸಾಯನಿಕ ಬಳಸಿ ಸ್ವಚ್ಛ ಮಾಡಲಾಗುತ್ತಿದೆ.

ನಮ್ಮ ಮೆಟ್ರೋದಿಂದ ಗಿಫ್ಟ್! ಯಲಚೇನಹಳ್ಳಿ- ಅಂಜನಾಪುರಕ್ಕೆ ಮೆಟ್ರೋ ಸಿದ್ಧತೆ...

ಮೆಟ್ರೋ ನಿಲ್ದಾಣದ ಶೌಚಾಲಯಗಳಲ್ಲೂ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ಪ್ರಯಾಣಿಕರ ಉಪಯೋಗಕ್ಕೆ ಸೋಪುಗಳು, ಸ್ಯಾನಿಟೈಸರ್‌ ದ್ರಾವಣಗಳನ್ನು ಇಡಲಾಗಿದೆ. ಪೆನಾಯಿಲ್‌ ಸೇರಿದಂತೆ ಸೋಂಕು ನಿವಾರಕ ರಾಸಾಯನಿಕ ಬಳಸಿ ಎಸ್ಕಲೇಟರ್‌ಗಳು, ಎಎಫ್‌ಸಿ ದ್ವಾರಗಳು, ಲಿಫ್ಟ್‌ ಗಳು, ಟಿಕೆಟ್‌ ಕೌಂಟರ್‌ಗಳಲ್ಲೂ ಶುಚಿತ್ವ ಕಾಪಾಡಲಾಗುತ್ತಿದೆ. ಭದ್ರತಾ ತಪಾಸಣೆ ಮತ್ತು ವಸ್ತುಗಳ ತಪಾಸಣೆ ಸ್ಥಳಗಳಲ್ಲಿ ನಿಯೋಜಿಸಲಾಗಿರುವ ಸಿಬ್ಬಂದಿಗೆ ಮಾಸ್ಕ್‌ಗಳನ್ನು ನೀಡಲಾಗಿದೆ. ಪ್ರತಿ ಪಾಳಿ ಸಿಬ್ಬಂದಿ ಬದಲಾವಣೆ ಸಂದರ್ಭದಲ್ಲಿ ಆ ಸ್ಥಳದ ಸ್ವಚ್ಛ ಮಾಡಲಾಗುತ್ತಿದೆ. ಸಂಗ್ರಹವಾಗುವ ತ್ಯಾಜ್ಯವನ್ನು ಆಗಿಂದಾಗೇ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ನಾಲ್ಕು ತಾಸುಗಳಿಗೊಮ್ಮೆ ಮೆಟ್ರೋ ನಿಲ್ದಾಣವನ್ನು ಸಿಬ್ಬಂದಿ ಮೂಲಕ ಶುಚಿಗೊಳಿಸಲಾಗುತ್ತಿದೆ ಎಂದು ‘ಕನ್ನಡಪ್ರಭ’ಕ್ಕೆ ನಮ್ಮ ಮೆಟ್ರೋ ನಿಗಮ ಮಾಹಿತಿ ನೀಡಿದೆ.

ಪರಿವೀಕ್ಷಣೆಗೆ ನೇಮಕ:  ಕೊರೋನಾ ವೈರಸ್‌ ಕುರಿತು ನಿರಂತರವಾಗಿ ಪಬ್ಲಿಕ್‌ ಅನೌನ್ಸ್‌ಮೆಂಟ್‌ ಸಿಸ್ಟಂ(ಪಿಐಎಸ್‌)ಗಳ ಮೂಲಕ ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಚುರಪಡಿಸಲಾಗುತ್ತಿದೆ. ಜತೆಗೆ ಡಿಜಿಟಲ್‌ ಫಲಕಗಳಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗಿದೆ. ಪ್ರಯಾಣಿಕರು ಸೂಕ್ತ ಮಾಸ್ಕ್‌ಗಳನ್ನು ಬಳಸುವಂತೆಯೂ ತಿಳಿಸಲಾಗುತ್ತಿದೆ. ಪ್ರತಿ ನಿಲ್ದಾಣಗಳಲ್ಲಿ ಮೆಟ್ರೋ ನಿಗಮದ ಸಿಬ್ಬಂದಿ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳ ಸ್ವಚ್ಛತೆ ಕುರಿತು ಪರಿಶೀಲನೆಗೆ ಮೆಟ್ರೋ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ(ಆಪರೇಷನ್‌) ಶಂಕರ್‌ ಮಾಹಿತಿ ನೀಡಿದ್ದಾರೆ.

ಮಾರ್ಚ್ ತಿಂಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ. ಪೋಷಕರು, ವಿದ್ಯಾರ್ಥಿಗಳ ಓಡಾಟ ಕಡಿಮೆ. ಜತೆಗೆ ಕೊರೋನಾ ವೈರಸ್‌ ಭೀತಿಯಿಂದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆಯಷ್ಟೇ. ಮೆಟ್ರೋ ನಿಗಮ ಕೊರೋನಾ ವೈರಸ್‌ ಬಗ್ಗೆ ಸಾಕಷ್ಟುಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ಸುರಕ್ಷತೆಗೆ ಆದ್ಯತೆ ನೀಡಿದೆ.

-ಶಂಕರ್‌, ಕಾರ್ಯನಿರ್ವಾಹಕ ನಿರ್ದೇಶಕ, ಬಿಎಂಆರ್‌ಸಿಎಲ್‌.