ಶಿವಮೊಗ್ಗ(ಮೇ.26): ಜಿಲ್ಲೆ ಎನ್ನುವುದಕ್ಕಿಂತ ಶಿವಮೊಗ್ಗ ನಗರದ ಸಾಂಸ್ಕೃತಿಕ ಕೇಂದ್ರವಾಗಿ ರೂಪುಕೊಂಡಿದ್ದ, ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರ ಸ್ಥಾನವಾಗಿ, ಕಲಾವಿದರ ಆರಾಧ್ಯ ಮಂಟಪವಾಗಿ ಕಳೆದ ಮೂರು ದಶಕಗಳಿಂದ ಕಂಗೊಳಿಸುತ್ತಿದ್ದ ಕುವೆಂಪು ರಂಗಮಂದಿರ ಎರಡು ತಿಂಗಳಿಂದ ಸದ್ದಿಲ್ಲದೆ ಮೌನಕ್ಕೆ ಶರಣಾಗಿದೆ.

ಸದಾ ಒಂದಿಲ್ಲೊಂದು ಕಲೆಯ ಶಬ್ದ ತರಂಗಗಳನ್ನು ಅನುರಣನಗೊಳಿಸುತ್ತಲೇ ಇದ್ದ ಕುವೆಂಪು ರಂಗಮಂದಿರ ಕೊರೋನಾ ಕಾರಣಕ್ಕೆ ಸದ್ದಡಗಿಸಿಕೊಂಡಿದೆ. ಕಲೆಯ ಅಲೆಯನ್ನು ತನ್ನೊಳಗೆ ನುಂಗುತ್ತಿದೆ. ನೆನೆಪುಗಳಲ್ಲಿ ದಿನಗಳೆಯುತ್ತಿದೆ.

ಕಳೆದ 30 ವರ್ಷಗಳಿಂದ ನಿತ್ಯ ಒಂದಿಲ್ಲೊಂದು ಚಟುವಟಿಕೆಗೆ ಇದು ಹೆಸರಾಗಿತ್ತು. ಅಧಿಕಾರಿಗಳ ದೊಡ್ಡ ದೊಡ್ಡ ಸಭೆಯಿಂದ ಹಿಡಿದು, ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆ, ಯಕ್ಷಗಾನದ ಚಂಡೆಯ ಸದ್ದಿಗೆ, ಸಂಗೀತದ ರಸದೌಣಕ್ಕೆ, ಕಲಾವಿದರ ನೃತ್ಯ ಪ್ರದರ್ಶನಕ್ಕೆ, ನಾಟಕಗಳ ಜೀವಂತಿಕೆಗೆ, ಶಾಲಾ ವಾರ್ಷಿಕೋತ್ಸವದಲ್ಲಿನ ಪುಟಾಣಿಗಳ ಕಲೆಯ ಅನಾವರಣಕ್ಕೆ.. ಹೀಗೆ ಸದಾ ಒಂದಿಲ್ಲೊಂದು ಸಾಂಸ್ಕೃತಿಕತೆಗೆ ವೇದಿಕೆ ಒದಗಿಸುತ್ತಿದ್ದ ರಂಗಮಂದಿರದಲ್ಲೀಗ ನೀರವ. ಆ ಕಲೆಯ ಸದ್ದು ಈಗಿಲ್ಲವಾಗಿದೆ.

ರಂಗಮಂದಿರ ಆರಂಭವಾದ ಸರಿ ಸುಮಾರು ಮೂರು ದಶಕದ ನಂತರ ಇಂತಹ ಚಿತ್ರಣ ನಿರ್ಮಾಣಗೊಂಡಿದ್ದು ಸದ್ಯದ ಪರಿಸ್ಥಿತಿ ಗಮನಿಸಿದರೆ ಇನ್ನೊಂದೆರಡು ತಿಂಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇರ ಆಡಳಿತಕ್ಕೊಳಪಟ್ಟ ರಂಗಮಂದಿರದ ಚಟುವಟಿಕೆ ಮಾರ್ಚ್ 23 ರಿಂದ ಲಾಕ್‌ಡೌನ್‌ ಜಾರಿಯಾದ ನಂತರ ಸಂಪೂರ್ಣ ಸ್ಥಗಿತಗೊಂಡಿದೆ. ಈ ನಡುವೆ ಸರ್ಕಾರಿ ಕಾರ್ಯಕ್ರಮವಾದ ಕೆಲವೊಂದು ಜಯಂತಿಗಳು ಮಾತ್ರ ಸಾಂಕೇತಿಕವಾಗಿ ಆಚರಿಸಲ್ಪಟ್ಟಿವೆ. ಉಳಿದಂತೆ ಯಾವುದೇ ಕಾರ್ಯಕ್ರಮ ನಡೆದಿಲ್ಲ.

