ಕಲಬುರಗಿ(ನ.21): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾದ ನಂತರ ಕಲಬುರಗಿ ಅಕ್ರಮಗಳ ತವರಾಗುತ್ತಿದೆ, ಭ್ರಷ್ಟಾಚಾರ, ಬೆಟ್ಟಿಂಗ್‌, ಸ್ಯಾಂಡ್‌ ಮಾಫಿಯಾ, ಜೂಜು ಅಡ್ಡೆಗಳ ತಾಣವಾಗುತ್ತಿದೆ ಎಂದು ದೂರಿರುವ ಕಾಂಗ್ರೆಸ್‌ ಇವೆಲ್ಲ ಅಪಸವ್ಯಗಳ ವಿರುದ್ಧ ಉಗ್ರ ಹೋರಾಟ ನಡೆಸಲು ಸಂಕಲ್ಪಿಸಿದೆ.

ಪಕ್ಷದ ನಾಯಕರಾದ ಡಾ.ಶರಣಪ್ರಕಾಶ ಪಾಟೀಲ್‌, ಬಿ.ಆರ್‌. ಪಾಟೀಲ್‌, ಡಿಸಿಸಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌ ಸುದ್ದಿಗಾರೊಂದಿಗೆ ಮಾತನಾಡಿ, ಬಿಜೆಪಿಯ ಇಲ್ಲಿನ ನಾಯಕರು ಸಂವೇದನೆ ಕಳೆದುಕೊಂಡಿದ್ದಾರೆ. ದುರಾಡಳಿತ ಮುಗಿಲು ಮುಟ್ಟಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಶಾಸಕರೊಬ್ಬರ ಅಳಿಯ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿರುವ ಕುರಿತು ಮಾಹಿತಿ ಪಡೆದು ಸೊಲ್ಲಾಪುರ ಪೊಲೀಸರು ದಾಳಿ ನಡೆಸುತ್ತಾರೆ. ಆದರೆ, ಕಲಬುರಗಿ ಪೊಲೀಸರು ಮೈ ಮರೆಯುತ್ತಾರೆಂದರೆ ಜಿಲ್ಲೆಯಲ್ಲಿ ಆಡಳಿತ ಕುಸಿತ ಕಂಡಿರುವುದರ ಸೂಚನೆ ಎಂದು ಡಾ.ಶರಣಪ್ರಕಾಶ ಆಕ್ರೋಶ ಹೊರಹಾಕಿದರು.

ಪಿಡಬ್ಲೂಡಿ, ಆರ್‌ಡಿಪಿಆರ್‌, ಜಿಪಂ ಎಂಜಿನಯರಿಂಗ್‌ ಇಲ್ಲೆಲ್ಲಾ ಟೆಂಡರ್‌ ಪಾರದರ್ಶಕತೆ ಕಾನೂನು ಗಾಳಿಗೆ ತೂರಿದ್ದಾರೆ. ಬಿಜೆಪಿಯವರಿಗೆ ಬೇಕಾದ ಗುತ್ತಿಗೆದಾರರಿಗೆ, ಹೆಚ್ಚಿನ ಮೊತ್ತದಲ್ಲಿ ಟೆಂಡರ್‌ ಹಾಕಿದವರಿಗೆ ಟೆಂಡರ್‌ ಆಗುತ್ತಿವೆ. ಶೇ.10ರಿಂದ ಶೇ.30ರ ಕಮಿಷನ್‌ ದಂಧೆ ಸಾಗಿದೆ. ಇಂತಹವರನ್ನೆಲ್ಲ ಪಟ್ಟಿಮಾಡಿ, ಅಲ್ಲಿನ ಅಧಿಕಾರಿಗಳು, ಎಂಜಿನಿಯರ್‌ಗಳ ವಿರುದ್ಧ ಎಸಿಬಿಗೆ, ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ ಎಂದು ಡಾ.ಶರಣಪ್ರಕಾಶ ಎಚ್ಚರಿಕೆ ನೀಡಿದ್ದಾರೆ.

ನಾವಿನ್ನೂ ಸತ್ತಿಲ್ಲ, ಜನಪರವಾಗಿ ಚಿಂತಿಸುವವರು ಜೀವಂತವಾಗಿದ್ದೇವೆ. ಕಲಬುರಗಿಯಲ್ಲಿ ತಾವು ಜಿಲ್ಲಾ ಸಚಿವರಾಗಿದ್ದಾಗ, ಪ್ರಿಯಾಂಕ್‌ ಖರ್ಗೆ ಆಡಳಿತದಲ್ಲಿ ಇಂತಹ ಜನ ವಿರೋಧಿ ಚಟುವಟಿಕೆಗಳಿಗೆ ಆಸ್ಪದ ನೀಡಿರಲಿಲ್ಲ ಎಂದ ಅವರು, ಜಿಲ್ಲೆಯ ಯುವಕರು ಬೆಟ್ಟಿಂಗ್‌ ವಿಷ ವರ್ತುಲದಲ್ಲಿ ಬಂಧಿಯಾಗುತ್ತಿದ್ದಾರೆ, ಇದಕ್ಕೆ ಬಿಜೆಪಿ ನಾಯಕರೇ ಹೊಣೆ. ಇಂತಹ ಅಕ್ರಮಗಳಿಗೆ ಹಿರಿಯ ನಾಯಕರಾದಂತಹ ಮಾಲೀಕಯ್ಯಾ ಗುತ್ತೇದಾರ್‌ ಬೆಂಬೆಲಿಸುತ್ತಾರೆ. ಬೆಟ್ಟಿಂಗ್‌ ದಂಧೆ ಕಲಬುರಗಿಯಲ್ಲಿ ನಡೆಸೋರು ಯಾರೆಂದು ಎಲ್ಲರಿಗೂ ಗೊತ್ತಿದೆ ಎಂದರು.

