ಸಾಮೂಹಿಕ ನಾಯಕತ್ವದಲ್ಲಿ ಗೆಲುವಿಗೆ ಶ್ರಮಿಸಿ : ಕಾಂಗ್ರೆಸ್ ಗೆಲುವೇ ಗುರಿಯಾಗಿರಲಿ
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದ್ದು, ಪಕ್ಷದ ಸಂಭವನೀಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಸಮಾಜ ಸೇವೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ರಾಮನಗರ : ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದ್ದು, ಪಕ್ಷದ ಸಂಭವನೀಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರ ಸಮಾಜ ಸೇವೆಯನ್ನು ಜನರು ಮೆಚ್ಚಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ರಾಮನಗರ ಟೌನ್, ಕಸಬಾ, ಕೈಲಾಂಚ ಹೋಬಳಿಯ ಕಾಂಗ್ರೆಸ್ (Congress) ಪಕ್ಷದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಸಮುದಾಯದ ಮುಖಂಡರು ಭಿನ್ನಮತ, ವೈಮನಸ್ಸನ್ನು ಮರೆತು ಕಾಂಗ್ರೆಸ್ ಅಭ್ಯರ್ಥಿ (Candidate) ಇಕ್ಬಾಲ್ ಹುಸೇನ್ ಗೆಲುವಿಗೆ ಒಗ್ಗೂಡಿ ಕೆಲಸ ಮಾಡುವ ನಿರ್ಧಾರವನ್ನು ಪ್ರಕಟಿಸಿದರು.
ಪ್ರತಿನಿತ್ಯ ಸಮುದಾಯದ ಜನರ ಕಷ್ಟಸುಖಗಳಲ್ಲಿ ನಮ್ಮ ಜೊತೆಯಿರುವ ಇಕ್ಬಾಲ್ ಹುಸೇನ್ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಗುರಿಯಾಗಿದೆ. ಆದರೆ, ಒಬ್ಬ ವ್ಯಕ್ತಿಯ ಗುಂಪುಗಾರಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದ್ದು, ಅವರಿಗೆ ತಿಳಿವಳಿಕೆ ಹೇಳಬೇಕು. ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ನಮಗೆ ದೊಡ್ಡದಾಗಿದ್ದು, ಸಾಮೂಹಿಕ ನಾಯಕತ್ವಕ್ಕೆ ಮನ್ನಣೆ ನೀಡುವಂತೆ ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನಿಸುವುದು ಸಮಾಲೋಚನಾ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನರ ಸೇವೆಗೆ ಅವಕಾಶ ಸಿಗುವುದು ಪುಣ್ಯ:
ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ನನ್ನನ್ನು ಬೆಳೆಸಿದವರು ಕ್ಷೇತ್ರದ ಜನರು. ನನಗೆ ನೀವೇ ತಂದೆ, ತಾಯಿ, ಬಂಧು ಬಳಗ ಎಲ್ಲವೂ ಆಗಿದ್ದೀರಿ. ನಿಮ್ಮೆಲ್ಲರ ಸೇವೆ ಮಾಡಲು ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅವಕಾಶ ನೀಡಿ. ನಿಮ್ಮೆಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.
ಕ್ಷೇತ್ರ ಜನರ ಸೇವೆಗೆ ಅವಕಾಶ ಸಿಗುವುದು ಪುಣ್ಯ. ಆದ್ದರಿಂದ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪರವಾಗಿ ತಾವೆಲ್ಲರೂ ನಿಂತು ತಮ್ಮದೇ ಆದ ಶಕ್ತಿಯನ್ನು ತುಂಬಿದರೆ ಮಾತ್ರ ನನಗೆ ಹೆಚ್ಚು ಬಲ ಸಿಗಲಿದೆ. ಏನಾದರು ಲೋಪವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಎಲ್ಲ ಜನಾಂಗದ ಸಭೆಗಳನ್ನು ಕರೆದು ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುವುದು. ನಗರ ಪ್ರದೇಶದಲ್ಲಿ ಆಯಾಯ ವಾರ್ಡುಗಳ ಮತ್ತು ಗ್ರಾಮೀಣ ಭಾಗದಲ್ಲಿ ಬೂತ್ ಮಟ್ಟದಲ್ಲಿನ ಸ್ಥಳೀಯ ಮುಖಂಡರಿಗೆ ಚುನಾವಣೆ ಜವಾಬ್ದಾರಿ ವಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಇಕ್ಬಾಲ್ ತಿಳಿಸಿದರು.