ಹೊರ ರಾಜ್ಯಗಳಿಂದ ಚಿಕ್ಕಮಗಳೂರು ಜಿಲ್ಲೆಗೆ 536 ಮಂದಿ ಆಗಮನ

ವಿಶೇಷವಾಗಿ ಮಾರ್ಚ್, ಏಪ್ರಿಲ್‌ ತಿಂಗಳಲ್ಲಿ ನಗರದ ವಿವಿಧ ರಂಗತಂಡಗಳಿಂದ ನಾಟಕ, ಯಕ್ಷಗಾನ, ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತಿದ್ದವು. ಇದೀಗ ಕಳೆದ ಎರಡು ತಿಂಗಳಿಂದ ರಂಗಮಂದಿರದ ಎಲ್ಲಾ ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದ್ದಿದೆಯಲ್ಲದೆ ಪೂರ್ವ ನಿಗದಿತ ಸಭೆ, ಸಮಾರಂಭಗಳು ರದ್ದಾಗಿವೆ.

ಆದಾಯವೂ ಇಲ್ಲ:

ಸಭೆ, ಸಮಾರಂಭಗಳೇ ನಿಂತು ಹೋಗಿರುವುದರಿಂದ ಕುವೆಂಪು ರಂಗಮಂದಿರದ ಆದಾಯಕ್ಕೂ ಹಿನ್ನಡೆಯಾಗಿದೆ. ರಂಗಮಂದಿರದ ಒಟ್ಟು ವಾರ್ಷಿಕ ಆದಾಯದಲ್ಲಿ ಮಾರ್ಚ್, ಏಪ್ರಿಲ್‌ ಮತ್ತು ಮೇ ತಿಂಗಳ ಚಟುವಟಿಕೆಯಿಂದಲೇ ಹೆಚ್ಚು ಬರುತ್ತಿತ್ತು. ಆದರೆ ಸಭೆ, ಸಮಾರಂಭಗಳೇ ನಿಂತು ಹೋಗಿರುವುದರಿಂದ ರಂಗಮಂದಿರದ ಆದಾಯಕ್ಕೆ ಹೊಡೆತ ಬಿದ್ದಿದೆ. 2018ರ ಮಾರ್ಚ್ ತಿಂಗಳಲ್ಲಿ 31, ಏಪ್ರಿಲ್‌ ತಿಂಗಳಲ್ಲಿ 23 ಹಾಗೂ ಮೇ ನಲ್ಲಿ 24 ಕಾರ್ಯಕ್ರಮ ನಡೆದು ಅದರಿಂದ ಕ್ರಮವಾಗಿ 1.21 ಲಕ್ಷ, 46,500 ಹಾಗೂ 73 ಸಾವಿರ ಆದಾಯ ಬಂದಿತ್ತು. 2019ರ ಮಾರ್ಚ್ ತಿಂಗಳಲ್ಲಿ 23, ಏಪ್ರಿಲ್‌ನಲ್ಲಿ 17 ಹಾಗೂ ಮೇ ನಲ್ಲಿ 16 ಕಾರ್ಯಕ್ರಮ ನಡೆದು ಅದರಿಂದ ಕ್ರಮವಾಗಿ 85,500, 26,000 ಹಾಗೂ 55,000 ರು. ಆದಾಯ ಬಂದಿತ್ತು.

ಆದರೆ 2020 ಮಾರ್ಚ್‌ನಲ್ಲಿ ಕೇವಲ 13 ಕಾರ್ಯಕ್ರಮ ನಡೆದಿದ್ದು ಅದರಿಂದ 67 ಸಾವಿರ ರು. ಆದಾಯ ಬಂದಿದೆ. ಉಳಿದಂತೆ ಏಪ್ರಿಲ್‌ ಮತ್ತು ಮೇ ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳು ರದ್ದಾಗಿದ್ದು ಅದಕ್ಕೆ ಸಂಬಂಧಿಸಿದ ಬಾಡಿಗೆ ರೂಪದ ಮುಂಗಡ ಹಣ ಮರು ಪಾವತಿಯಾಗಿದೆ. ಒಟ್ಟಾರೆ ನಗರದ ಹೃದಯ ಭಾಗದಲ್ಲಿದ್ದು ಸರ್ಕಾರಿ ಇಲಾಖೆಗಳಲ್ಲದೆ ಹತ್ತು ಹಲವು ಖಾಸಗಿ ಸಂಘ, ಸಂಸ್ಥೆಗಳ ಚಟುವಟಿಕೆಗೆ ವೇದಿಕೆಯಾಗಿದ್ದ ಕುವೆಂಪು ರಂಗಮಂದಿರದಲ್ಲಿ ಮತ್ತೆ ಹಿಂದಿನಂತೆ ಕಾರ್ಯಕ್ರಮ ನಡೆಯಲು ಮೂರ್ನಾಲ್ಕು ತಿಂಗಳೇ ಬೇಕಾಗಬಹುದೇನೋ.

ಕುವೆಂಪು ರಂಗಮಂದಿರದಲ್ಲಿ ಸದ್ಯಕ್ಕೆ ಯಾವುದೇ ಚಟುವಟಿಕೆ ನಡೆಯಲು ಅವಕಾಶ ಇಲ್ಲ. ಸರ್ಕಾರದಿಂದ ಸೂಚನೆ ಬಂದ ನಂತರವಷ್ಟೇ ಸಭೆ, ಸಮಾರಂಭಗಳಿಗೆ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆ ಇದೆ. -ಎಚ್‌.ಉಮೇಶ್‌, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ.