ಪಿರಿಯಾಪಟ್ಟಣ (ಫೆ.12):  ತಾಲೂಕಿನಲ್ಲಿ ಷಡ್ಯಂತ್ರದ ಮೂಲಕ ನೀಚತನದ ರಾಜಕಾರಣ ಮಾಡುತ್ತಿರುವ ಜೆಡಿಎಸ್‌ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಶಾಸಕ ಕೆ. ವೆಂಕಟೇಶ್‌ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿ ಬಳಿ ಆವರ್ತಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಅವರು ಮಾತನಾಡಿದರು. ತಾಲೂಕಿನ 34 ಗ್ರಾಪಂ ಗಳಲ್ಲಿ 21 ರಿಂದ 22 ಗ್ರಾಪಂ ಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಅಧಿಕಾರ ಪಡೆದಿದ್ದು ಎರಡು ಮೂರು ಕಡೆ ನಮ್ಮ ಪಕ್ಷದ ಬೆಂಬಲಿಗರನ್ನು ಜೆಡಿಎಸ್‌ ನವರು ಹೆದರಿಸಿ ಬೆದರಿಸಿ ಪಕ್ಷಾಂತರ ಮಾಡಿದ ಕಾರಣ ಅಧಿಕಾರ ಕೈತಪ್ಪಿದೆ. ಸುದೀರ್ಘ ರಾಜಕಾರಣದ ಅನುಭವದಲ್ಲಿ ಯಾವಾಗಲೂ ಪಕ್ಷಾಂತರ ಮಾಡಿಸಿ ಅಧಿಕಾರ ಗದ್ದುಗೆ ಏರಿಲ್ಲ, ಕಾಂಗ್ರೆಸ್‌ ಪಕ್ಷದ ಬೆಂಬಲಿಗರನ್ನು ಹೆದರಿಸಿ ಬೆದರಿಸುವ ಮೂಲಕ ನೀಚತನದ ರಾಜಕಾರಣಕ್ಕೆ ಜೆಡಿಎಸ್‌ ಮುಂದಾಗಿದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರೇ ಉತ್ತರ ನೀಡುತ್ತಾರೆ ಅಲ್ಲಿಯವರೆಗೆ ಕಾರ್ಯಕರ್ತರು ತಾಳ್ಮೆಯಿಂದ ಕಾದು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.

JDSಗೆ ಬಿಗ್‌ ಶಾಕ್.. ಕಾಂಗ್ರೆಸ್‌ ಸೇರ್ಪಡೆಗೆ ಮುಂದಾದ ಯುವ ನಾಯಕ.. ಡಿಕೆಶಿ ಭೇಟಿ .

ಕಾಂಗ್ರೆಸ್‌ ಬೆಂಬಲಿತ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಚುನಾವಣೆಯಲ್ಲಿ ಸೋತ ಸ್ಪರ್ಧಿಗಳಿಗೆ ಫೆ. 20 ರಂದು ಪಟ್ಟಣದ ಕಾಂಗ್ರೆಸ್‌ ಕಚೇರಿ ಬಳಿ ಬೆಳಿಗ್ಗೆ 11 ಗಂಟೆಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾ ಮುಖಂಡರುಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕಾರ್ಯಕರ್ತರು ಯಶಸ್ವಿಗೊಳಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್‌. ನಿರೂಪಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಹಮತ್‌ ಜಾನ್‌ ಬಾಬು, ಡಿ.ಟಿ. ಸ್ವಾಮಿ, ಖಜಾಂಚಿ ಬಿ.ಜೆ. ಬಸವರಾಜು, ಆವರ್ತಿ ಗ್ರಾಪಂ ಅಧ್ಯಕ್ಷ ಎಂ.ಕೆ. ಶಿವು, ಉಪಾಧ್ಯಕ್ಷೆ ವಿಂಧ್ಯಶ್ರಿ, ಸದಸ್ಯ ಮುತ್ತಿನಮುಳುಸೋಗೆ ಶಿವಕುಮಾರ್‌, ಅನಿಲ್‌ ಕುಮಾರ್‌, ಮುಖಂಡರಾದ ಲಕ್ಷ್ಮೇಗೌಡ, ಬಿ.ಎನ್‌. ಚಂದ್ರಶೇಖರ್‌, ನಾಗಾನಂದ್‌, ಭುಜಂಗ, ಧರ್ಮ, ಶಿವರುದ್ರ ಇದ್ದರು.