Asianet Suvarna News Asianet Suvarna News

ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ಖಚಿತ : ವಾಗ್ದಾನದೊಂದಿಗೆ ರಾಜಕಾರಣ ತೊರೆವ ಶಪಥ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಭವಿಷ್ಯ ನುಡಿದರು.

Congress Will Come To Power in 2023  Says Cheluvarayaswamy snr
Author
First Published Dec 21, 2022, 6:49 AM IST

 ಮಂಡ್ಯ (ಡಿ.21):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಭವಿಷ್ಯ ನುಡಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸೂನಗಹಳ್ಳಿಯಲ್ಲಿ ಪಂಚಾಯ್ತಿ ವ್ಯಾಪ್ತಿಯ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ಅಭಿವೃದ್ಧಿಗೆ ಒಮ್ಮೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಕಳೆದ ಬಾರಿ ಕಾಂಗ್ರೆಸ್‌  (Congress)  ಅಭ್ಯರ್ಥಿಗಳನ್ನು ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲಿಸಿದಿರಿ. ಏಳೂ ಕ್ಷೇತ್ರಗಳಲ್ಲಿ ಗೆದ್ದಂತಹ ಜೆಡಿಎಸ್‌ (JDS)  ಅಭ್ಯರ್ಥಿಗಳು ಏನು ಮಾಡಿದರು ಎನ್ನುವುದು ನಿಮ್ಮ ಕಣ್ಮುಂದೆಯೇ ಇದೆ. ಒಂದೂವರೆ ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಮೈಷುಗರ್‌ ಕಾರ್ಖಾನೆಗೆ ಚಾಲನೆ ನೀಡಲಾಗಲಿಲ್ಲ. ಮಂಡ್ಯ ನಗರದೊಳಗಿನ ಗುಂಡಿ ಮುಚ್ಚುವುದಕ್ಕೂ ಇವರಿಂದ ಸಾಧ್ಯವಾಗಲಿಲ್ಲ. ಒಬ್ಬರಿಗೊಂದು ಆಶ್ರಯ ಮನೆ ಕೊಡಲಿಲ್ಲ, ಹಾಲಿನ ಸಬ್ಸಿಡಿ ಬಿಡುಗಡೆ ಮಾಡಿಸಲಾಗಲಿಲ್ಲ. ಕೃಷಿ ಹೊಂಡ ಸ್ಥಗಿತಗೊಂಡಿತು. ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿಯಿತು ಎಂದು ವಿಷಾದಿಸಿದರು.

ಜೆಡಿಎಸ್‌ನವರನ್ನು ಏಳು ಸ್ಥಾನಗಳಲ್ಲಿ ಗೆಲ್ಲಿಸಿ ಒಂದು ಅವಕಾಶ ನೀಡಿದ್ದೀರಿ. ಅದೇ ರೀತಿ ಕಾಂಗ್ರೆಸ್‌ನ ಏಳು ಅಭ್ಯರ್ಥಿಗಳನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿ ನಮಗೊಂದು ಅವಕಾಶ ಕೊಡಿ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸದಿದ್ದರೆ ಮುಂದೆಂದಿಗೂ ರಾಜಕಾರಣ ಮಾಡುವುದಿಲ್ಲ ಎಂದು ದೃಢವಾಗಿ ಹೇಳಿದರು.

ನಾವು ಶೋಕಿಗಾಗಿ ರಾಜಕಾರಣ ಮಾಡುವವರಲ್ಲ. ಅವಕಾಶ ಸಿಕ್ಕಾಗ ಅಭಿವೃದ್ಧಿ ಪರವಾಗಿಯೂ ರಾಜಕಾರಣ ಮಾಡಿದ್ದೇವೆ. ಸಾರಿಗೆ ಮಂತ್ರಿಯಾಗಿದ್ದ ಸಮಯದಲ್ಲಿ ನಾಗಮಂಗಲ, ಕೆ.ಆರ್‌.ಪೇಟೆ, ಮಳವಳ್ಳಿ, ಮಂಡ್ಯ ಸಾರಿಗೆ ಕಚೇರಿಗಳನ್ನು ಮೇಲ್ದರ್ಜೆಗೇರಿಸಿದೆ. ಶಿವಮೊಗ್ಗ ಪಾಲಾಗಿದ್ದ ಮೆಡಿಕಲ್‌ ಕಾಲೇಜನ್ನು ಮಂಡ್ಯಕ್ಕೆ ತೆಗೆದುಕೊಂಡು ಬಂದೆ. ಈಗ ಆ ಮೆಡಿಕಲ್‌ ಕಾಲೇಜು ಸುಣ್ಣ-ಬಣ್ಣ ಕಂಡಿಲ್ಲ, ಅವ್ಯವಸ್ಥೆಯ ಕೂಪವಾಗಿದೆ. ಕಾಲೇಜಿನ ಮುಂಭಾಗದ ಫುಟ್‌ಪಾತ್‌ನ್ನು ಉತ್ತಮ ಸ್ಥಿತಿಯಲ್ಲಿಡಲು ಸಾಧ್ಯವಾಗಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ನಾವು ಯಾರಿಗೂ ವೈರಿಗಳಲ್ಲ, ದ್ವೇಷದ ರಾಜಕಾರಣ ಮಾಡುವುದಿಲ್ಲ. ಪ್ರಸ್ತುತ ಜಿಲ್ಲೆ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಭಿವೃದ್ಧಿ ವಂಚಿತವಾಗಿರುವ ಮಂಡ್ಯ ಜಿಲ್ಲೆಯನ್ನು ಹಾಸನ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ ಜಿಲ್ಲೆಗಳಂತೆ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಅದಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದರು.

