ಕಲಬುರಗಿ(ಏ.29): ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ಹೊರಹಾಕಿರುವ ಕಾಂಗ್ರೆಸ್‌ ಮುಖಂಡರು ಇಡೀ ರಾಜ್ಯದಲ್ಲಿ ಸೋಂಕಿನಿಂದ ಸಂಭವಿಸಿರುವ 20 ಸಾವುಗಳಲ್ಲಿ ಕಲಬುರಗಿಯೊಂದರಲ್ಲೇ 5 ಸಾವು ವರದಿಯಾಗಿವೆ. ಶೇ.25 ರಷ್ಟು ಪ್ರಮಾಣದ ಸಾವು ನೋವು ಇದೇ ಜಿಲ್ಲೆಯಲ್ಲಾದರೆ ಇದಕ್ಕೆ ಹೊಣೆಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜೇವರ್ಗಿ ಶಾಸಕ, ವಿಧಾನಸಭೆ ಮುಖ್ಯ ಸಚೇತಕ ಡಾ.ಅಜಯ್‌ ಸಿಂಗ್‌, ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ನಾಲ್ಕು ತಿಂಗಳು ಮಗು ಸೇರಿದಂತೆ ಐವರಿಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಕಲಬುರಗಿ ಜನತೆ

ಕಲಬುರಗಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಬಗ್ಗೆ ಯಾರನ್ನ ಕೇಳಬೇಕು ಹೇಳಿರಿ? ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಇರೋದಿಲ್ಲ, ಏಕಾಏಕಿ ಸಭೆ ಮಾಡಿ ಹೋದವರು ಈ ಜಿಲ್ಲೆಯತ್ತ ಮರಳಿ ನೋಡೋದಿಲ್ಲ, ಸಭೆಗೆ ಬರುವಂತೆ ನಮಗೆ ಏಕಾಏಕಿ ಕರೆ ಮಾಡಲಾಗುತ್ತಿದೆ. ಇದರಿಂದಾಗಿ ಅವರ ಸಭೆಗೂ ಹಾಜರಾಗೋದು ಆಗುತ್ತಿಲ್ಲವೆಂದು ಖರ್ಗೆ ಹಾಗೂ ಡಾ. ಅಜಯ್‌ ದೂರಿದರು.

ಕಾಂಗ್ರೆಸ್‌ ಶಾಸಕರ ವಿಶ್ವಾಸಕ್ಕೆ ತೆಗೆದುಕೊಳ್ಳದ ಸರ್ಕಾರ:

ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕಾಂಗ್ರೆಸ್‌ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿ 19 ಗಂಟೆಗೆ ಓರ್ವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಕಲಬುರಗಿಯಲ್ಲಿ ಹೆಚ್ಚಾಗಿದೆ. ಹೀಗಿದ್ದರೂ ಸರ್ಕಾರ ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಜಿಲ್ಲೆಯಲ್ಲಿ ಒಂದು ಕೋವಿಡ್‌-19 ಆಸ್ಪತ್ರೆ ಇರಬೇಕು, ಆದರೆ ಜಿಲ್ಲೆಯಲ್ಲಿ ಇ.ಎಸ್‌.ಐ ಮತ್ತು ಜಿಮ್ಸ… ಆಸ್ಪತ್ರೆ ಸೇರಿದಂತೆ ಎರಡು ಕಡೆ ಕೋವಿಡ್‌-19 ಆಸ್ಪತ್ರೆ ಮಾಡಲಾಗಿದೆ. ಇ.ಎಸ್‌.ಐ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಾದ ಪಿಪಿಇ ಕಿಟ್‌ ಮತ್ತು ಮಾಸ್ಕ್‌ ಒದಗಿಸಿಲ್ಲ. ಕ್ವಾರಂಟೈನ್‌ ಕೇಂದ್ರದಲ್ಲಿರುವ ಜನರಿಗೆ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಿಲ್ಲ. ಒಟ್ಟಾರೆ ಈ ಸರ್ಕಾರ ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕೊರೋನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು, ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಾದ ಪಿಪಿಇ ಕಿಟ್‌ ಮತ್ತು ಮಾಸ್ಕ್‌ ಒದಗಿಸಬೇಕು, ಕ್ವಾರಂಟೈನ್‌ ಕೇಂದ್ರದಲ್ಲಿರುವವರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೊರೋನಾಕ್ಕೆ ನಾಲ್ಕು ಮಂತ್ರಿಗಳೆ?

ಕೊರೋನಾ ತುರ್ತು ಸಂದರ್ಭ ಸರಿಯಾಗಿ ನಿಭಾಯಿಸಲಾಗುತ್ತಿಲ್ಲ ಎನ್ನಲು ರಾಜ್ಯದಲ್ಲಿ ಕೊರೋನಾಕ್ಕೆಂದೇ ನಾಲ್ವರು ಮಂತ್ರಿಗಳಿರೋದೇ ಕನ್ನಡಿ ಎಂದು ಪ್ರಿಯಾಂಕ್‌ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಒಬ್ಬ ಆರೋಗ್ಯ ಮಂತ್ರಿ ಇಬ್ಬರಿಬ್ಬರು ಕೊರೊನಾ ಮಂತ್ರಿ, ಸಚಿವರುಗಳ ಕಿತ್ತಾಟದಿಂದಾಗಿ ವರದಿ ಓದಲು ಒಬ್ಬ ಕೊರೊನಾ ಮಂತ್ರಿ, ಸುರೇಶಕುಮಾರ ಬರೆದಿದ್ದು ಕೇವಲ ಓದಿ ಹೋಗ್ತಾರೆ ಎಂದು ಗೇಲಿ ಮಾಡಿದರು. ಜಿಲ್ಲೆಗೊಂದು ಟೆಸ್ಟಿಂಗ್‌ ಸೆಂಟರ್‌ ಪ್ರಾರಂಭಿಸಲಾಗುವುದೆಂದು ಸರ್ಕಾರ ಸದನದಲ್ಲಿ ಹೇಳಿತ್ತು. ಇದುವರೆಗೆ ಇದು ಯಾಕೆ ಅನುಷ್ಠಾನಕ್ಕೆ ಬಂದಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.