Asianet Suvarna News Asianet Suvarna News

ಟಾಕಳೆ ಬಂಧನಕ್ಕೆ ನವ್ಯಶ್ರೀ ಆಗ್ರಹ: BIGG BOSSಗೂ ಹೋಗುವಾಸೆ ಬಿಚ್ಚಿಟ್ಟ ಕಾಂಗ್ರೆಸ್‌ ಕಾರ್ಯಕರ್ತೆ

ರಾಜಕುಮಾರ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾ ಆಗಿದ್ದು ನ್ಯಾಯಾಲಯ ನನಗೆ ಶಕ್ತಿ ಕೊಟ್ಟಿದೆ ಎಂದು ನವ್ಯಶ್ರೀ ತಿಳಿಸಿದರು

Congress Navyashree Demands Rajkumar Thakale Arrest says interested in BIGG BOSS mnj
Author
Bengaluru, First Published Aug 5, 2022, 8:43 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಆ. 05): ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಹಾಗೂ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಆರೋಪ ಪ್ರತ್ಯಾರೋಪ ಪ್ರಕರಣ ಸಂಬಂಧ ಇಂದು ಬೆಳಗಾವಿಯಲ್ಲಿ ನವ್ಯಶ್ರೀ ಸುದ್ದಿಗೋಷ್ಠಿ‌ ನಡೆಸಿದರು. ಸುದ್ದಿಗೋಷ್ಠಿ ವೇಳೆ ರಾಜಕುಮಾರ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ವಜಾ ಆಗಿದ್ದು ನ್ಯಾಯಾಲಯ ನನಗೆ ಶಕ್ತಿ ಕೊಟ್ಟಿದೆ ಎಂದು ತಿಳಿಸಿದರು. ಇನ್ನು ರಾಜಕುಮಾರ ಟಾಕಳೆ ಬಂಧನ ಏಕೆ ಆಗಿಲ್ಲ ಎಂದು ಪ್ರಶ್ನಿಸಿರುವ ನವ್ಯಶ್ರೀ ತಾವು ಬಿಗ್ ಬಾಸ್‌ಗೆ ಹೋಗುವ ಆಸೆ ಬಿಚ್ಚಿಟ್ಟಿದ್ದಾರೆ.

ಟಾಕಳೆ ವಿರುದ್ಧ FIR ಆಗಿ 13 ದಿನ ಕಳೆದರೂ ಬಂಧನವಾಗಿಲ್ಲ: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಸುದ್ದಿಗೋಷ್ಠಿ ವೇಳೆ ಮಾತನಾಡುತ್ತಾ, ನಾನು ವಿದೇಶದಿಂದ ಬಂದ ಬಳಿಕ 20 ದಿನಗಳಿಂದ ಬೆಳಗಾವಿಯಲ್ಲಿ ಇದ್ದು ಕಾನೂನು ಹೋರಾಟ ಮಾಡುತ್ತಿದ್ದೇನೆ. ನನಗೆ ಆದ ಅನ್ಯಾಯ ವಿರುದ್ಧ ಎಪಿಎಂಸಿ ಠಾಣೆಗೆ ದೂರು ನೀಡಿದ್ದೆ. ರಾಜಕುಮಾರ ಟಾಕಳೆ ನಿರೀಕ್ಷಣಾ ಜಾಮೀನು ತಿರಸ್ಕಾರ ಆಗಿದೆ. ರಾಜಕುಮಾರ ಟಾಕಳೆ ವಿರುದ್ಧ ಎಫ್ಐಆರ್ ಆಗಿ 13 ದಿನ ಆಗಿದೆ. ಆದ್ರೆ ಈವರೆಗೂ ರಾಜಕುಮಾರ ಟಾಕಳೆ ಬಂಧನವಾಗಿಲ್ಲ ಎಂದರು 

ಘನ ನ್ಯಾಯಾಲಯ ನವ್ಯಶ್ರೀಗೆ ಶಕ್ತಿ ಕೊಟ್ಟಿದೆ. ನಾನು ಬೆಂಗಳೂರಿಗೆ ಹೋಗಿ ವಕೀಲರನ್ನು ಭೇಟಿಯಾಗಿದ್ದೆ. ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಈ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದೆ. ನನ್ನ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಸಿಗುತ್ತೆ ಎಂಬ ಭರವಸೆ ಇದೆ. ನನಗೂ ಎಲ್ಲ ಹೆಣ್ಣು ಮಕ್ಕಳ ರೀತಿ ಮದುವೆ ಮಕ್ಕಳು ಆಗಬೇಕು ಎಂದು ಆಸೆ ಇತ್ತು. ರಾಜಕುಮಾರ ಟಾಕಳೆ ನನ್ನ ಹೊಡೆದು ಬಡಿದು ಮಾಡಿದ ಎಂದು ತಿಳಿಸಿದ್ದಾರೆ. 

ನವ್ಯಶ್ರೀ ಫೌಂಡೇಶನ್ ನೊಂದಾಯಿತ ಸಂಸ್ಥೆ: ಇನ್ನು ನವ್ಯಶ್ರೀ ಫೌಂಡೇಶನ್ ಕುರಿತು ಮಾತನಾಡಿ ಇದು ಸರ್ಕಾರದಿಂದ ನೊಂದಾಯಿತ ಸಂಸ್ಥೆ. ಪ್ರವಾಹ ಬಂದ ವೇಳೆ ನಮ್ಮ ಫೌಂಡೇಶನ್ ವತಿಯಿಂದ ಬಾಗಲಕೋಟೆಗೆ ಹೋಗಿ ಕೆಲಸ ಮಾಡಿದ್ದೀವಿ. ಕೋವಿಡ್ ವೇಳೆ ರೈತರ ಬಳಿ ತರಕಾರಿ ಖರೀದಿಸಿದ್ದೇವೆ. ನವ್ಯ ಫೌಂಡೇಶನ್‌ಗೆ ನವ್ಯಶ್ರೀ ಒಬ್ಬಳೇ ಅಲ್ಲ ಎಲ್ಲಾ ಪದಾಧಿಕಾರಿಗಳು ಇದ್ದಾರೆ. ನವ್ಯ ಫೌಂಡೇಶನ್‌ಗೆ ಬಹಳಷ್ಟು ಜನ ಸಹಕಾರ ಕೊಟ್ಟಿದ್ದಾರೆ. ನವ್ಯಶ್ರೀ ಸತ್ಯದ ಪರ ನಿಂತಿದ್ದಾಳೆ ಓಡಿ ಹೋಗಿಲ್ಲ. 

ನವ್ಯಶ್ರೀ ಜತೆ ಮದುವೆ ಆದ ಫೋಟೋ ಡಿಲಿಟ್ ಮಾಡಿದ್ನಾ ರಾಜಕುಮಾರ?: ಕಾಂಗ್ರೆಸ್ ಕಾರ್ಯಕರ್ತೆ ನೀಡಿದ ದೂರಿನಲ್ಲೇನಿದೆ?

ಇನ್ನು ಮಹಿಳಾ ಪೊಲೀಸ ಠಾಣೆಯಲ್ಲಿ ರಾಜಕುಮಾರ ಟಾಕಳೆ ಪತ್ರ ಬರೆದು ಕೊಟ್ಟಿದ್ದಾರೆ.‌ ನನ್ನ ಬಳಿ ಸಾಲದ ಹಣ ಪಡೆದಿದ್ದು ಬರೆದು ಕೊಟ್ಟಿದ್ದಾರೆ. ಎರಡು ಲಕ್ಷ ರೂ‌. ಡಿಡಿ ಬಡ್ಡಿ ಸಮೇತ ಸಂದಾಯ ಮಾಡಿರುತ್ತೇನೆ ಎಂದು ಬರೆದುಕೊಟ್ಟಿದ್ದಾರೆ. ಇನ್ನಮುಂದೆ ನಾನು ನವ್ಯಶ್ರೀ ಯಾವ ವಿಚಾರಕ್ಕೆ ಹೋಗಲ್ಲ ಎಂದು ಬರೆದುಕೊಟ್ಟಿದ್ದಾರೆ. ನನಗೆ ಕೊಡಬೇಕಾದ ಹಣ ಕೊಟ್ಟು ಎಫ್ಐಆರ್ ನಲ್ಲಿ ಅದನ್ನು ತಿರುಚಿದ್ದಾನೆ. ತಾನೇ ತೋಡಿದ ಖೆಡ್ಡಾಗೆ ರಾಜಕುಮಾರ ಟಾಕಳೆ ಬಿದ್ದಿದ್ದಾನೆ ಎಂದಿದ್ದಾರೆ. 

