ಬಿಜೆಪಿಯ ಬರ ಅಧ್ಯಯನ ಬರೀ ಗಿಮಿಕ್: ಅಜಯ್ ಸಿಂಗ್ ವಾಗ್ದಾಳಿ
ಬಿಜೆಪಿಯ ನಾಯಕರು ಬರ ಅಧ್ಯಯನ ಮಾಡೋದೆಲ್ಲವೂ ನಾಟಕ, ಇದು ಗಿಮಿಕ್, ಸಂಸತ್ ಚುನಾವಣೆಗಾಗಿ ನಡೆಯುತ್ತಿರುವ ಷೋ ಎಂದು ಟೀಕಿಸಿದ ಅವರು, ಜನ ಮತ ಹಾಕಿ ಬಿಜೆಪಿಯ 25 ಮಂದಿಯನ್ನು ದಿಲ್ಲಿಗೆ ಕಳುಹಿಸಿದ್ದಾರೆ. ಅದರ ಕೃತಜ್ಞತೆ ಸ್ಮರಿಸಲಾದರೂ ಸಂಸದರು ಹೆಚ್ಚಿನ ಅನುದಾನ ತರಲಿ ಎಂದ ಡಾ.ಅಜಯ್ ಸಿಂಗ್
ಕಲಬುರಗಿ(ನ.09): ಬಿಜೆಪಿ ಮುಖಂಡರು ತಂಡ ರಚಿಸಿಕೊಂಡು ಹಳ್ಳಿ ಸುತ್ತುತ್ತ ನಡೆಸುತ್ತಿರುವ ಬರ ಅಧ್ಯಯನ ಬರೀ ಗಿಮಿಕ್, ರಾಜಕೀಯ ಎಂದು ಜರಿದಿರುವ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಇವರು ಹೀಗೆ ಹಳ್ಳಿ ಸುತ್ತಿ ನಾಟಕ ಆಡೋದು ಬಿಟ್ಟು 25 ಸಂಸದರು ಒಂದಾಗಿ ಪ್ರಧಾನಿ ಮೋದಿಯವರಿಗೆ ಭೇಟಿ ಮಾಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲಿ ಎಂದು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಬರ ಅಧ್ಯಯನ ಮಾಡೋದೆಲ್ಲವೂ ನಾಟಕ, ಇದು ಗಿಮಿಕ್, ಸಂಸತ್ ಚುನಾವಣೆಗಾಗಿ ನಡೆಯುತ್ತಿರುವ ಷೋ ಎಂದು ಟೀಕಿಸಿದ ಅವರು, ಜನ ಮತ ಹಾಕಿ ಬಿಜೆಪಿಯ 25 ಮಂದಿಯನ್ನು ದಿಲ್ಲಿಗೆ ಕಳುಹಿಸಿದ್ದಾರೆ. ಅದರ ಕೃತಜ್ಞತೆ ಸ್ಮರಿಸಲಾದರೂ ಸಂಸದರು ಹೆಚ್ಚಿನ ಅನುದಾನ ತರಲಿ ಎಂದರು.
ವಿಜಯೇಂದ್ರ ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಮಾತಾಡಲಿ: ಪ್ರಿಯಾಂಕ್ ಖರ್ಗೆ ತಿರುಗೇಟು
ರಾಜ್ಯ ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿ ಯೋಜನೆ ರೈತರಿಗೆ ಸೇರಿದಂತೆ ಜನರೆಲ್ಲರಿಗೂ ಕೊಡುಗೆ ನೀಡಿದೆ. ಇದೀಗ ಬರಗಾಲವೆಂದು ತಾಲೂಕುಗಳನ್ನು ಘೋಷಿಸಿ ಹೆಚ್ಚಿನ ಕಾಮಗಾರಿ ಕೈಗೆತ್ತಿಕೊಂಡಿದೆ. ಕೇಂದ್ರದ ನೆರವು ದೊರಕಿದಲ್ಲಿ ಇನ್ನೂ ಹೆಚ್ಚಿನ ಸಹಕಾರ ರೈತರಿಗೆ ಸಿಗಲಿದೆ ಎಂದರು. ಸರ್ಕಾರ ಸುಭದ್ರವಾಗಿದೆ. ಯಾರೂ ಕಾಂಗ್ರೆಸ್ ಸರ್ಕಾರವನ್ನು ಅಸ್ತಿರಗೊಳಿಸಲು ಸಾಧ್ಯವಿಲ್ಲವೆಂದ ಅವರು ಡಾ. ಅಜಯ್ ಸಿಂಗ್ ತಾವು ಮಂತ್ರಿ ಹುದ್ದೆ ಆಕಾಂಕ್ಷಿ ಎಂಬುದನ್ನು ಪುನರುಚ್ಚರಿಸಿದರು.
ಸಂಸತ್ ಚುನಾವಣೆ ನಂತರ ಮಂತ್ರಿ ಮಂಡಲದಲ್ಲಿ ಬದಲಾವಣೆ ಮಾಡುವ ವಿಚಾರವಾಗಿ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತ ಜನಪರವಾಗಿ ಸಾಗಿದೆ ಎಂದರು.