ಗುತ್ತಿಗೆದಾರರು ಬನ್ನೇರುಘಟ್ಟ- ಅಂಜನಾಪುರ ರಸ್ತೆ ಅಗೆದು ಹಾಗೇ ಬಿಟ್ಟಿದ್ದು, ರಸ್ತೆ ಅಪಘಾತಕ್ಕೆ ಗುತ್ತಿಗೆದಾರರೇ ಹೊಣೆ ಎಂದು ಬಿಡಿಎ ನೋಟಿಸ್‌ ನೀಡಿದೆ.

ಬೆಂಗಳೂರು (ಜು.28): ಬನ್ನೇರುಘಟ್ಟರಸ್ತೆಯಿಂದ ಅಂಜನಾಪುರ ಬಿಡಿಎ ಬಡಾವಣೆ ಮೂಲಕ ಕನಕಪುರ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಯಾವುದೇ ಅಪಘಾತ ಅಥವಾ ಅವಘಢ ಸಂಭವಿಸಿದಲ್ಲಿ ಸಂಬಂಧಪಟ್ಟಗುತ್ತಿಗೆದಾರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಎಚ್ಚರಿಕೆ ನೀಡಿದ್ದು ನೋಟಿಸ್‌ ಜಾರಿಗೊಳಿಸಿದೆ. ಬನ್ನೇರುಘಟ್ಟರಸ್ತೆಯಿಂದ ಅಂಜನಾಪುರ ಬಿಡಿಎ ಬಡಾವಣೆ ಮೂಲಕ ಕನಕಪುರ ರಸ್ತೆಗೆ ಸಂಪರ್ಕಿಸುವ 13 ಕಿ.ಮೀ ರಸ್ತೆ ನಿರ್ಮಾಣಕ್ಕೆ .13.55 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿತ್ತು. ಇದನ್ನು ಗುತ್ತಿಗೆ ಪಡೆದಿರುವ ಮೆ.ಗಣಪತಿ ಸ್ಟೋನ್‌ ಕ್ರಷರ್ಸ್‌ ಸಂಸ್ಥೆಗೆ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಿ ನವೆಂಬರ್‌ ಅಂತ್ಯಕ್ಕೆ (9 ತಿಂಗಳು) ಪೂರ್ಣಗೊಳಿಸುವುದಾಗಿ ತಿಳಿಸಿತ್ತು. ಆದರೆ, ಈವರೆಗೆ ಕೇವಲ 2 ಕಿ.ಮೀ. ಡಾಂಬರೀಕರಣ ಮಾಡಿದ್ದು, ಉಳಿದ ರಸ್ತೆಯಲ್ಲಿ ಮಣ್ಣನ್ನು ಅಗೆದು ಹಾಗೆಯೇ ಬಿಡಲಾಗಿದೆ.

ಅನೇಕ ಬಾರಿ ಮೌಖಿಕವಾಗಿ ಕಾಮಗಾರಿಯನ್ನು ತುರ್ತಾಗಿ ಮಾಡಿ ಮುಗಿಸುವಂತೆ ಕೋರಿದ್ದರೂ ಸಹ ಗುತ್ತಿಗೆ ಪಡೆದಿರುವ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಂಡಿಲ್ಲ. ಈ ರಸ್ತೆಯಲ್ಲಿ ಸಾರ್ವಜನಿಕರು, ವಾಹನಗಳು ಮತ್ತು ಆ್ಯಂಬುಲೆನ್ಸ್‌ ಸಂಚರಿಸಲು ತುಂಬಾ ತೊಂದರೆ ಅನುಭವಿಸುತ್ತಿವೆ. ಕಾಮಗಾರಿ ಸ್ಥಳದಲ್ಲಿ ಯಾವುದೇ ರಕ್ಷಣಾತ್ಮಕ ವ್ಯವಸ್ಥೆಯನ್ನೂ ಮಾಡಿಲ್ಲ. ಆದ್ದರಿಂದ ಯಾವುದೇ ಅಪಘಾತ, ಅವಘಡ ಸಂಭವಿಸಿದ್ದಲ್ಲಿ ಗುತ್ತಿಗೆದಾರರನ್ನೇ ನೇರ ಜವಾಬ್ದಾರರನ್ನಾಗಿ ಮಾಡುವುದಾಗಿ ಬಿಡಿಎ ನೋಟಿಸ್‌ನಲ್ಲಿ ಎಚ್ಚರಿಸಿದೆ.

ಇದೇ ಸಂಸ್ಥೆಗೆ ಮತ್ತೊಂದು ಟೆಂಡರ್‌?ಅಂಜನಾಪುರ ಬಡಾವಣೆಯಲ್ಲಿ ನಿಗದಿತ ಅವಧಿಗೆ ಕಾಮಗಾರಿ ಮಾಡದೇ, ಅರ್ಧಕ್ಕೆ ಸ್ಥಗಿತಗೊಳಿಸಿರುವ ಗಣಪತಿ ಸ್ಟೋನ್ಸ್‌ ಕ್ರಷರ್ಸ್‌ ಗುತ್ತಿಗೆ ಸಂಸ್ಥೆಗೆ ಬಿಡಿಎ ಮತ್ತೊಂದು ಕಾಮಗಾರಿಯ ಗುತ್ತಿಗೆ ನೀಡಲು ಸಿದ್ಧತೆ ನಡೆಸಿದೆ. ಕಳೆದ ಮೂರು ದಿನಗಳ ಹಿಂದೆ ಶಿವರಾಮ ಕಾರಂತ ಬಡಾವಣೆಗೆ ಎಂಟು ಬ್ಲಾಕ್‌ಗಳಲ್ಲಿ .2,800 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಒದಗಿಸುವ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಇದರಲ್ಲಿ ಒಂದು ಬ್ಲಾಕ್‌ಗೆ ಮೂಲ ಸೌಕರ್ಯ ಒದಗಿಸುವ ಕಾಮಗಾರಿಯನ್ನು ಇದೇ ಸಂಸ್ಥೆಗೆ ನೀಡಲು ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಒಂದು ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಹೊಸ ಟೆಂಡರ್‌ ನೀಡಬಾರದು ಎಂದು ಅಂಜನಾಪುರ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.