Kolar : ಸರ್ಕಾರಿ ಜಮೀನಿನಲ್ಲಿ ಅಕ್ರಮ ಲೇಔಟ್ ನಿರ್ಮಾಣ
ಪಟ್ಟಣ ಸುತ್ತಮುಲ್ಲಿನ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮವಹಿಸದೆ ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಮೇಶ್ ಕೆ.
ಬಂಗಾರಪೇಟೆ (ಡಿ.30): ಪಟ್ಟಣ ಸುತ್ತಮುಲ್ಲಿನ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮವಹಿಸದೆ ಮೌನಕ್ಕೆ ಜಾರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಟ್ಟಣದ ಶ್ಯಾಂ ಆಸ್ಪತ್ರೆ (Hospital) ರಸ್ತೆಯಲ್ಲಿರುವ ಸರ್ವೆ ನಂ 197ರಲ್ಲಿ ನೂರಾರು ಎಕರೆ ಸರ್ಕಾರಿ ಜಮೀನಿದ್ದು ಅದರಲ್ಲಿ ತಾಲೂಕು ಆಡಳಿತ ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ತಲಾ ಹತ್ತು ಗುಂಟೆ ಜಾಗ ನೀಡಿದೆ. ಇನ್ನು ಉಳಿದ ಜಾಗಕ್ಕೆ (Land) ಸರ್ಕಾರ ಬೇಲಿ ಹಾಕದೆ ಬಿಟ್ಟಿರುವುದರಿಂದ ಈ ಜಮೀನಿನ ಮೇಲೆ ರಿಯಲ್ ಎಸ್ಟೇಟ್ ಮಾಫಿಯ ಕಣ್ಣುಹಾಕಿದೆ.
ಸರ್ಕಾರಿ ಜಾಗದಲ್ಲಿ ಬಡಾವಣೆ ನಿರ್ಮಾಣ
ಸರ್ವೆ ನಂ. 197 ಅಕ್ಕಪಕ್ಕ ಜಮೀನುಗಳನ್ನು ಅಲ್ಪಪ್ರಮಾಣದಲ್ಲಿ ಖರೀದಿಸಿ ಬಳಿಕ ಪಕ್ಕದಲ್ಲೆ ಇರುವ ಸರ್ಕಾರಿ ಜಮೀನಲ್ಲಿ 4 ಎಕರೆಗೆ ಬೇಲಿ ಹಾಕಿಕೊಂಡು ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿ ಲಕ್ಷಾಂತ ರು.ಗಳಿಗೆ ಮಾರಾಟ ಮಾಡುವ ದಂದೆ ನಿರಂತರವಾಗಿ ಸಾಗಿದ್ದರೂ ತಾಲೂಕು ಆಡಳಿತ ಕಣ್ಣಿದ್ದೂ ಕಾಣದಂತೆ ವರ್ತಿಸುತ್ತಿದೆ. ಸರ್ವೆ ನಂ 197ರಲ್ಲಿ ಈಗಾಗಲೇ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ನುಂಗಿ ಈಗಾಗಲೇ ಮಾರಾಟ ಮಾಡಿದ್ದಾರೆ.
ಇದೇ ರೀತಿ ತಾಲೂಕಿನ ಡಿಕೆಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ಜಮೀನಿ ಭೂ ಕಬಳಿಕೆ ಆಗುತ್ತಿದೆ ಇದಕ್ಕೆ ಸಾಕ್ಷಿಯಾಗಿ ಡಿಕೆಹಳ್ಳಿ ಫ್ಲಾಂಟೇಷನ್ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೆ ನಂ.58ರಲ್ಲಿ ಸರ್ಕಾರದ ಖರಾಬು 11.09 ಎಕರೆ ಭೂ ಪ್ರದೇಶವನ್ನು ಹೊಂದಿದೆ ಎಂದು ಕಂದಾಯ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ ಈ ಜಮೀನು ರಾತ್ರೋರಾತ್ರಿ ಮಾಯವಾಗುತ್ತಿದೆ. ಸರ್ವೆ ನಂ.58ರಲ್ಲಿ 11.09 ಎಕರೆ ಜಮೀನಿನಲ್ಲಿ ಎಲ್ಲವೂ ಖಾಲಿಯಾಗಿದೆ. ಇದರಲ್ಲಿ ಉಳಿದಿರುವುದು ಕೇವಲ ಬೃಹತ್ ಗಾತ್ರದ ರಾಜಕಾಲುವೆ ಮಾತ್ರ.
