Karnataka Election : .ಕಾಂಗ್ರೆಸ್‌ಗೆ 150 ಸೀಟು ಬಂದರೂ ಅಚ್ಚರಿ ಇಲ್ಲ
ಯಡಿಯೂರಪ್ಪಗೆ ಜ್ಞಾಪಕಶಕ್ತಿ ಶಕ್ತಿ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿಗೆ ನಡೆಯಕ್ಕೆ ಆಗಲ್ಲ. ಇವರು ಯಾವ ರೀತಿ ಜನಸಂಕಲ್ಪ ಯಾತ್ರೆ ಮಾಡುತ್ತಾರೆಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರ (ಅ.21): ಯಡಿಯೂರಪ್ಪಗೆ ಜ್ಞಾಪಕಶಕ್ತಿ ಶಕ್ತಿ ಇಲ್ಲ. ಸಿಎಂ ಬಸವರಾಜ ಬೊಮ್ಮಾಯಿಗೆ ನಡೆಯಕ್ಕೆ ಆಗಲ್ಲ. ಇವರು ಯಾವ ರೀತಿ ಜನಸಂಕಲ್ಪ ಯಾತ್ರೆ ಮಾಡುತ್ತಾರೆಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದರು.
ಚಿಕ್ಕಬಳ್ಳಾಪುರದಲ್ಲಿ (Chikkaballapura) ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಇವರ ಸಂಕಲ್ಪ ಸರಿ ಮಾಡಿಕೊಳ್ಳಲಿ ಎಂದು ಗೇಲಿ ಮಾಡಿದ ಅವರು, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ (Election) ಕಾಂಗ್ರೆಸ್‌ಗೆ 150 ಸೀಟು ಬಂದರು ಅಚ್ಚರಿ ಇಲ್ಲ ಎಂದರು.
ಮೀಸಲಾತಿ ಹೆಚ್ಚಳ ಗಿಮಿಕ್:
ಮೀಸಲಾತಿ ಪ್ರಮಾಣ ಶೇ. 50ರಷ್ಟುಮೀರಬಾರದೆಂದು ನಾಲ್ಕೈದು ಪ್ರಕರಣಗಳಲ್ಲಿ ಸುಪ್ರೀಂಕೋರ್ಚ್ ಹೇಳಿದೆ. ಮೀಸಲಾತಿ ಪ್ರಮಾಣ ಹೆಚ್ಚಿಸದೇ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಗಂಡ ಮೀಸಲಾತಿ ಹೆಚ್ಚಳ ರಾಜ್ಯ ಬಿಜೆಪಿ ಸರ್ಕಾರದ ಒಂದು ಗಿಮಿಕ್ ಅಷ್ಟೇ. ಸಂವಿಧಾನ ಬದ್ದವಾಗಿ ಮೀಸಲಾತಿ ಕೊಡುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿಲ್ಲ ಎಂದರು.
ಕೃಷ್ಣ ಮೇಲ್ದಂಡೆ ಯೋಜನೆಯಡಿ ಬಯಲು ಸೀಮೆ ಜಿಲ್ಲೆಗಳಿಗೆ 10 ಟಿಎಂಸಿ ನೀರು ಹಸಿರುವ ಅವಕಾಶ ಇದ್ದರೂ ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ಕೊಡುತ್ತಿಲ್ಲ. ಸುಪ್ರೀಂಕೋರ್ಚ್‌ನಲ್ಲೂ ಕೂಡ ಇದಕ್ಕೆ ಯಾವುದೇ ಅಡೆತಡೆ ಇಲ್ಲ. ಆದರೂ ಬಿಜೆಪಿ ಸರ್ಕಾರಗಳು ರಾಜ್ಯದ ನೀರಾವರಿ ಬಗ್ಗೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂದರು.
