Asianet Suvarna News Asianet Suvarna News

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 13 ಬಾರಿ ‘ಕೈ’, 4 ಬಾರಿ ‘ಕಮಲ’ಕ್ಕೆ ಜೈ!

ಮೈಸೂರು ಲೋಕಸಭಾ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ 4 ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

Congress won  13 Times  BJP got Victory 4 Times in Mysuru SNR
Author
First Published Mar 22, 2024, 11:02 AM IST

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರು ಲೋಕಸಭಾ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ 4 ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಕಾಂಗ್ರೆಸ್, ಜನತಾ ಪರಿವಾರ, ಬಿಜೆಪಿ- ಹೀಗೆ ಈ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ನಡೆಯುತ್ತಿತ್ತು. 2019 ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹೋರಾಟ ನಡೆದಿತ್ತು. ಈ ಬಾರಿ ಕೂಡ ಅವರಿಬ್ಬರ ನಡುವೆಯೇ ನೇರ ಹೋರಾಟ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಇದಕ್ಕೆ ಕಾರಣ.

ಮೈಸೂರು ಮೊದಲೆರಡು ಚುನಾವಣೆಗಳಲ್ಲಿ ದ್ವಿಸದಸ್ಯ ಕ್ಷೇತ್ರವಾಗಿತ್ತು. 1962 ರಲ್ಲಿ ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರ ರಚನೆಯಾದ ನಂತರ ಮೈಸೂರು ಏಕ ಸದಸ್ಯ ಸಾಮಾನ್ಯ ಕ್ಷೇತ್ರವಾಯಿತು.

1952, 1957 ರಲ್ಲಿ ಅವಿಭಜಿತ ಮೈಸೂರು ಜಿಲ್ಲೆಗೆ, 1962 ರಿಂದ ಮೈಸೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರಕ್ಕೆ ಸೀಮಿತವಾಗಿದ್ದ ಕ್ಷೇತ್ರ. 2009 ರಿಂದ ಮೈಸೂರಿನ 6 ಹಾಗೂ ಕೊಡಗಿನ 2 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆ ಮುಂಚೆ ಮಂಗಳೂರು ಕ್ಷೇತ್ರಕ್ಕೆ ಸೇರಿತ್ತು.

ಒಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಮೈಸೂರು ಜಿಲ್ಲೆಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಪಟ್ಟಣ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕ ಸಭಾ ಕ್ಷೇತ್ರದಲ್ಲಿ ಉಳಿದರೆ, ಎಚ್.ಡಿ. ಕೋಟೆಯನ್ನು ಚಾಮರಾಜನಗರ, ಕೆ.ಆರ್. ನಗರವನ್ನು ಮಂಡ್ಯಕ್ಕೆ ಸೇರಿಸಲಾಯಿತು. ಕೊಡಗಿನ ಮಡಿಕೇರಿ ಮತ್ತು ವಿರಾಜಪೇಟೆ ಮೈಸೂರಿಗೆ ಸೇರ್ಪಡೆಯಾದವು.

ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ಆಯೋಗದ ವರದಿಯಂತೆ ಮೈಸೂರು ಜಿಲ್ಲೆಯ ಬನ್ನೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಗಳು ರದ್ದಾಗಿದ್ದು ಇದಕ್ಕೆ ಕಾರಣ. ವರುಣ ವಿಧಾನಸಭಾ ಕ್ಷೇತ್ರವನ್ನು ಹೊಸದಾಗಿ ರಚಿಸಲಾಯಿತು. ಅದನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಸಲಾಯಿತು. ಕೊಡಗಿನ ಸೋಮವಾರಪೇಟೆ ವಿಧಾನಸಭಾ ಕ್ಷೇತ್ರ ಕೂಡ ರದ್ದಾಯಿತು. ಕೊಡಗಿನಿಂದ ಈವರೆಗೆ ಸಿ.ಎಂ. ಪೂಣಚ್ಛ ಅವರು ಮಾತ್ರ ಸಂಸದರಾಗಿದ್ದರು.

1952 ರಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ (ಕೆಎಂಪಿಪಿ) ಎಂ.ಎಸ್. ಗುರುಪಾದಸ್ವಾಮಿ ಗೆದ್ದಿದ್ದನ್ನು ಹೊರತುಪಡಿಸಿದರೆ 1996 ರವರೆಗೆ ಮೈಸೂರು ಕಾಂಗ್ರೆಸ್ಸಿನ ಭದ್ರಕೋಟೆ. 1998, 2004, 2014, 2019 ರಲ್ಲಿ ಬಿಜೆಪಿಯು ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ, ‘ಕಮಲ ’ ಅರಳಿಸಿದೆ. 1998 ರಿಂದ 2014 ರವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಣ್ಣಾಮುಚ್ಚಾಲೆ ನಡೆದಿದೆ. ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಕಾಂಗ್ರೆಸ್ ಎಂಬಂತೆ ಈ ನಾಲ್ಕು ಅವಧಿಯಲ್ಲಿ ಫಲಿತಾಂಶ ಬಂದಿತ್ತು. ಆದರೆ 2019 ರಲ್ಲಿ ಬಿಜೆಪಿ ಸತತ ಎರಡನೇ ಗೆಲವು ದಾಖಲಿಸಿತು.