ಕಲಬುರಗಿ: ನಿಧಿಗಾಗಿ ಭೂಮಿ ಅಗೆಯುತ್ತಿದ್ದವರ ಬಂಧನ

ಸ್ಯಾಂಡ್‌ ಮಾಫಿಯಾ ಜಿಲ್ಲೆಯಲ್ಲಿ ಬೇರೂರಿದೆ. ರಾಜಕೀಯದಲ್ಲಿದ್ದವರೇ ಇದನ್ನು ಪೋಷಿಸುತ್ತಿದ್ದಾರೆ. ಈಗಿನ ಎಸ್ಪಿ ಇದಕ್ಕೆ ಕಡಿವಾಣ ಹಾಕಿ ತಮ್ಮ ಸಾಮರ್ಥ್ಯ ತೋರಿಸಲಿ ಎಂದು ಸವಾಲು ಹಾಕಿದರು. 1 ಟ್ರ್ಯಾಕ್ಟರ್‌ ಮರಳು ಹೊರ ಬಂದರೆ ಠಾಣೆಗೆ 30 ಸಾವಿರ ರು. ಹಫ್ತಾ ಹೋಗುತ್ತದೆಂದು ಪೊಲೀಸರ ವಿರುದ್ಧ ಗುಡುಗಿದರು.

ಕಾರಜೋಳ್‌ ಕಾಯಂ ಗಾಯಬ್‌:

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ್‌ ಕಾಯಂ ಗಾಯಬ್‌ ಆಗಿದ್ದಾರೆ. ಇವರು ಆಗಾಗ ಫ್ಲ್ಯಾಷ್‌ ವಿಸಿಟ್‌ ಬಂದು ಹೋಗುತ್ತಿದ್ದಾರೆ, ಅದೂ ಯಾಕೆ ಬರುತ್ತಿದ್ದಾರೋ ಗೊತ್ತಿಲ್ಲ. ಜನರ ನೋವು, ಯಾತನೆ ಆಲಿಸಲಂತೂ ಅಲ್ಲ, ನೆರೆ, ಮಳೆ ಬಂದಾಗಲೇ ಬರಲಿಲ್ಲ. ಆಗಾಗ ಅವರು ಬರೋದರ ಹಿಂದಿನ ಗುಟ್ಟೇನೋ? ಎಂದು ಲೇವಡಿ ಮಾಡಿದರು.

ಮಳೆ, ನೆರೆಗೂ ಸ್ಪಂದಿಸುತ್ತಿಲ್ಲ ಬಿಜೆಪಿ ಸರ್ಕಾರ!

ಜಿಲ್ಲೆಯಲ್ಲಿ 3 ಬಾರಿ ಮಳೆ, ನೆರೆ ಬಂದು ರೈತರು, ಜನ ಹಾಳಾದರೂ ಪರಿಹಾರ ನೀಡೋರು ಗತಿ ಇಲ್ಲ. ಎನ್‌ಡಿಆರ್‌ಎಫ್‌ ಅನುದಾನವೂ ಬಂದಿಲ್ಲ. 241 ಕೋಟಿ ರು. ಮೂಲ ಸವಲತ್ತು ಹಾಳಾಗಿದೆ ಎಂಬ ವರದಿಗಳಿದ್ದರೂ ರಸ್ತೆಗೆ ಬುಟ್ಟಿಮಣ್ಣು ಹಾಕಿಲ್ಲ. ರೈತರಿಗೆ ಪರಿಹಾರದ ನಯಾ ಪೈಸೆ ಸಿಕ್ಕಿಲ್ಲ ಎಂದು ಗುಡುಗಿದ ಬಿ.ಆರ್‌. ಪಾಟೀಲ್‌ ಇಂತಹ ಜನ ವಿರೋಧಿ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಕಾಂಗ್ರೆಸ್‌ ಹೋರಾಟ ಕಟ್ಟೋದು ಅನಿವಾರ್ಯವಾಗಿದೆ ಎಂದರು.

ಯಡಿಯೂರಪ್ಪ ದೆಹಲಿಗೆ ಹೋಗಿ ಸಂಪುಟ ಸರ್ಕಸ್‌ ಮಾಡುತ್ತಿದ್ದಾರೆಯೇ ಹೊರತು ಜನರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತಿಲ್ಲ. ಈ ವಯಸ್ಸಲ್ಲಿ ದಿಲ್ಲಿ ನಾಯಕರ ಮುಂದೆ ಯಡಿಯೂರಪ್ಪ ಕೈ ಜೋಡಿಸುವುದು ಬೇಕಿತ್ತೆ? ಇದನ್ನೆಲ್ಲ ಬಿಟ್ಟು ಅವರು ರಾಜೀನಾಮೆ ನೀಡಿ ರಾಜ್ಯದ ಹಿರಿಮೆ ಎತ್ತಿ ಹಿಡಿಯಲಿ ಎಂದರು.