ಬೆಂಗಳೂರು [ಜೂ.17] :  ಈಗಾಗಲೇ ದುಬಾರಿಯಾಗಿರುವ ತರಕಾರಿ ಜೊತೆ ಈಗ ಕೊತ್ತಂಬರಿ ಸೊಪ್ಪು ಸೇರಿಕೊಂಡಿದೆ. ಅಡುಗೆಗೆ ಹೆಚ್ಚಿನ ರುಚಿ ಕೊಡುವ ಕೊತ್ತಂಬರಿ ಸೊಪ್ಪಿನ ಬೆಲೆ ಸಿಕ್ಕಾಪಟ್ಟೆಹೆಚ್ಚಾಗಿದೆ. ಕೊತ್ತಂಬರಿ ಸೊಪ್ಪು ಬೆಳೆದ ಕೆಲ ರೈತರು ಬೆಲೆ ಚೇತರಿಕೆಯಿಂದ ನಿಟ್ಟುಸಿರು ಬಿಟ್ಟರೆ, ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಕಟ್ಟು 40-50 ರು. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 80ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಹವಾಮಾನ ವೈಪರೀತ್ಯ, ಮಳೆ ಕೊರತೆಗೆ ತರಕಾರಿ ಹಾಗೂ ಸೊಪ್ಪಿನ ಇಳುವರಿ ನೆಲಕಚ್ಚಿದೆ. ಇಳುವರಿ ಕುಸಿತವಾಗಿರುವುದರಿಂದ ನಗರದ ಮಾರುಕಟ್ಟೆಗೆ ನಿತ್ಯ ಲೋಡುಗಟ್ಟಲೆ ಬರುತ್ತಿದ್ದ ತರಕಾರಿ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಸೊಪ್ಪು, ತರಕಾರಿ ಫಸಲು ಇಲ್ಲ. ಹಾಗಾಗಿ ವಾರದಿಂದ ವಾರಕ್ಕೆ ತರಕಾರಿ ಬೆಲೆ ಗಗನಮುಖಿಯಾಗುತ್ತಿದೆ.

ಕಳೆದ ತಿಂಗಳು ಕೊತ್ತಂಬರಿ ಕಟ್ಟು ಒಂದಕ್ಕೆ 15-20 ನಿಗದಿಯಾಗಿತ್ತು. ಹಾಪ್‌ಕಾಮ್ಸ್‌ನಲ್ಲಿ ಜೂನ್‌ ಮೊದಲ ವಾರದಲ್ಲಿ ಕೊತ್ತಂಬರಿ ಕೆ.ಜಿ. 70 ರು. ಇತ್ತು. ಇದೀಗ ಕೆ.ಜಿ. 227 ರು.ರವರೆಗೆ ಬೆಲೆ ದಾಖಲಿಸಿಕೊಂಡಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಚಿಲ್ಲರೆ ವ್ಯಾಪಾರಿಗಳು ಸಗಟು ಮಾರುಕಟ್ಟೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬೆಲೆ ಹೆಚ್ಚಳದಿಂದ ಕೆ.ಜಿ. ಗಟ್ಟಲೆ ತರಕಾರಿ, ಸೊಪ್ಪು ಕೊಳ್ಳುತ್ತಿದ್ದವರು ಯೋಜಿಸುತ್ತಿದ್ದಾರೆ.

ನೀರಿನ ಕೊರತೆಯಿಂದ ಕೊತ್ತಂಬರಿ ಸೊಪ್ಪು ಹೆಚ್ಚು ಬೆಳೆದಿಲ್ಲ. ಇದರಿಂದ ಸ್ಥಳೀಯವಾಗಿ ಮಾರುಕಟ್ಟೆಗೆ ಹೆಚ್ಚು ಬರುತ್ತಿಲ್ಲ. ಆಂಧ್ರಪ್ರದೇಶದಿಂದ ತರಿಸಿಕೊಳ್ಳಲಾಗುತ್ತಿದೆ. ಹಾಪ್‌ಕಾಮ್ಸ್‌ಗೆ ದಿನಂಪ್ರತಿ 400-500 ಕೆ.ಜಿ. ಸೊಪ್ಪು ಬರುತ್ತದೆ. ಇಳುವರಿ ಕಡಿಮೆವಾಗಿದ್ದು, ಬೆಲೆಯೂ ಹೆಚ್ಚಿರುವುದರಿಂದ ಪ್ರತಿದಿನ 250-300 ಕೆ.ಜಿ.ಗೆ ಇಳಿದಿದೆ. ಸಗಟು ದರ ಕಟ್ಟು ಒಂದಕ್ಕೆ 35-45 ರು. ಇದೆ. ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಆನೇಕಲ್‌ ಮತ್ತಿತರ ಭಾಗಗಳಲ್ಲಿ ಸೊಪ್ಪು ತರಿಸಲಾಗುತ್ತದೆ. ಮಳೆ ಸುರಿದರೆ ಬೆಲೆ ಕಡಿಮೆಯಾಗಲಿದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ಪ್ರಸಾದ್‌ ತಿಳಿಸಿದರು.

ಕಲಾಸಿಪಾಳ್ಯ ಮಾರುಕಟ್ಟೆಗೆ ಬರುತ್ತಿದ್ದ ಕೊತ್ತಂಬರಿ ಸೊಪ್ಪಿನ ಪ್ರಮಾಣದಲ್ಲಿ ಶೇ.90ರಷ್ಟುಕಡಿಮೆಯಾಗಿದೆ. ಪ್ರತಿದಿನ 20-25 ಲೋಡ್‌ ಸೊಪ್ಪು ಸರಬರಾಜಾಗುತ್ತಿತ್ತು. ಈಗ ಐದು ಲೋಡ್‌ಗೆ ಇಳಿದಿದೆ. ಕೆ.ಆರ್‌.ಮಾರುಕಟ್ಟೆಯಲ್ಲಿ ದೊಡ್ಡ ಕಟ್ಟು 50-60 ರು.ಗೆ ಖರೀದಿಯಾಗುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಸಬ್ಬಕ್ಕಿ ಕಟ್ಟು 28-30ರು. ಮೆಂತ್ಯೆ 25-30 ರು., ಕಟ್ಟು ಒಂದಕ್ಕೆ .4ರಿಂದ 5 ಇದ್ದ ಪುದೀನ 15-18 ರು.ಗೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಕೆ.ಜಿ.ಗಟ್ಟಲೆ ಕೊಳ್ಳುತ್ತಿದ್ದವರು ಯೋಚಿಸುತ್ತಿದ್ದಾರೆ. ಸೊಪ್ಪು, ತರಕಾರಿಗಳ ದರ ಕೆ.ಜಿ.ಗೆ 10-20ರಷ್ಟುಏರಿಕೆ ಕಂಡಿದೆ ಎಂದು ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣು ಸರಬರಾಜುದಾರ ರಾಧಾಕೃಷ್ಣ ಹೇಳಿದರು

ವರದಿ :  ಕಾವೇರಿ ಎಸ್‌.ಎಸ್‌.