ಕಾಂಗ್ರೆಸ್ ಗೆಲುವೇ ಗುರಿಯಾಗಿರಲಿ:
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ ಮಾತನಾಡಿ, ಹಿಂದಿನಿಂದಲೂ ಪರಿಶಿಷ್ಟಜಾತಿ/ಪಂಗಡಗಳ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರುವುದು ಬೇಡ. ಎಲ್ಲರನ್ನು ಒಗ್ಗಟ್ಟಿನಿಂದ ಕರೆದೊಯ್ಯುವ ಕೆಲಸ ಮಾಡುತ್ತೇವೆ. ನಿಮ್ಮ ಗುರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದಾಗಿರಲಿ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಕೆ.ರಮೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್ ಮಾತನಾಡಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನದೀಮ…, ಕೆಪಿಸಿಸಿ ಎಸ್ಸಿ ವಿಭಾಗದ ಸದಸ್ಯ ಕೊಂಕಾಣಿದೊಡ್ಡಿ ಶಿವಲಿಂಗಯ್ಯ, ಮುಖಂಡರಾದ ನರಸಿಂಹಯ್ಯ, ಅಂಜನಾಪುರ ವಾಸುನಾಯ್ಕ, ಪಾಪಣ್ಣ, ಶಂಭೂಗೌಡ, ಕೊತ್ತಿಪುರ ಗೋವಿಂದರಾಜು, ಕುಂಬಾಪುರ ಕಾಲೋನಿ ಎಸ್.ಕೃಷ್ಣಪ್ಪ, ಗಿರಿಯಪ್ಪ, ರವಿಕುಮಾರ್, ಕುಮಾರನಾಯ್ಕ, ಪಾರ್ಥ, ಪದ್ಮನಾಭ, ಕುಮಾರ್ ಮತ್ತಿತರರು ಹಾಜರಿದ್ದರು.
ಮೂಲ ಕಾಂಗ್ರೆಸ್ಸಿಗರ ಸಾಮೂಹಿಕ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸಬೇಕು. ಏಕವ್ಯಕ್ತಿ ನಾಯಕತ್ವ ಮತ್ತು ತೀರ್ಮಾನವನ್ನು ನಾವು ಒಪ್ಪುವುದಿಲ್ಲ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರಿಗೆ ಮನವಿ ಸಲ್ಲಿಸಲಾಗುವುದು. ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಧ್ರುವನಾರಾಯಣ್ ಸೇರಿದಂತೆ ಪರಿಶಿಷ್ಟಜಾತಿ ಮುಖಂಡರನ್ನು ಆಹ್ವಾನಿಸಿ ರಾಮನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗುವುದು.
-ನರಸಿಂಹಯ್ಯ, ಮಾಜಿ ನಿರ್ದೇಶಕರು, ಅರಣ್ಯ ಅಭಿವೃದ್ಧಿ ನಿಗಮ
ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಎಸ್ಸಿ ಘಟಕದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವಾಗ ಪಕ್ಷದಲ್ಲಿರುವ ಸಮುದಾಯದ ಮುಖಂಡರ ಗಮನಕ್ಕೂ ತಂದಿಲ್ಲ. ಕೆಲವರ ಅಣತಿಯಂತೆ ನೇಮಕ ಮಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳಲ್ಲಿಯೂ ಪಕ್ಷದ ಮೂಲ ಮುಖಂಡರಿಗೆ ಪ್ರಾಧಾನ್ಯತೆ ನೀಡಬೇಕು. ಎಸ್ಸಿ ವಿಭಾಗದ ಹಾಲಿ ಜಿಲ್ಲಾಧ್ಯಕ್ಷರು ಎಲ್ಲರನ್ನು ಕಡೆಗಣಿಸಿ ಸಭೆ ಸಮಾರಂಭ ಆಯೋಜಿಸುವುದು ಸರಿಯಲ್ಲ.
-ಅಂಜನಾಪುರ ವಾಸು ನಾಯ್ಕ, ಕಾಂಗ್ರೆಸ್ ಮುಖಂಡರು, ರಾಮನಗರ