ಬಿಜೆಪಿ ಆಡಳಿತ ಬ್ರಿಟಿಷ್ ಮಾದರಿಯಲ್ಲಿದೆ
ಗುಡಿಬಂಡೆ : ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಮ್ಮ ದೇಶವನ್ನು ಹೇಗೆ ಆಳುತ್ತಿದ್ದರೋ ಅದೇ ರೀತಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ಆಳ್ವಿಕೆಯನ್ನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಮೃತ್ತದ ಬಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಬೆಲೆಗಳೂ ಸಹ ಏರಿಕೆಯಾಗಿದೆ. ಇದೆಲ್ಲದರ ಜೊತೆಗೆ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಅಶಾಂತಿ ನೆಲೆಸುವಂತೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಹೊಸ ತಾಲೂಕಿಗೆ ಸೌಲಭ್ಯ ಕಲ್ಪಿಸಿಲ್ಲ
ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ಘೋಷಣೆ ಮಾಡಿ ವರ್ಷಗಳು ಕಳೆದರು ತಾಲೂಕಿಗೆ ಬೇಕಾಗುವಂತಹ ಯಾವುದೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಜೊತೆಗೆ ಅನೇಕ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸದೇ ಅರ್ಧಕ್ಕೆ ನಿಲ್ಲಿಸಿದೆ. ದೇಶದಲ್ಲಿ ಉಳ್ಳವರು ಮತಷ್ಟುಶ್ರೀಮಂತರಾಗುತ್ತಿದ್ದರೇ, ಬಡವರು ಮತಷ್ಟುಬಡವರಾಗುತ್ತಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಆಗಲಿದೆ. ರಾಹುಲ್ ಗಾಂಧಿ ಪ್ರಧಾನಿಗಳಾಗಲಿದ್ದಾರೆ ಎಂದರು.
ಬಳಿಕ ಶಾಸಕ ಸುಬ್ಬಾರೆಡ್ಡಿ ಮಾತನಾಡಿ, ಇಂದು ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಪಕ್ಷ ಬಲಿಷ್ಟವಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಕೇವಲ ಒಂದು ಸಂದೇಶ ಕಳುಹಿಸಲಾಗಿತ್ತು. ಆ ಒಂದು ಸಂದೇಶ ಇದೀಗ ಗುಡಿಬಂಡೆಯಲ್ಲಿ ಕಾಂಗ್ರೇಸ್ ಪಕ್ಷ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷ ಅಂದರೇ ಗುಡಿಬಂಡೆ ತಾಲೂಕು ಎಂಬ ಖ್ಯಾತಿ ಬರುವಂತೆ ಎಲ್ಲರೂ ಕೆಲಸ ಮಾಡಬೇಕು. ಬೇರೆ ಪಕ್ಷಗಳಂತೆ ನಮಗೆ ಕುತಂತ್ರ ರಾಜಕಾರಣ ಬೇಡ. ನಿಯತ್ತು ಹಾಗೂ ಜನರ ವಿಶ್ವಾಸದ ರಾಜಕಾರಣ ಮಾಡೋಣ ಎಂದರು.
ತಾಲೂಕಿಗೆ 2 ಸಾವಿರ ಉಚಿತ ಗ್ಯಾಸ್
ಕಳೆದ ಬಾರಿ ಆಪರೇಷನ್ ಕಮಲದ ಸಂದರ್ಭದಲ್ಲೂ ಸಹ ನನಗೆ ಅನೇಕ ಆಮಿಷಗಳನ್ನು ನೀಡಿ ಪಕ್ಷ ತೊರೆಯುವಂತೆ ಹೇಳಿದ್ದರು. ಆದರೆ ನನಗೆ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮುಖ್ಯವಾಗಿತ್ತೇ ವಿನಃ ಅಧಿಕಾರ ಹಣ ಅಲ್ಲ. ಮುಂದಿನ ಚುನಾವಣೆಯೊಳಗೆ ಇಡೀ ತಾಲೂಕನ್ನ ಹೊಗೆ ಮುಕ್ತ ತಾಲೂಕನ್ನಾಗಿ ಮಾಡಲು ಸ್ವಂತ ಖರ್ಚಿನಲ್ಲಿ ಎರಡು ಸಾವಿರ ಉಚಿತ ಗ್ಯಾಸ್ ವಿತರಣೆ ಮಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅನೀಲ್ ಕುಮಾರ್ ಮಾತನಾಡಿ, ಮುಂದಿನ ವಿಧಾನಸಭಾ 2023 ರ ಚುನಾವಣೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗಕ್ಕೆ ಸವಾಲಿದ್ದಂತೆ. ಈ ಭಾಗದಿಂದ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರಲು ಶ್ರಮಿಸಬೇಕು. ಬಿಜೆಪಿ ಸರ್ಕಾರ ಕೋಮುವಾದ ಸೇರಿದಂತೆ ಅನೇಕ ವಿಚಾರಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಬಾರಿ ಬಿಜೆಪಿ ಸರ್ಕಾರದ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದರು.
ಅಧಿಕಾರಿ ಹಸ್ತಾಂತರ:
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಆದಿರೆಡ್ಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ತಾಲೂಕಿನ ವಿವಿಧ ಗ್ರಾ.ಪಂ. ಗಳ ಅಧ್ಯಕ್ಷರು, ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಯುವಮುಖಂಡರು ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಹಾಜರಿದ್ದರು