ಪಕ್ಷ ಬಿಡುವ ಸುಳಿವು ನೀಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ
- ನಾನು ಮುಂದಿನ ವಿಧಾನಸಭಾ ಚುನಾವಣೆಗೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ
- ಟಿಕೆಟ್ ನೀಡದಿದ್ದರೆ ಮುಂದಿನ ನನ್ನ ನಿರ್ಧಾರವನ್ನು ಕಾದು ನೋಡಿ
ಶಿರಸಿ (ಅ.05): ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ (Haliyala Constituency) ನಾನು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದೊಮ್ಮೆ ಟಿಕೆಟ್ ನೀಡದಿದ್ದರೆ ಮುಂದಿನ ನನ್ನ ನಿರ್ಧಾರವನ್ನು ಕಾದು ನೋಡಿ ಎಂದು ವಿಧಾನಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ (Shrikanth Ghotnekat) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 40 ವರ್ಷದಿಂದ ನಾನೂ ರಾಜಕೀಯದಲ್ಲಿ ಇದ್ದೇನೆ. ಬೇರೆ ಪಕ್ಷದ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲು ಇದುವರೆಗೂ ಯಾವುದೇ ನೀತಿ ನಿಯಮ ಇರಲಿಲ್ಲ. ಆದರೆ, ಇತ್ತೀಚೆಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ಹಿರಿಯ ಮುಖಂಡರ ಅನುಮತಿ ಬೇಕು ಎಂಬ ನಿಯಮ ಮಾಡಿದ್ದಾರೆ. ಇದರಿಂದಾಗಿ ನನ್ನ ಹಾದಿ ನಾನು ಹಿಡಿದಿದ್ದೇನೆ. ಅವರ ಹಾದಿ ಅವರು ಹಿಡಿದಿದ್ದಾರೆ. ಹಾಗೆಂದು ಹಳಿಯಾಳದಲ್ಲಿ ಕಾಂಗ್ರೆಸ್ (Congress) ಇಬ್ಭಾಗ ಆಗಿದೆ ಎಂದು ಹೇಳುವುದು ಸರಿಯಲ್ಲ ಎಂದು ಆರ್.ವಿ. ದೇಶಪಾಂಡೆ (RV Deshpande) ಹೆಸರು ಹೇಳದೆ ಟಾಂಗ್ ನೀಡಿದರು.
ಕಾಂಗ್ರೆಸ್ ಸೇರ್ಪಡೆ ಲಿಸ್ಟ್‌ಗೆ ಮತ್ತೋರ್ವ ಮುಖಂಡ : ಖಚಿತ ಪಡಿಸಿದ ನಾಯಕ
ಮುಂಬರುವ ವಿಧಾನಸಭೆ ಚುನಾವಣೆಗೆ ನಾನು ಟಿಕೆಟ್ ಆಕಾಂಕ್ಷಿ ಹೌದು, ಅದರಲ್ಲಿ ಎರಡು ಮಾತಿಲ್ಲ. ಒಂದೊಮ್ಮೆ ಟಿಕೆಟ್ ನೀಡಿಲ್ಲ ಎಂದಾದರೆ ನನ್ನ ಮುಂದಿನ ನಿರ್ಧಾರವನ್ನು ಕಾದು ನೋಡಿ. ಪಕ್ಷದ ಸ್ಥಿತಿ-ಗತಿ ನೋಡಿ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಕೇಳಿ ನಿರ್ಧಾರ ಕೈಗೊಳ್ಳುತ್ತೇನೆ. ನನ್ನ ಜನಪ್ರಿಯತೆಯನ್ನು ಸಹಿಸದ ಕೆಲವರು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದೂ ಗಮನಕ್ಕೆ ಬಂದಿದೆ ಎಂದರು.
ಇಬ್ಬರ ನಡುವಿನ ವಿರಸ
ಜೋಯಿಡಾ-ಹಳಿಯಾಳ ಕ್ಷೇತ್ರದ ಕಾಂಗ್ರೆಸ್ ಇಬ್ಭಾಗವಾಗುವುದೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಶಾಸಕ ಆರ್.ವಿ. ದೇಶಪಾಂಡೆ-ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಅಭ್ಯರ್ಥಿ ಎಂದು ಘೋಟ್ನೇಕರ್ ಘೋಷಿಸಿದ್ದಾರೆ. ಜತೆಗೆ ಹಲವು ದಿನಗಳಿಂದ ಜನರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆರ್.ವಿ. ದೇಶಪಾಂಡೆ ಮುಂದಿನ ನಡೆ ಏನು? ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ? ಎನ್ನುವ ಕುತೂಹಲ ಜನರಲ್ಲಿದೆ.
ಹಳಿಯಾಳ, ದಾಂಡೇಲಿ, ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಘೋಟ್ನೇಕರ್ ಅವರನ್ನು ಸಾಕಷ್ಟು ಕಾಡಿಸುತ್ತಿದ್ದಾರೆ. ಅವರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅಸಡ್ಡೆ ತೋರಿಸುತ್ತಿರುವುದು, ಅವರ ಬಗ್ಗೆ ಶಾಸಕ ದೇಶಪಾಂಡೆ ಅವರಿಗೆ ತಪ್ಪುಕಲ್ಪನೆ ಮೂಡಿಸುತ್ತಿರುವುದು, ಕೆಲವೇ ಕೆಲವರ ಗುಂಪು ಕಟ್ಟಿತಮ್ಮವರ ಕೆಲಸ ಅಷ್ಟೇ ಮಾಡುವುದು, ಹಲವಾರು ಕಾಮಗಾರಿಗಳನ್ನು ತಮಗೆ ಹೇಗೆ ಬೇಕೋ ಹಾಗೆ ದೇಶಪಾಂಡೆ ಅವರಿಂದ ಮಾಡಿಸಿಕೊಳ್ಳುವುದು ಕಾಂಗ್ರೆಸ್‌ನ ಒಂದು ವಲಯದವರ ಆಕ್ರೋಶಕ್ಕೆ ಕಾರಣವಾಗಿದೆ.