ಕೊಪ್ಪಳ(ಫೆ.04): ಕಾಂಗ್ರೆಸ್‌ ಮುಖಂಡ ಹಾಗೂ ವಿವಿಧ ಎನ್‌ಜಿಒಗಳ ಅಧ್ಯಕ್ಷರಾಗಿರುವ ಸಿದ್ದಲಿಂಗಯ್ಯ ಹಿರೇಮಠ ಬಿಜೆಪಿ ಹೊಸ್ತಿಲಲ್ಲಿ ಇದ್ದಾರೆ.

ಕಳೆದೊಂದು ತಿಂಗಳಿಂದ ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಳ್ಳುತ್ತಿರುವ ಅವರು, ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವಲ್ಲಿ ಸಫಲವಾಗಿದ್ದಾರೆ. ಸ್ಥಳೀಯ ನಾಯಕರೊಂದಿಗೆ ಚರ್ಚೆ ಮಾಡದೆ ಮತ್ತು ಬೆಂಬಲ ಪಡೆಯದೇ ಏಕಾಏಕಿ ಅವರು ರಾಜ್ಯ ನಾಯಕರೊಂದಿಗೆ ಬಿಜೆಪಿಗೆ ಸೇರ್ಪಡೆ ತಯಾರಿ ನಡೆಸಿದಂತೆ ಕಾಣುತ್ತಿದೆ.

ಕೊಪ್ಪಳ: ಸ್ವತಃ ಚರಂಡಿ ಸ್ವಚ್ಛಗೊಳಿಸಿದ ಗವಿಸಿದ್ಧೇಶ್ವರ ಶ್ರೀ..!

ಈಗಾಗಲೇ ಸಿದ್ದಲಿಂಗಯ್ಯ ಹಿರೇಮಠ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ , ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಸೇರಿದಂತೆ ಅರುಣಕುಮಾರ್‌, ರವಿಕುಮಾರ, ಭಗವಂತ ಖೂಬಾ, ಶಂಕರಗೌಡ ಪಾಟೀಲ್‌ ಹಾಗೂ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿದ್ದಾರೆ.

ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದರೆ ಅವರು ಈಗಾಗಲೇ ಬಿಜೆಪಿ ಹೊಸ್ತಿಲಲ್ಲಿ ನಿಂತಿರುವುದು ಪಕ್ಕಾ. ಆದರೂ ಇನ್ನೂ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿಲ್ಲ. ಈ ದಿಸೆಯಲ್ಲಿ ಪ್ರಯತ್ನ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಲು ಸಿದ್ದಲಿಂಗಯ್ಯ ಹಿರೇಮಠ ಅವರು ನಿರಾಕರಣೆ ಮಾಡಿದ್ದಾರೆ. ಬಿಜೆಪಿ ನಾಯಕರನ್ನು ಭೇಟಿಯಾಗಿರುವುದು ನಿಜ. ಆದರೆ, ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ.