ಗದಗ[ಮಾ.02]: ಗೋಲಿ ಮಾರೋ ಸಾಲೋಂ ಕೋ ಅಂತ ಹೇಳಿದ್ದು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಘಟನೆಗಳಿಗೆ ಕಾಂಗ್ರೆಸ್‌ನ ಮಾಸ್ಟರ್ ಮೈಂಡ್ ಕಾರಣ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದರು. ಟಿವಿ, ಸೋಶಿಯಲ್ ಮೀಡಿಯಾದಲ್ಲಿ ಎಲ್ಲವೂ ಇದೆ. ಗೋಲಿ ಮಾರೋ ಸಾಲೋಂ ಕೋ ಎಂದು ಹೇಳಿದ್ದು ಯಾರು ಎನ್ನುವುದು ಗೊತ್ತಿದೆ. ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಪಾಟೀಲ, ಈಗಾಗಲೇ ದೆಹಲಿ ಹಿಂಸಾಚಾರದ ಘಟನೆ 38 ಜನ ಅಮಾಯಕರ ಜೀವ ಬಲಿ ಪಡೆದಿದೆ. ಶಾಂತ ಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾ ತ್ಮಕವಾಗಿ ತೆಗೆದುಕೊಂಡು ಹೋಗಿದ್ದೇ ಬಿಜೆಪಿಯವರು, ಅವರ ಪಕ್ಷದ ನಾಯಕರು ಏನೆಂದು ಮಾತನಾಡಿದ್ದಾರೆ ಎನ್ನುವುದು ಕೂಡಾ ಜಗಜ್ಜಾಹೀರವಾಗಿದೆ. ಇದು ಮೋದಿ ಹಾಗೂ ಅಮಿತ್ ಶಾ ಮೇಲೆ ಬಂದ ದೊಡ್ಡ ಕಳಂಕ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮ್ಮ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ನೀಡಿರೋ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪಾಟೀಲ, ನಮ್ಮ ವೀಕ್ನೆಸ್ ಗೊತ್ತಿದ್ದರೆ ಅದನ್ನು ಹೇಳೋ ದು ಬಿಡೋದು ಅವರಿಗೆ ಬಿಟ್ಟಿದ್ದು. ಅದನ್ನು ರಾಜಕಾರಣದಲ್ಲಿ ಇಟ್ಟುಕೊಂಡು ಕೂಡಬಾರದು. ಈ ಕುರಿತು ಹೆಚ್ಚಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ ಎಂದರು.

ಗೆಜೆಟ್ ನೊಟಿಫಿಕೇಶನ್ ಸಂತಸದಾಯ

ಕೇಂದ್ರ ಸರ್ಕಾರ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು ಹರ್ಷ ತಂದಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ. ಮಹದಾಯಿ ವಿಚಾರದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಶ್ರಮ ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಇದು ಇಲ್ಲಿಗೇ ಮುಗಿದಿಲ್ಲ, ಈಗ ಆರಂಭವಾಗಿದೆ. ಕಳಸಾಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಇಲಾಖೆ ಭೂಮಿ ನೀಡಲು ಒಪ್ಪಿದೆ. ಕೇಂದ್ರ ಸರ್ಕಾರದ ಆದೇಶವೊಂದೇ ಬಾಕಿಯಿದೆ. ಮುಂಬರುವ ಬಜೆಟ್‌ನಲ್ಲಿ 2 ಸಾವಿರ ಕೋಟಿ ಮೀಸಲಿಡುವ ಮೂಲಕ ರಾಜ್ಯ ಸರ್ಕಾರ ತನ್ನ ಇಚ್ಚಾಶಕ್ತಿ ತೋರಿಸಬೇಕು. ಕಾಮಗಾರಿಗೆ ಸಮಯ ನಿಗದಿ ಮಾಡಿ ಅದನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು, ರಾಜ್ಯ ಸರ್ಕಾರ ಮೈ ಮರೆತು ಕೂರುವಂತಿಲ್ಲ. ಅದಾಗಲೇ ಗೋವಾ ಸಿಎಂ ಸಾವಂತ್ ಸುಪ್ರೀಂ ಆದೇಶಕ್ಕೆ ತಡೆ ತರುತ್ತೇನೆ ಎಂದು ತಯಾರಾಗಿದ್ದಾರೆ. ಅವರು ಯೋಜನೆಗೆ ತಡೆಯಾಗುವ ರೀತಿಯಲ್ಲಿ ಪ್ರಯತ್ನಿ ಸುತ್ತಿದ್ದಾರೆ. ಇದನ್ನು ಹಾಗೂ ಭೌತಿಕವಾಗಿ ಆಗಬೇ ಕಾಗಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವತ್ತವೂ ಗಮನ ನೀಡಬೇಕಿದೆ ಎಂದರು. ಈ ವಿಷಯದಲ್ಲಿ ಸರ್ಕಾರ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು. 

ಜಲಸಂಪನ್ಮೂಲ ಇಲಾಖೆಯ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರ ಸಲಹೆ ಸೂಚನೆಗಳನ್ನು ಪಡೆಯುತ್ತೇವೆ ಎನ್ನುವ ಸಚಿವ ರಮೇಶ ಜಾರಕಿ ಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾಡಿನ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತೇನೆ. ನೀರಾವರಿ ವಿಷಯದಲ್ಲಿ ನನ್ನಲ್ಲಿರುವ ಜ್ಞಾನ ನೀಡಲು ಸಿದ್ಧನಿದ್ದೇನೆ ಎಂದರು. 

ದೊರೆಸ್ವಾಮಿ ಅವರು ಪಾಕ್ ಪರ ಜಯಘೋಷ ಕೂಗಿದ ಅಮೂಲ್ಯ ಭೇಟಿ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ದೊರೆಸ್ವಾಮಿ ಅವರು ಅಮೂಲ್ಯಳನ್ನು ಯಾವಾಗ ಭೇಟಿ ಮಾಡಿದ್ದರು ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ, ಈ ಬಗ್ಗೆ ವಿರೋಧ ಪಕ್ಷಗಳು ಯಾಕೆ ಪ್ರತಿಕ್ರಿಯಿಸಲ್ಲ ಎನ್ನುವ ಸಚಿವ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ ಎಚ್ಕೆ ನಾವು ಯಾವಾಗ ಪ್ರತಿಕ್ರಿಯಿಸಬೇಕು ಎನ್ನುವುದು ಗೊತ್ತಿದೆ, ಈಶ್ವರಪ್ಪನವರು ಹೇಳಿದಾಗಲೆಲ್ಲಾ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ, ದೊರೆಸ್ವಾಮಿ ಈ ನಾಡಿನ ದೊಡ್ಡ ಆಸ್ತಿಯಾಗಿದ್ದಾರೆ. ಅವರಿಗೆ ಅಗೌರವ ತರು ವ ರೀತಿಯಲ್ಲಿ ಮಾತನಾಡಬಾರದು ಎಂದರು.