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದವರಿಗೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಕಾಂಗ್ರೆಸ್‌ ಶಾಲು ಹಾಕಿ ಪಕ್ಷಕ್ಕೆ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ, ಡಾ.ಎಚ್‌.ಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್‌, ಸಿದ್ದರಾಮೇಗೌಡ, ಶ್ರೀರಂಗಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ್‌, ತ್ಯಾಗರಾಜ್‌, ಅನುರಾಧ, ಶಶಿಕಲಾ, ವೀಣಾ, ಅಂಕರಾಜು, ರಮೇಶ್‌ ಮಿತ್ರ, ಬೇಲೂರು ಸೋಮಶೇಖರ್‌, ಬೂತನಹೊಸೂರು ಗ್ರಾಪಂ ಅಧ್ಯಕ್ಷೆ ಅನುರಾಧ ಇತರರಿದ್ದರು.

ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟಾಗಿದ್ದಾರೆ: ಚಲುವರಾಯಸ್ವಾಮಿ

ಮಂಡ್ಯ:  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಇರುವ ಹೊಂದಾಣಿಕೆ, ಒಗ್ಗಟ್ಟು ಬೇರೆ ಯಾವ ಪಕ್ಷದ ನಾಯಕರಲ್ಲೂ ಇಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಇಬ್ಬರೂ ನಾಯಕರ ನಡುವೆ ಎಳ್ಳಷ್ಟೂಭಿನ್ನಾಭಿಪ್ರಾಯವಿಲ್ಲ. ಪಕ್ಷ ಸಂಘಟನೆ, ಕಾರ್ಯಚಟುವಟಿಕೆಗಳಲ್ಲಿ ಪರಸ್ಪರ ಒಮ್ಮತದಿಂದ ಮುನ್ನಡೆಯುತ್ತಿದ್ದಾರೆ. ವಿನಾಕಾರಣ ಅವರ ನಡುವೆ ಇಲ್ಲದ ಗೊಂದಲಗಳನ್ನು ವಿಪಕ್ಷದವರು ಜನರೆದುರು ಹುಟ್ಟುಹಾಕುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿ ಹೆಚ್ಚಿದ್ದಾರೆ ಎಂದರೆ ಖುಷಿಪಡಬೇಕು. ರಾಜ್ಯವನ್ನಾಳುವ ಸಾಮರ್ಥ್ಯವಿರುವ ನಾಯಕರು ಪಕ್ಷದಲ್ಲಿದ್ದಾರೆ ಎಂದು ಹೆಮ್ಮೆ ಪಡಬೇಕು. ಅದನ್ನೇ ಭಿನ್ನಮತ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಬೇರೆ ಪಕ್ಷಗಳಲ್ಲಿಯೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಿರಬಹುದು. ನಮ್ಮಲ್ಲಿ ಸ್ವಲ್ಪ ಹೆಚ್ಚಿರಬಹುದು. ಅದನ್ನೇ ದೊಡ್ಡ ಲೋಪ ಎನ್ನಲಾಗುವುದಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಪಕ್ಷದ ದೊಡ್ಡ ಶಕ್ತಿಗಳಾಗಿದ್ದಾರೆ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ರಮೇಶ್‌ ಬಂಡಿಸಿದ್ದೇಗೌಡ

ಮಂಡ್ಯ:  ಎರಡು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಇನ್ನಷ್ಟುಒತ್ತಾಸೆಯಾಗಿ ನಿಲ್ಲುವೆ ಎಂದು ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಭರವಸೆ ನೀಡಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸೂನಗಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ಬಾರಿ ಪಕ್ಷ ಬದಲಾವಣೆ ಮಾಡಿ ತಪ್ಪು ನಿರ್ಧಾರ ಮಾಡಿದೆನೆಂಬ ಕಾರಣಕ್ಕೆ ಮತದಾರರ ಸಿಟ್ಟಿಗೆ ಗುರಿಯಾಗಿದ್ದೆ. ಕೋಪದಿಂದ ನನ್ನ ವಿರುದ್ಧ ಮತ ಚಲಾಯಿಸಿ ಬೇರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣರಾದಿರಿ. ಅವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷ ಬದಲಾಯಿಸಬೇಕಾದ ಅನಿವಾರ್ಯತೆಯಲ್ಲಿದ್ದೆ. ಆದರೆ, ನಾನೆಂದಿಗೂ ಮತದಾರರಿಗೆ ಮೋಸ ಮಾಡಿಲ್ಲ ಎಂದರು.

ನನ್ನ ತಪ್ಪಿದ್ದರೆ ಕ್ಷಮಿಸಿ. 2023ರ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಗೆಲ್ಲಿಸಿದರೆ ನಿಮ್ಮೊಡನೆ ನಿಂತು ಕ್ಷೇತ್ರದ ಅಭಿವೃದ್ಧಿಗೆ ದುಡಿಯುವುದಾಗಿ ವಿಶ್ವಾಸದಿಂದ ನುಡಿದರು.

Follow Us:
Download App:
  • android
  • ios