ರಾಜ್ಯ ಸರ್ಕಾರದಿಂದ ಬಂಡಲ್ ಪ್ಯಾಕೇಜ್: ಪರಮೇಶ್ವರ ನಾಯ್ಕ
* ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜೂಜಾಟ, ಮಟ್ಕಾದಂತಹ ದಂಧೆಗಳು ಎಗ್ಗಿಲ್ಲದಂತೆ ನಡೆಯುತ್ತಿವೆ
* ಜನಪರ ಕಾಳಜಿ ಇದ್ದರೇ ಸರ್ಕಾರದ ಬೊಕ್ಕಸದಿಂದ ಪ್ಯಾಕೇಜ್ ನೀಡಲಿ
* ಬೆಳೆಗಳಿಗೆ ಬೆಲೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ
ಹೂವಿನಹಡಗಲಿ(ಮೇ.23): ಬಡವರ, ಶ್ರಮಿಕರ, ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸರ್ಕಾರ ಘೋಷಿಸಿರುವ ಪ್ಯಾಕೇಜ್ ಬಂಡಲ್ ಪ್ಯಾಕೇಜ್ ಎಂದು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಜರಿದಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ನೀಡುತ್ತಿರುವ ಪ್ಯಾಕೇಜ್‌ನಲ್ಲಿ 600 ಕೋಟಿ ಕಾರ್ಮಿಕ ಇಲಾಖೆಯ ಸೆಸ್‌ನಿಂದ ಸಂಗ್ರಹವಾಗಿರುವ ಶೇ. 1ರಷ್ಟು ಹಣ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ. ಈ ಹಣವನ್ನು ಕಾರ್ಮಿಕ ಅಭ್ಯುದಯಕ್ಕಾಗಿ ಬಳಕೆ ಮಾಡಿಕೊಳ್ಳಬೇಕು. ಜನಪರ ಕಾಳಜಿ ಇದ್ದರೇ ಸರ್ಕಾರದ ಬೊಕ್ಕಸದಿಂದ ಪ್ಯಾಕೇಜ್ ನೀಡಲಿ ಎಂದು ಸವಾಲು ಹಾಕಿದ್ದಾರೆ.
"
ರಾಜ್ಯ ಸರ್ಕಾರ ಘೋಷಿಸಿರುವ 1250 ಕೋಟಿ ಪ್ಯಾಕೇಜ್ ‘ಬಂಡಲ್ ಪ್ಯಾಕೇಜ್’ ಎಂದು ಲೇವಡಿ ಮಾಡಿರುವ ಅವರು, ಕೋವಿಡ್ ನೆಪದಲ್ಲಿ ರೈತರು ಬೆಳೆದ ಭತ್ತ, ರಾಗಿ, ಜೋಳ, ತರಕಾರಿ, ಹೂವು, ಹಣ್ಣು ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಲೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಖರೀದಿ ಕೇಂದ್ರಗಳನ್ನು ಮುಚ್ಚಿರುವುದು ಸರಿಯಲ್ಲ ಎಂದು ದೂರಿದರು.
'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್ ಬಡವರಿಗೆ ವರ'
ರಾಜ್ಯದ ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೂ 20 ಸಾವಿರ ಪರಿಹಾರ ಹಾಗೂ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಬೇಕಿದೆ ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜೂಜಾಟ, ಮಟ್ಕಾದಂತಹ ದಂಧೆಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಕೋವಿಡ್ ಸಂದರ್ಭದಲ್ಲಿ ಬಡ ಜನತೆಯ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಅಕ್ರಮ ದಂಧೆ ಅಧಿಕಾರಿಗಳಿಗೂ ಗೊತ್ತಿದ್ದರೂ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿಬೇಕೆಂದು ಒತ್ತಾಯಿಸಿದ್ದಾರೆ.