ಬೆಂಗಳೂರು :  ಬಿಬಿಎಂಪಿ ತ್ಯಾಜ್ಯ ನಿರ್ವಹಣೆ ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಈ ಬಗೆಗಿನ ಕಾರ್ಯಾದೇಶಕ್ಕೆ ತಕ್ಷಣ ತಡೆ ನೀಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರು ಶನಿವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ತನ್ಮೂಲಕ ಮೈತ್ರಿ ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಆಕ್ಷೇಪಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಹಿರಿಯ ಕಾಂಗ್ರೆಸ್‌ ಮುಖಂಡರ ಸಾಲಿಗೆ ರಾಮಲಿಂಗಾರೆಡ್ಡಿ ಕೂಡ ಸೇರ್ಪಡೆಯಾಗಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 50 ಮಿನಿ ಘನ ತ್ಯಾಜ್ಯ ವಿಲೇವಾರಿ ಟ್ರಾನ್ಸ್‌ಫರ್‌ ಸ್ಟೇಷನ್‌ ಕಾರ್ಯಾಚರಣೆ ಮತ್ತು ನಿರ್ವಹಣೆ ಟೆಂಡರ್‌ ಅಕ್ರಮವಾಗಿದ್ದು, ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಪ್ಪುಪಟ್ಟಿಗೆ ಸೇರಿಸಲಾದ ಟಿಪಿಎಸ್‌ ಸಂಸ್ಥೆಗೆ ಗುತ್ತಿಗೆ ಕಾರ್ಯಾದೇಶ ನೀಡಿದ್ದಾರೆ. ಈ ಟೆಂಡರ್‌ ರದ್ದು ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದಾಖಲೆ ಸಹಿತ ಅವರು ಪತ್ರ ಬರೆದಿದ್ದಾರೆ.

ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಅವೈಜ್ಞಾನಿಕ ಯೋಜನೆ ಅನುಷ್ಠಾನಗೊಳಿಸಿ ಆರ್ಥಿಕ ನಷ್ಟದ ಜತೆಗೆ ಬೆಂಗಳೂರಿನ ಸ್ವಚ್ಛತೆಯನ್ನು ಹದಗೆಡಿಸಿದೆ. ಈಗ 246 ಕೋಟಿ ರು. ಬೃಹತ್‌ ಮೊತ್ತದ ಟ್ರಾನ್ಸ್‌ಫರ್‌ ಸ್ಟೇಷನ್‌ ಕಾಮಗಾರಿಯನ್ನು ಕಪ್ಪುಕಟ್ಟಿಗೆ ಸೇರಿಸಲಾದ ಕಂಪನಿಗೆ ನೀಡಲಾಗಿದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿರುವ ಲೋಪಗಳು ಮತ್ತು ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲಾಗಿದ್ದು, ಕೂಡಲೇ ಟೆಂಡರ್‌ ರದ್ದುಗೊಳಿಸಿ ಸಂಬಂಧಪಟ್ಟಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಿದ್ದಾರೆ.

ಟೆಂಡರ್‌ನಲ್ಲಿ ಭಾಗಹಿಸುವುದಕ್ಕೆ ನಾಲ್ಕು ಸಂಸ್ಥೆಗಳು ಇ-ಪೊರ್ಟಲ್‌ ಮೂಲಕ 2017ರ ಆಗಸ್ಟ್‌ 17ರಂದು ಮಾಹಿತಿ ಸಲ್ಲಿಸಿವೆ. ಆದರೆ, ಈ ಸಂಸ್ಥೆಗಳನ್ನು ಪರಿಗಣಿಸದೇ ಅಂತಿಮ ದಿನಾಂಕ ಮುಗಿದ ಬಳಿಕ ದಾಖಲೆ ಸಲ್ಲಿಸಿದ ಟಿಪಿಎಸ್‌ ಸಂಸ್ಥೆಗೆ ಅಧಿಕಾರ ದುರುಪಯೋಗಪಡಿಸಿಕೊಂಡು ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಅನುಮೋದನೆ ನೀಡಲಾಗಿದೆ. ಅಲ್ಲದೆ, ಟೆಂಡರ್‌ನಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸಂಸ್ಥೆಗಳು ಕಳೆದ ಮೂರು ವರ್ಷದಿಂದ ಎಲ್ಲಿಯೂ ಕಪ್ಪುಪಟ್ಟಿಗೆ ಸೇರಿಲ್ಲ ಎಂಬ ಪ್ರಮಾಣ ಪತ್ರ ಸಲ್ಲಿಕೆ ಮಾಡಿರಬೇಕು. ಆದರೆ, ಟಿಪಿಎಸ್‌ ಸಂಸ್ಥೆ 2016ರಲ್ಲಿ ನವದೆಹಲಿ ಮಹಾನಗರ ಪಾಲಿಕೆ ಕಪ್ಪುಕಟ್ಟಿಗೆ ಸೇರಿಸಿ ಆದೇಶ ಹೊರಡಿಸಿದ್ದನ್ನು ಮರೆಮಾಚಿ ಟ್ರಾನ್ಸ್‌ಫರ್‌ ಸ್ಟೇಷನ್‌ ಟೆಂಡರ್‌ನಲ್ಲಿ ಭಾಗವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಹಾಗಾಗಿ ಈ ಸಂಸ್ಥೆ ಟೆಂಡರ್‌ನ ಠೇವಣಿ ಮುಟ್ಟುಗೋಲು ಹಾಕಿಕೊಂಡು ಗುತ್ತಿಗೆ ರದ್ದುಪಡಿಸಬೇಕು. ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.