ಬೆಂಗಳೂರು(ಅ.19):  ಕೊರೋನಾ ಸೋಂಕಿನ ಭೀತಿಯ ನಡುವೆಯೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಾರ್ಯಕ್ಕೆ 50 ವರ್ಷ ಮೇಲ್ಪಟ್ಟ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿ ಸೋಂಕಿನ ಆತಂಕಕ್ಕೆ ಒಳಗಾಗಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಆರೋಗ್ಯ ಇಲಾಖೆ 55 ವರ್ಷ ಮೇಲ್ಪಟ್ಟವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ನಗರದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಬಿಬಿಎಂಪಿಯು ಆರ್‌.ಆರ್‌.ನಗರ ಉಪ ಚುನಾವಣೆಗೆ 55 ವರ್ಷದ ಮೇಲ್ಪಟ್ಟ ಉಪನ್ಯಾಸಕರು ಹಾಗೂ ಪ್ರಾಶುಪಾಲರನ್ನು ನಿಯೋಜಿಸಿದೆ. ಇದರಿಂದ ನಿಯೋಜನೆಗೊಂಡ ಅಧಿಕಾರಿ ಸಿಬ್ಬಂದಿ ಆತಂಕಗೊಂಡಿದ್ದಾರೆ.

ಚುನಾವಣಾ ಕಾರ್ಯದಲ್ಲಿ ಭಾಗಿಯಾಗದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಚುನಾವಣಾ ಕಾರ್ಯದಲ್ಲಿ ಭಾಗಿಯಾದರೆ ಕೊರೋನಾ ಸೋಂಕು ತಗುಲಿ ಜೀವಕ್ಕೆ ಹಾನಿಯಾಗುವ ಆತಂಕವಿದೆ. ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೀಡಾಗಿದ್ದಾರೆ.

ಭಾನುವಾರ ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಮುಖ

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಡಳಿತ ವಿಭಾಗ ವಿಶೇಷ ಆಯುಕ್ತ ಮಂಜುನಾಥ, ಆರ್‌ಆರ್‌ನಗರ ಉಪ ಚುನಾವಣೆಗೆ 678 ಮತಗಟ್ಟೆಗಳಿವೆ. ಮೀಸಲು ಸಿಬ್ಬಂದಿ ಸೇರಿದಂತೆ ಸುಮಾರು 4,500 ಸಿಬ್ಬಂದಿ ಅವಶ್ಯಕವಿದೆ. ಹೀಗಾಗಿ, ಐದು ಸಾವಿರ ಅಧಿಕಾರಿ, ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿ ನೇಮಕಾತಿ ಆದೇಶ ನೀಡಲಾಗಿದೆ. ಆರೋಗ್ಯ ಸಮಸ್ಯೆ, 55 ವರ್ಷ ಮೇಲ್ಪಟ್ಟವರನ್ನು ಕೈ ಬಿಡಲಾಗಿದೆ. ತೀವ್ರ ಆರೋಗ್ಯ ಸಮಸ್ಯೆ ಇರುವವರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ಚುನಾವಣೆ ಕಾರ್ಯಕ್ಕೆ 55 ರಿಂದ 60 ವರ್ಷ ವಯೋಮಿತಿಯ ಅಧಿಕಾರಿಗಳನ್ನು ನಿಯೋಜಿಸಿಲ್ಲ. ಒಂದು ವೇಳೆ ನಿಯೋಜನೆಯಾಗಿದ್ದರೆ ಪರಿಶೀಲನೆ ಮಾಡಿ ಚುನಾವಣೆ ಕಾರ್ಯದಿಂದ ವಿನಾಯಿತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.