ಮಂಗಳೂರು/ಉಡುಪಿ (ಅ.04):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 258 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 24 ಸಾವಿರ ದಾಟಿದೆ. 9 ಮಂದಿ ಸಾವಿಗೀಡಾಗಿದ್ದಾರೆ. ಹಲವು ದಿನಗಳ ಬಳಿಕ ಸೋಂಕಿತರಿಗಿಂತ ಹೆಚ್ಚು ಮಂದಿ ಗುಣಮುಖರಾಗಿದ್ದು, 344 ಮಂದಿ ಒಂದೇ ದಿನ ಸೋಂಕು ಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 1,68,968 ಮಂದಿಯ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 24,019 ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿದೆ. ಸಾವಿನ ಸಂಖ್ಯೆ 566ಕ್ಕೆ ಏರಿಕೆಯಾಗಿದ್ದರೆ, ಪ್ರಸ್ತುತ 5744 ಮಂದಿ ಮನೆಗಳಲ್ಲಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮಾಸ್ಕ್‌ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ಇದುವರೆಗೆ ಜಿಲ್ಲೆಯಲ್ಲಿ 4361 ಇಂಥ ಪ್ರಕರಣಗಳು ಪತ್ತೆಯಾಗಿದ್ದು, 5,30,885 ರು. ದಂಡ ವಸೂಲಿ ಮಾಡಲಾಗಿದೆ.

ರಾಜ್ಯದಲ್ಲೀಗ ಯುವಕರಲ್ಲೇ ಕೊರೋನಾ ಹೆಚ್ಚು: ಪುಟ್ಟಮಕ್ಕಳು, ಹಿರಿಯರಿಗೆ ಅಪಾಯ..!

ಉಡುಪಿ ವರದಿ: ಕಳೆದೊಂದು ವಾರಕ್ಕೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಶನಿವಾರ ಇಳಿಮುಖವಾಗಿದೆ, ಆದರೆ ಸಾವಿನ ಸಂಖ್ಯೆ ಹೆಚ್ಚಾಗಿದೆ. ಶನಿವಾರ 158 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ದುರಾದೃಷ್ಟವಶಾತ್‌ 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 17,789ಕ್ಕೇರಿದ್ದರೆ, ಸಾವಿನ ಸಂಖ್ಯೆ 154 ಆಗಿದೆ.

ಖುಷಿಯ ವಿಷಯ ಎಂದರೆ ಶನಿವಾರ 297 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ, ಇದುವರೆಗೆ ಜಿಲ್ಲೆಯಲ್ಲಿ 15662 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 1943 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು 29, 67 ಮತ್ತು 65 ವರ್ಷ ವಯಸ್ಸಿನ ಪುರುಷರು, ಇತರ ಕಾಯಿಲೆಗಳ ಚಿಕಿತ್ಸೆಗೆ ಖಾಸಗಿಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿ, ಚಿಕಿತ್ಸ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.