ನಾನು ನಾಯಕಿ ಅಲ್ಲ ಸೇವಕಿ: ಇನ್ನು ರಾಜಕಾರಣದಲ್ಲಿ ನನಗೆ ದೆಹಲಿ ನಾಯಕರ ಸಂಪರ್ಕ ಇರೋದು ಚುನಾವಣೆ ಸಮಯದಲ್ಲಿ ನಾನು ನಾಯಕಿ ಅಲ್ಲ ಸೇವಕಿ ಅಂತಾ ಈಗಾಗಲೇ ಹೇಳಿದ್ದೇನೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೆ.  ಕೇರಳ, ದೆಹಲಿ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದೇನೆ. ನನಗೆ ಪಕ್ಷದ ಆದೇಶ ಬಂದ ಸಂದರ್ಭದಲ್ಲಿ ನಾನು ಚುನಾವಣಾ ಪ್ರಚಾರಕ್ಕೆ ಹೋಗಿದ್ದೇನೆ. 

ಕರ್ನಾಟಕ ವಿಧಾನಸಭೆ ಉಪಚುನಾವಣೆ ವೇಳೆಯೂ ಕೆಲಸ ಮಾಡಿದ್ದೇನೆ. ಬಹುಶಃ ಒಂದು ಕೆಟ್ಟ ಘಳಿಗೆ ನನಗೆ ಆಪಾದನೆಗಳು ಬಂದಿವೆ. ಸಾವಿರ ಟೀಕೆ ಎದುರಿಸುವ ಶಕ್ತಿ ನನ್ನ ಹತ್ತಿರ ಇದೆ.‌ ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ ತಕ್ಷಣ ನಾನು ಓಡಿ ಹೋಗಿದ್ದೀನಾ. 20 ದಿನಗಳಿಂದ ಎಪಿಎಂಸಿ ಠಾಣೆಗೆ ವಿಚಾರಣೆಗೆ ಹೋಗಿದ್ದೇನೆ. ಇಲ್ಲಿ ಬಂದಿರೋದು ವೈಯಕ್ತಿಕ ವಿಚಾರ, ಪಕ್ಷಕ್ಕೆ ಸಂಬಂಧ ಇಲ್ಲ. ರಾಜಕೀಯ ನಾಯಕರ ಸಪೋರ್ಟ್ ನಾನೇನು ಕೇಳಿಲ್ಲ. 

ರಾಜಕುಮಾರ ಟಾಕಳೆಗೆ ದುಡ್ಡು ಕೊಟ್ಟು ಕೊಂಡುಕೊಳ್ಳುವ ಅಭ್ಯಾಸ ಇದೆ. ರಾಜಕುಮಾರ ಟಾಕಳೆ ಮೊಬೈಲ್ ಸೀಜ್ ಮಾಡಿದ್ರೆ ಮತ್ತಷ್ಟು ಹೆಣ್ಣುಮಕ್ಕಳ ಮರ್ಯಾದೆಯಾದರೂ ಉಳಿಯುತ್ತೆ.ನಾನು ಎಫ್ಐಆರ್ ಕೊಟ್ಟು 13 ದಿನ ಆಗಿದೆ. ರಾಜಕುಮಾರ ಟಾಕಳೆಯನ್ನು ಕರೆದು ವಿಚಾರಣೆ ಮಾಡಬಹುದಲ್ಲ. 

ಅತೃಪ್ತ ಶಾಸಕರ ಬಗ್ಗೆ ಅರ್ಧರಾತ್ರಿಯಲ್ಲಿ ಕೈ ನಾಯಕರಿಗೆ ಮಾಹಿತಿ ಕೊಡ್ತಿದ್ದೆ, ಮುಂಬೈ ರಹಸ್ಯ ಬಿಚ್ಚಿಟ್ಟ ನವ್ಯಶ್ರೀ

