* ಎಲ್ಲ ಸಮಾಜಕ್ಕೂ ಕಾಂಗ್ರೆಸ್‌ ಪ್ರಾತಿನಿಧ್ಯ ನೀಡಿದೆ* ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ * ಪ್ರಕಾಶ ಹುಕ್ಕೇರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋದಿಲ್ಲ 

ಬೆಳಗಾವಿ(ಜು.17):  ಬಸವಾದಿ ಶರಣರ ತತ್ವಗಳ ಅಡಿಪಾಯದ ಮೇಲೆ ಜಾತ್ಯತೀತ ತತ್ವದ ಮೇಲೆ ಕಾಂಗ್ರೆಸ್‌ ಪಕ್ಷ ನಡೆಯುತ್ತಿದೆ. ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು ಎಂಬುದು ನಮ್ಮ ಆಸೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ಲಿಂಗಾಯತ ಸಮಾಜ ಕೂಡ ನಮ್ಮ ಪಕ್ಷದ ಜತೆಗೆ ಬರುವ ರೀತಿಯಲ್ಲಿ ಪ್ರಯತ್ನಿಸುತ್ತೇವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ ಅವರು ನಮ್ಮ ಸಮಾಜ ಮತ್ತು ಪಕ್ಷದ ಹಿರಿಯ ನಾಯಕರು, ಮೊನ್ನೆ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಇದೀಗ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡುತ್ತೇನೆ ಎಂದು ನಿನ್ನೆ ರಾತ್ರಿ ಫೋನ್‌ ಮಾಡಿದ್ದರು. ವೈಯಕ್ತಿಕ ವಿಚಾರ, ಮುಂಬರುವ ರಾಜಕೀಯ ವಿಶ್ಲೇಷಣೆಗಳು, ಶ್ರೀಗಳ ಆಶೀರ್ವಾದ ಪಡೆದುಕೊಳ್ಳಲು ಆಗಮಿಸಿದ್ದರು ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ಮುಂದಿನ ಸಿಎಂ ವಿಚಾರಕ್ಕೆ ನಮ್ಮ ಪಕ್ಷದಲ್ಲಿ ಒಂದು ವಿಧಾನವಿದೆ. ಮೊದಲು ಚುನಾವಣೆ ಆಗಬೇಕು. ಚುನಾವಣೆಯಲ್ಲಿ 124 ಶಾಸಕರು ಗೆದ್ದು ಬರಬೇಕು. ಆಮೇಲೆ ಶಾಸಕರು ಸಿಎಲ್‌ಪಿ ನಾಯಕರನ್ನು ಹೈಕಮಾಂಡ್‌ ಜತೆಗೂಡಿ ನಿರ್ಧಾರ ಮಾಡುತ್ತಾರೆ. ಇಷ್ಟು ಬೇಗ ಅದರ ಬಗ್ಗೆ ಚರ್ಚೆ ಮಾಡುವುದು ಸೂಕ್ತವಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.

ಕ್ರೆಡಿಟ್‌ ರಾಜಕೀಯ ಕಾಂಗ್ರೆಸ್‌ಗೆ ಗೊತ್ತಿಲ್ಲ: ಲಕ್ಷ್ಮೀ ಹೆಬ್ಬಾಳಕರ

ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವಾಗ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆಯೋ ಆ ಸಂದರ್ಭದಲ್ಲಿ ಬರೀ ಲಿಂಗಾಯತರು ಅಷ್ಟೇ ಅಲ್ಲ ಪ್ರತಿಯೊಂದು ಸಮಾಜದ ಧ್ವನಿಯಾಗಿ ಕೆಲಸ ಮಾಡಿದೆ. ಹೀಗಾಗಿ ಲಿಂಗಾಯತ ಸಮಾಜಕ್ಕೆ ಅನ್ಯಾಯ ಆಗಿದೆ ಎಂಬ ಕೂಗು ನಮಗಂತೂ ಕೇಳಿಸುತ್ತಿಲ್ಲ, ಕಾಣಿಸಿಲ್ಲ. ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ ನನ್ನನ್ನು ಸೇರಿ ಮುಂತಾದ ಮುಖಂಡರನ್ನು ಗುರುತಿಸುವ ಕೆಲಸ ನಮ್ಮ ಪಕ್ಷ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡುವ ಕೆಲಸ ಮಾಡುತ್ತದೆ ಎಂದರು.

ನಮ್ಮ ಹಿರಿಯರು ಮಾತನಾಡಿದ ವಿಚಾರಕ್ಕೆ ನಾನು ಮಾತನಾಡುವುದಿಲ್ಲ. ಪ್ರಕಾಶ ಹುಕ್ಕೇರಿ ಅವರು ಹಿರಿಯ ಮುತ್ಸದ್ಧಿ ರಾಜಕಾರಣಿಗಳು. ಏಳು ಬಾರಿ ಶಾಸಕರಾಗಿದ್ದವರು, ಒಮ್ಮೆ ಸಂಸದರಾಗಿದ್ದವರು. ಅವರ ಮನದಾಳದ ಮಾತುಗಳನ್ನು ಇನ್ನೊಮ್ಮೆ ನೀವೆ ಕೇಳಿ ಸ್ಪಷ್ಟಪಡಿಸಿಕೊಳ್ಳಿ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.