ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ
ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ್ ಒದಗಿಸಿದ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು, ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಭಾರತ ಸಂವಿಧಾನ'' ದಿನಾಚರಣೆಯ ವಿಶೇಷತೆ ಆಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.
ತುಮಕೂರು : ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ್ ಒದಗಿಸಿದ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು, ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಭಾರತ ಸಂವಿಧಾನ'' ದಿನಾಚರಣೆಯ ವಿಶೇಷತೆ ಆಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಗ್ರಂಥಾಲಯದ ಸಭಾಂಗಣದಲ್ಲಿ ಅಯೋಜಿಸಲಾಗಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳು, ಅಧಿಕಾರಿಗಳು, ಶ್ರೀಮಂತರು ಸೇರಿದಂತೆ ದೇಶದ ಎಲ್ಲಾ ಜನರಿಗೂ ಕಾನೂನು ಅನ್ವಯವಾಗುತ್ತದೆ. ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. 74 ವರ್ಷಗಳು ಸಂದ ಈ ಸುಸಂದರ್ಭದಲ್ಲಿ ದೇಶದ ಸರ್ವೊಚ್ಚ ನ್ಯಾಯಾಲದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯನ್ನು ರಾಷ್ಟಪತಿಗಳು ಆನಾವರಣ ಮಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ್ ಮಾತನಾಡಿ, ಭಗವದ್ಗೀತೆ, ಖುರಾನ್, ಬ್ಯೆಬಲ್ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗ್ರಂಥಗಳ ಶ್ರೇಷ್ಠ ಚಿಂತನೆಯ ಸಾರವನ್ನು ಭಾರತದ ಸಂವಿಧಾನ ಹೊಂದಿದ್ದು, ವಿವಿಧ ಸಂಸ್ಕೃತಿ, ಭಾಷೆಗಳನ್ನು ಒಳಗೊಂಡ ಭಾರತೀಯರನ್ನು ಒಗ್ಗೂಡಿಸುವ ಜತೆಗೆ ಭಾರತೀಯರಲ್ಲಿ ಮಾನವೀಯ ಗುಣಗಳನ್ನು ಮೂಡಿಸುವ ಹೊಣೆಗಾರಿಕೆಯನ್ನು ಸಂವಿಧಾನ ಯಶಸ್ವಿಯಾಗಿ ನಿಭಾಯಿಸಿದೆ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯಾ, ವಾಕ್ ಸ್ವಾತಂತ್ರ್ಯ, ಸಾಮಾಜಿಕ, ಆರ್ಥಿಕ, ಸಮಾನತೆ, ಭ್ರಾತೃತ್ವ, ಪರಸ್ಪರ ವಿಶ್ವಾಸ ಹಾಗೂ ಎಲ್ಲಾ ಧರ್ಮೀಯರಿಗೆ ಗೌರವ ಹೀಗೆ ಎಲ್ಲಾ ವಿಚಾರಗಳು ಸಂವಿಧಾನದ ಪ್ರಸ್ತಾವನೆಯಲ್ಲಿ ಒಳಗೊಂಡಿದ್ದು ಸಂವಿಧಾನ ಎಲ್ಲರಿಗೂ ದಾರಿದೀಪವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅಂಕಣ ಬರಹಗಾರ ಶಿವಸುಂದರ್, ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು ಎಂದರು.
ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಬಿ.ಆರ್.ಅಂಬೇಡ್ಕರ್, ಕೆ.ಎಂ.ಮುನ್ಷಿ, ಮೊಹಮ್ಮದ್ ಸಾದುಲ್ಲಾ, ಟಿ.ಟಿ. ಕೃಷ್ಣಮಾಚಾರಿ ಮತ್ತು ಡಿ.ಪಿ.ಖೇತಾನ್ ಸೇರಿದಂತೆ ಕರಡು ಸಮಿತಿಯು ಏಳು ಸದಸ್ಯರನ್ನು ಹೊಂದಿತ್ತು, ಮೊದಲ ಸಭೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು, ವಿಶ್ವದಲ್ಲೇ ಶ್ರೇಷ್ಠವಾದ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾರೂ ಮರೆಯಲಾಗದ ಗಮನಾರ್ಹ ಕಾರ್ಯವನ್ನು ಮಾಡಿ ವಿಶ್ವದ ಶ್ರೇಷ್ಠ ಪುರುಷರಾಗಿದ್ದಾರೆ ಎಂದರು.
ಕಾರ್ಯಕ್ರಮ ನಿರೂಪಿಸಿ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕಿ ತನುಜಾ ಮಾತನಾಡಿದರು . ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರೇಷ್ಮೇ ಇಲಾಖೆಯ ಉಪನಿರ್ದೇಶಕರಾದ ಬಾಲಕೃಷ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ರವೀಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತ್ಯಾಗರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ್ .ಜಿ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ರಾಜು ಬಿ, ಅಂಬೇಡ್ಕರ್ ಅರ್ಮಿ ಜಿಲ್ಲಾಧ್ಯಕ್ಷ ಶಿವರಾಜು ಎಸ್, ಡಿಎಸ್.ಎಸ್ ಮುಖಂಡ ತಿಮ್ಮಯ್ಯ, ಪ್ರಾಧ್ಯಾಪಕ ಡಾ.ವಿಜಯ, ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಸಹ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯ ಸ್ಥಾಪಿಸಲು ಕ್ರಮವಹಿಸುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಪರಮೇಶ್ವರ್ ಸೂಚಿಸಿದ್ದು, ಪ್ರತಿಮೆಯ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.
- ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ
ದೇಶದಲ್ಲಿ ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಸಂವಿಧಾನವು ಸಹಾಯ ಮಾಡುತ್ತದೆ. ಅವಕಾಶಗಳು ಎಲ್ಲಾರಿಗೂ ಸಮಾನವಾಗಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕಂಡ ಕನಸನ್ನು ನನಸಾಗಿಸುವ ಹೊಣೆ ಯುವಜನಾಂಗದ ಮೇಲಿದೆ.
- ನ್ಯಾ. ನೂರುನ್ನೀಸ್, ಹಿರಿಯ ಸಿವಿಲ್ ನ್ಯಾಯಾಧೀಶರು