ಬುಧವಾರ ಸಂಜೆ ಮನೆಯಿಂದ ಆತ ಹೋಗಿದ್ದಾ‌‌ನೆ. ರಾಜಕುಮಾರ ಟಾಕಳೆ ಬಂಧನ ಏಕೆ ಆಗಿಲ್ಲ, ದಯಮಾಡಿ ಬಂಧಿಸಿ ಅಂತಾ ತಿಳಿಸಿದ್ದಾರೆ. ರಾಜಕುಮಾರ ಟಾಕಳೆ ನನ್ನ ಹೆಂಡತಿ ಅಂತಾ ಒಪ್ಪಿಕೊಳ್ಳಲಿ ಬಿಡಲಿ ಅದನ್ನು ಹೇಗೆ ಪ್ರೂವ್ ಮಾಡಬೇಕೆಂದು ನನಗೆ ಗೊತ್ತು ಎಂದಿರುವ ನವ್ಯಶ್ರೀ ನನ್ನ ಕಿಡ್ನಾಪ್ ಮಾಡಿದ ಸಿಸಿ ಕ್ಯಾಮರಾ ವಿಸ್ಯೂಯಲ್ಸ್ ಇದೆ. ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ದಾಖಲೆ ನೀಡ್ತೀನಿ' ಎಂದಿದ್ದಾರೆ

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಿಚ್ಚಿಟ್ಟ ನವ್ಯಶ್ರೀ: ಇನ್ನು ಬಿಗ್ ಬಾಸ್ ವೇದಿಕೆಗೆ ನವ್ಯಶ್ರೀ ಏಕೆ ಹೋಗಬಾರದು ಅಂತಾ ಪ್ರಶ್ನಿಸಿರುವ ನವ್ಯಶ್ರೀ, 'ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತುಂಬಾ ಕಾಂಟ್ರವರ್ಸಿ ಕೇಸ್ ತೋರಿಸಿದ್ದಾರೆ. ಅವರು ತಪ್ಪು  ಮಾಡದೇ ಇರೋದನ್ನ ಪ್ರೂವ್ ಮಾಡಿಕೊಂಡಿದ್ದಾರೆ. 

ನವ್ಯಶ್ರೀಯಲ್ಲಿ ಮತ್ತೊಂದು ಪ್ರತಿಭೆ ಏನಿದೆ? ಈಕೆಯ ನಿಜವಾದ ವ್ಯಕ್ತಿತ್ವ ಏನೂ ಅನ್ನೋದನ್ನ ಬಿಗ್ ಬಾಸ್ ಅವಕಾಶ ಕೊಟ್ಟಾಗ ನವ್ಯಶ್ರೀ ಏಕೆ ಹೋಗಬಾರದು? ನವ್ಯಶ್ರೀ ಏಕೆ ಆಯ್ಕೆ ಆಗಬಾರದು? ಅಂತಾ ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್‌ಗೆ ನಾನು ಅರ್ಜಿ ಹಾಕಿಲ್ಲ ಆದ್ರೆ ನನಗೆ ಸಂಬಂಧಪಟ್ಟ ದಾಖಲೆ ಆ ವಾಹಿನಿಗೆ ಹೋಗಿವೆ ಕೆಲವೊಂದಿಷ್ಟು ಚರ್ಚೆ ಆಗಿದೆ  ಎಂದ ನವ್ಯಶ್ರೀ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಮೌನ ಪ್ರತಿಭಟನೆ ಮಾಡ್ತೀನಿ:  ರಾಜಕುಮಾರ ಟಾಕಳೆ ಬಂಧನ ಮಾಡಿ ಅಂತಾ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇನೆ. ಡಿಸಿಪಿ ಸ್ನೇಹಾರವರಿಗೆ ತಲುಪಿಸಲು ಹೇಳಿದ್ರು ಅವರಿಗೆ ತಲುಪಿಸಿದ್ದೇನೆ. ಹಲವು ನೊಂದ ಮಹಿಳೆಯರು ನನ್ನ ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ಆತನ ಬಂಧನ ಆಗಲಿ ಇಲ್ಲ ನನ್ನ ಬಂಧನ ಆಗಲಿ ಅಂತಾ ಮೌನವಾಗಿ ಪೊಲೀಸ್ ಆಯುಕ್ತರ ಕಚೇರಿ ಎದುರು ಬುಧವಾರ ಕುಳಿತುಕೊಳ್ತೀನಿ' ಎಂದು ತಿಳಿಸಿದ್ದಾರೆ‌

Follow Us:
Download App:
  • android
  • ios