ತಾಂಡವಪುರ (ಅ.13):  ಬಿಜೆಪಿ ಸರ್ಕಾರದ ದುರಾಡಳಿತ, ಅಧಿಕಾರದ ದುರ್ಬಳಕೆಯಿಂದ ಜನತೆ ಬೇಸತ್ತಿದ್ದು ಶಿರಾ ಮತ್ತು ಆರ್‌.ಆರ್‌. ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗ ಗೆಲವು ನಿಶ್ಚಿತ ಎಂದು ಶಾಸಕ ಡಾ.ಎಸ್‌. ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಂಜನಗೂಡು ತಾಲೂಕಿನ ಬಿಳಿಗೆರೆ ಹೋಬಳಿಯಲ್ಲಿ ಪ್ರವಾಸ ಕೈಗೊಂಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಮುಂದಿನ ಗ್ರಾಪಂ ಚುನಾವಣೆ ಕುರಿತು ಚರ್ಚಿಸದ ಬಳಿಕ ಅವರು ಮಾತನಾಡಿದರು.

ಆರ್‌ ಆರ್‌ ನಗರದಲ್ಲಿ ಕುಸುಮಾ ಗೆಲ್ಲೋದು ಖಚಿತ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿರುವುದು, ಕಾಂಗ್ರೆಸ್‌ಗೆ ಮತ್ತಷ್ಟು ಬಲ ತಂದು ಕೊಟ್ಟಿದೆ ಎಂದರಲ್ಲದೇ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ ಮತ್ತು ಕೊರೋನಾ ಸಂಕಷ್ಟ ಎದುರಾಗಿ ರಾಜ್ಯದ ಜನತೆ ಸಂಕಷ್ಟಕ್ಕೆ ಈಡಾಗಿರುವ ಸಮಯದಲ್ಲಿ ಕೊರೋನಾ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಾಕಷ್ಟುಭ್ರಷ್ಟಾಚಾರ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ದೂರಿದರು.

ರಾಜ್ಯ ವಾಲ್ಮೀಕಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ. ಬಸವರಾಜು, ತಗಡೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮೇಗೌಡ, ಬಸವೇಗೌಡ ಇದ್ದರು.