ಮೈಸೂರನ್ನು ಆಳಿದ ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ರಲ್ಲಿ ರಾಜಕಾರಣ ಪ್ರವೇಶ ಮಾಡಿದ ನಂತರ ‘ರಾಜರ ಕೋಟೆ’ಯಾಗಿತ್ತು. ಕಾಂಗ್ರೆಸ್ ಹಾಗೂ ರಾಜರ ಕೋಟೆಗೆ ಲಗ್ಗೆ ಹಾಕುವುದರಲ್ಲಿ ಬಿಜೆಪಿ ನಾಲ್ಕು ಬಾರಿ ಯಶಸ್ವಿಯಾಗಿದೆ. 1998 ರವರೆಗೆ ಆ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗುತ್ತಿರಲಿಲ್ಲ ಎಂಬುದು ಗಮನಾರ್ಹ. ತೋಂಟದಾರ್ಯ ಕಾಯಂ ಅಭ್ಯರ್ಥಿ ಎಂಬಂತೆ ಆಗಿದ್ದರು.

ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಜನತಾ ಪರಿವಾರ ಈ ಕ್ಷೇತ್ರದಲ್ಲಿ ಈವರೆಗೆ ಖಾತೆ ತೆರೆದಿಲ್ಲ. 1996 ರವರೆಗೆ ಆ ಪಕ್ಷಕ್ಕೆ ಎರಡನೇ ಸ್ಥಾನ ಕಾಯಂ. 1998, 1999, 2009 ಹಾಗೂ 2014 ರಲ್ಲಿ ತೃತೀಯ ಸ್ಥಾನಕ್ಕೆ ಕುಸಿಯಿತು. 1984 ರಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 1996, 2004 ರಲ್ಲಿ ಕ್ರಮವಾಗಿ ಜನತಾ ಪರಿವಾರದ ಜಿ.ಟಿ. ದೇವೇಗೌಡ, ಎ.ಎಸ್. ಗುರುಸ್ವಾಮಿ ಜಯದ ಹೊಸ್ತಿಲಿಗೆ ಬಂದು, ಸೋತರು.

ಮೈಸೂರನ್ನು ಆಳಿದ ಯದುವಂಶದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಲ್ಕು ಬಾರಿ ಸಂಸದರಾಗಿದ್ದರು. 1991 ರಲ್ಲಿ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಸೋತರು. 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೂ ಸೋಲುವ ಜೊತೆಗೆ ಮೂರನೇ ಸ್ಥಾನಕ್ಕೆ ಹೋಗಿದ್ದರು.

ಈ ಕ್ಷೇತ್ರದಿಂದ ಲೋಕಸಭೆಗೆ ಆರಿಸಿ ಹೋದವರು ಈವರೆಗೂ ಕೇಂದ್ರದಲ್ಲಿ ಮಂತ್ರಿಯಾಗಿಲ್ಲ. ಆದರೆ ರಾಜ್ಯಸಭಾ ಸದಸ್ಯರಾಗಿ ಎಂ.ಎಸ್. ಗುರುಪಾದಸ್ವಾಮಿ, ಎಂ. ರಾಜಶೇಖರಮೂರ್ತಿ ಅವರು ಮಂತ್ರಿಗಳಾಗಿದ್ದರು.

ಈವರೆಗೆ ಗೆದ್ದಿರುವವರು

1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)

1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)

1962- ಎಂ. ಶಂಕರಯ್ಯ ( ಕಾಂಗ್ರೆಸ್)

1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)

1971- ಎಚ್.ಡಿ. ತುಳಸಿದಾಸ್ ( ಕಾಂಗ್ರೆಸ್)

1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)

1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)

1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1991- ಚಂದ್ರಪ್ರಭ ಅರಸು ( ಕಾಂಗ್ರೆಸ್)

1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)

1998- ಸಿ.ಎಚ್.ವಿಜಯಶಂಕರ್ (ಬಿಜೆಪಿ)

1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)

2004- ಸಿ.ಎಚ್.ವಿಜಯಶಂಕರ್ (ಬಿಜೆಪಿ)

2009- ಎಚ್.ವಿಶ್ವನಾಥ್ (ಕಾಂಗ್ರೆಸ್)

2014- ಪ್ರತಾಪ್ ಸಿಂಹ (ಬಿಜೆಪಿ)

2019- ಪ್ರತಾಪ್ ಸಿಂಹ (ಬಿಜೆಪಿ)

Follow Us:
Download App:
  • android
  • ios