ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ದುಡ್ಡು ಕೊಟ್ಟು ಪಡೆದ ಅಧಿಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಮುಖಂಡರೋರ್ವರು ಹೇಳಿದರು. ಸೂರ್ಯ ಚಂದ್ರರಷ್ಟೇ ಕೈ ಅಧಿಕಾರಕ್ಕೇರುವುದು ಸತ್ಯ ಎಂದು ಚೆಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಏ.19): ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿರುವಂತೆ ಕಾರ್ಯಕರ್ತರು ನೋಡಿಕೊಳ್ಳುವಂತೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡರು ಮತ್ತು ಮುಂಚೂಣಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಂದ ಆ ನಂತರ ದೇಶಕ್ಕೆ ಕಾಂಗ್ರೆಸ್ಸಿನ ಕೊಡುಗೆಯನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದರು.
ನೆಹರೂ ಮತ್ತು ಇಂದಿರಾ ಗಾಂಧಿ ಅವರು ನೀಡಿದ ಕಾರ್ಯಕ್ರಮಗಳೇ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ. ಹಸಿರು ಕ್ರಾಂತಿ, ಬಡತನ ನಿರ್ಮೂಲನೆಗೆ 20 ಅಂಶಗಳ ಕಾರ್ಯಕ್ರಮ, ಬ್ಯಾಂಕ್ ರಾಷ್ಟ್ರೀಕರಣ, ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ಮುಂತಾದವುಗಳ ಮೂಲಕ ದೇಶ ಕಟ್ಟಿದವರು ಕಾಂಗ್ರೆಸ್ಸಿಗರು.
'ಮೂರರಲ್ಲಿ ಎರಡು ಕಡೆ ಕೈ ಗೆಲುವು : ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತ'
ಆದರೆ, ದೇಶಕ್ಕಾಗಿ ದುಡಿಯುದ ಬಿಜೆಪಿ ಇಂದು ಅಧಿಕಾರ ಅನುಭವಿಸುತ್ತಿದೆ ಎಂದು ಕಿಡಿಕಾರಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮತದಾರರಿಗೆ ದೊ್ರೀಹ ಬಗೆದಿದ್ದೆ ಬಿಜೆಪಿಗರ ಸಾಧನೆ. 27 ಜನ ಬಿಜೆಪಿ ಸಂಸದರನ್ನು ರಾಜ್ಯ ಕೊಟ್ಟಿದ್ದರೂ ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಿರುವ ನರೇಂದ್ರ ಮೋದಿ ತಮಿಳುನಾಡು ಪರ ಕಾಳಜಿ ತೋರಿಸುತ್ತಾರೆ.
ಇಂತಹ ಸರ್ಕಾರ ನಮಗೆ ಬೇಕಾ? ಎಂದು ಪ್ರಶ್ನಿಸಿದರು. ಹಣಕೊಟ್ಟು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಒಂದೆರಡು ಸಾವಿರ ಹಣ ಪಡೆದು ಮತಹಾಕಿದರೆ ನಿಮ್ಮ ಬದುಕು ಸರಿಯಾಗುವುದಿಲ್ಲ. ಜಿಲ್ಲೆಯ ಜನ 7 ಜನ ಶಾಸಕರನ್ನು ಕೊಟ್ಟರು ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದರು. ಕಾಂಗ್ರೆಸ್ ಸರ್ಕಾರ ಬಡವರಿಗೆ ಕೊಟ್ಟ ಎಲ್ಲ ಸಹಾಯಧನ ಯೋಜನೆಗಳನ್ನೂ ರದ್ದುಪಡಿಸಿ ಬಂಡವಾಳಶಾಹಿಗಳ ಪರವಾದ ನೀತಿ ರೂಪಿಸುತ್ತಿರುವ ಬಿಜೆಪಿ ದೇಶಕ್ಕೆ ಹೊರೆಯಾಗಿದೆ ಎಂದರು.
ಮುಂಬರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಶ್ರೀಸಾಮಾನ್ಯನ ಪರವಾದ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಕರೆ ನೀಡಿದರು.
