ಬೆಂಗಳೂರು ನಗರದಲ್ಲಿ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ ಸುರಂಗ ಮಾರ್ಗ ರಸ್ತೆಯನ್ನು ‘ಬೂಟ್‌’ ಮಾದರಿಯಲ್ಲಿ ಟೆಂಡರ್‌ ಆಹ್ವಾನಿಸಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು (ಜೂ.06): ಬೆಂಗಳೂರು ನಗರದಲ್ಲಿ ಹೆಬ್ಬಾಳದ ಎಸ್ಟೀಮ್‌ ಮಾಲ್‌ನಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ ₹17,780 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸುರಂಗ ಮಾರ್ಗ ರಸ್ತೆಯನ್ನು (ಟನಲ್‌ ರಸ್ತೆ) ‘ಬೂಟ್‌’ ಮಾದರಿಯಲ್ಲಿ ಟೆಂಡರ್‌ ಆಹ್ವಾನಿಸಿ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೂಟ್‌ (ಬ್ಯುಲ್ಡ್, ಓನ್‌, ಆಪರೇಟ್‌ ಆ್ಯಂಡ್‌ ಟ್ರಾನ್ಸ್‌ಫರ್) ಮಾದರಿಯಲ್ಲಿ ಜಾಗತಿಕ ಟೆಂಡರ್‌ ಆಹ್ವಾನಿಸಲು ನಿರ್ಧರಿಸಿದ್ದು, ಗುತ್ತಿಗೆ ಪಡೆಯುವ ಕಂಪನಿಯು ನಿರ್ಮಾಣಕ್ಕೆ ನಿರ್ದಿಷ್ಟ ಪ್ರಮಾಣದ ಬಂಡವಾಳ ಹೂಡಬೇಕಾಗುತ್ತದೆ. 30 ವರ್ಷಗಳ ಕಾಲ ಸಂಬಂಧಪಟ್ಟ ಟನಲ್‌ ರಸ್ತೆಯ ಮಾಲೀಕತ್ವ ಪಡೆಯಲಿದೆ. ಈ ಅವಧಿಯಲ್ಲಿ ಟೋಲ್‌ ವಿಧಿಸಿ ಹಣ ಸಂಗ್ರಹ ಮಾಡಲಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ಎಸ್ಟೀಮ್‌ ಮಾಲ್‌ ಜಂಕ್ಷನ್‌ನಿಂದ ಎಚ್‌ಎಸ್‌ಆರ್ ಬಡಾವಣೆ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಉತ್ತರ-ದಕ್ಷಿಣ ಕಾರಿಡಾರ್‌ ಯೋಜನೆಯನ್ನು ಎರಡು ಪ್ಯಾಕೇಜ್‌ಗಳ ಅಡಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಇದನ್ನು ಯಾವ ಮಾದರಿಯಲ್ಲಿ ಟೆಂಡರ್‌ ವಹಿಸಬೇಕು ಎಂಬ ಬಗ್ಗೆ ಗುರುವಾರ ಚರ್ಚಿಸಿದ್ದು, ಬೂಟ್‌ ಮಾದರಿಯ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. 16.7 ಕಿ.ಮೀ. ಉದ್ದದ ಸುರಂಗ ಮಾರ್ಗ ರಸ್ತೆಯನ್ನು ನಿರ್ಮಾಣ ಮಾಡಿದ ಸಂಸ್ಥೆಯು 30 ವರ್ಷ ರಸ್ತೆಯ ಮಾಲೀಕತ್ವ ಅನುಭವಿಸಲಿದೆ ಎಂದು ತಿಳಿಸಿದರು.

ಇದೇ ವೇಳೆ ಟನಲ್‌ ರಸ್ತೆಗೆ ಮೂರು ಪ್ರವೇಶ ಹಾಗೂ ಮೂರು ನಿರ್ಗಮನ ಪ್ರಸ್ತಾಪಿಸಲಾಗಿದೆ. ಶೀಘ್ರಗತಿಯಲ್ಲಿ ಯೋಜನೆ ಪೂರ್ಣಗೊಳಿಸುವ ಸಲುವಾಗಿ ಟೆಂಡರ್‌ ಪಡೆಯುವವರಿಗೆ 26 ತಿಂಗಳಲ್ಲಿ ಸುರಂಗ ಮಾರ್ಗ ಕೊರೆಯುವುದು ಹಾಗೂ 12 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಲು ತೀರ್ಮಾನಿಸಿರುವುದಾಗಿ ಮೂಲಗಳು ತಿಳಿಸಿವೆ.

ಕಸದ ಟೆಂಡರ್‌ ತಿದ್ದುಪಡಿ: ಬಿಬಿಎಂಪಿ ವ್ಯಾಪ್ತಿಯ ಕಸ ಸಂಗ್ರಹಣೆ ಹಾಗೂ ನಿರ್ವಹಣೆಗೆ 2024ರ ಸೆಪ್ಟೆಂಬರ್‌ನಲ್ಲಿ ಕರೆದಿದ್ದ ನಾಲ್ಕು ಪ್ಯಾಕೇಜ್‌ಗಳ ಟೆಂಡರ್‌ನ್ನು ಎರಡು ಪ್ಯಾಕೇಜ್‌ಗೆ ಸೀಮಿತಗೊಳಿಸಿ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಯನ್ನು ರದ್ದುಪಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

1 ಲಕ್ಷ ಬಹುಮಹಡಿ ಮನೆ ಬಡ್ಡಿ ಸಬ್ಸಿಡಿಗೆ ಒಪ್ಪಿಗೆ: ಮುಖ್ಯಮಂತ್ರಿಯವರ 1 ಲಕ್ಷ ಬಹುಮಹಡಿ ವಸತಿ ಯೋಜನೆಯ ಫಲಾನುಭವಿಗಳು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ಪಾವತಿಸಬೇಕಾಗಿರುವ ಬಡ್ಡಿಯ ಶೇ.3ರಿಂದ 5 ರಷ್ಟು ಬಡ್ಡಿಯನ್ನು ಸರ್ಕಾರವೇ ಸಹಾಯಧನದ ಮೂಲಕ ಪಾವತಿಸಲು ಒಪ್ಪಿಗೆನೀಡಿದೆ. 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ 45,125 ಒನ್‌ ಬಿಎಚ್‌ಕೆ ಮನೆ ನಿರ್ಮಾಣ ಮಾಡಲಾಗಿದೆ. ಈ ಮನೆಗಳ ಮಾಸಿಕ ಕಂತು ಪಾವತಿಸಲು ಬಡವರಿಗೆ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾಲದ ಬಡ್ಡಿಯಲ್ಲಿ ಶೇ.3ರಿಂದ 5 ರಷ್ಟು ಮೊತ್ತವನ್ನು ಸಹಾಯಧನವಾಗಿ ಸರ್ಕಾರದಿಂದ ಪಾವತಿಸಲು ತೀರ್ಮಾನಿಸಲಾಗಿದೆ. ಮಾಸಿಕ ಕಂತಿನ ಬಡ್ಡಿ ಭಾಗದಲ್ಲಿ ₹3,000 ಮಿತಿಗೆ ಒಳಪಟ್ಟು ಸರ್ಕಾರದಿಂದ ಒಟ್ಟು ಸಾಲದ ಬಡ್ಡಿಯಲ್ಲಿ ಶೇ.3 ರಿಂದ 5ರವರೆಗೆ ಪಾವತಿಸಲು ಸಂಪುಟ ಅನುಮೋದನೆ ನೀಡಿದೆ.