ಇದರಲ್ಲಿಯೂ ಕೆಲವು ಕಡೆ ಒತ್ತುವರಿಯಗಿದ್ದು ಅಕ್ರಮ ಲೇಔಟ್ ಮಾಡಿಕೊಂಡು ನಿವೇಶನಗಳಿಗೆ ಗ್ರಾಪಂನಲ್ಲಿ ಇ ಸ್ವತ್ತು ಮಾಡಿಕೊಂಡು ಮನೆಗಳನ್ನು ನಿರ್ಮಿಸಲಾಗಿದೆ. ಹೀಗೆ ಪಟ್ಟಣ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದರೂ ತಾಲೂಕು ಆಡಳಿತ ಏಕೆ ಕ್ರಮವಹಿಸಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ.
ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ವೆ ನಂ.197ರಲ್ಲಿ ಒತ್ತುವರಿಯಾಗಿರುವ ಬಗ್ಗೆ ದೂರು ಬಂದಿದೆ, ಈಗಾಗಲೇ ಸರ್ವೆ ಮಾಡಲು ಸೂಚಿಸಲಾಗಿದೆ. ಒತ್ತುವರಿ ಕಂಡು ಬಂದರೆ ತೆರವು ಖಚಿತ.
ದಯಾನಂದ್, ತಹಸೀಲ್ದಾರ್
ಒತ್ತುವರಿ ಸರ್ಕಾರಿ ಭೂಮಿ ಗುತ್ತಿಗೆ ಮಸೂದೆಗೆ ಅಸ್ತು
ವಿಧಾನ ಪರಿಷತ್ (ಡಿ.29) : ಸರ್ಕಾರಿ ಭೂಮಿ ಒತ್ತುವರಿ ಮಾಡಿ ಪ್ಲಾಂಟೇಶನ್ ಬೆಳೆ ಬೆಳೆಯುತ್ತಿರುವ ರೈತ ಕುಟುಂಬಕ್ಕೆ ಒತ್ತುವರಿ ಜಾಗವನ್ನು ಗುತ್ತಿಗೆ ನೀಡುವ ‘ಕರ್ನಾಟಕ ಭೂ ಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ-2022’ಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ನೀಡಿತು.
ಕಂದಾಯ ಸಚಿವ ಆರ್.ಅಶೋಕ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿ, ರಾಜ್ಯದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಭಾಗಗಳಲ್ಲಿ ಕಾಫಿ, ಏಲಕ್ಕಿ ವೆಣಸು, ಟೀ ಬೆಳೆಯಲಾಗುತ್ತಿದೆ. ಈ ಪ್ಲಾಂಟೇಶನ್ ಬೆಳೆಗಾರರು ಐದಾರು ದಶಕಗಳಿಂದ ತಮ್ಮ ಜಮೀನಿನ ಮಧ್ಯೆ ಸರ್ಕಾರಿ ಜಮೀನು ಒತ್ತುವರಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಈ ಜಮೀನನ್ನು ತೆರವುಗೊಳಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಆ ಒತ್ತುವರಿ ಜಮೀನನನ್ನು ಷರತ್ತಿನ ಮೇಲೆ ಒಂದು ಕುಟುಂಬಕ್ಕೆ 30 ವರ್ಷಕ್ಕೆ ಗುತ್ತಿಗೆ ನೀಡಲಾಗುವುದು. ಈ 30 ವರ್ಷದ ಗುತ್ತಿಗೆಗೆ ಒಂದೇ ಬಾರಿ ನಿಗದಿತ ಹಣವನ್ನು ಸರ್ಕಾರಕ್ಕೆ ಪಡೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಆದಾಯವೂ ಬರಲಿದೆ ಎಂದರು.