Asianet Suvarna News Asianet Suvarna News

ಇವಿಎಂ ಬೇಡ ಬ್ಯಾಲೆಟ್ ಚುನಾವಣೆ ನಡೆಯಲಿ : ಜಯಚಂದ್ರ

ರಾಜ್ಯದಲ್ಲಿ ಈಗಾಗಲೇ ಒಂದು ಉಪ ಚುನಾವಣೆ ಮುಕ್ತಾಯವಾಗಿದೆ. ಶೀಘ್ರದಲ್ಲೇ ಇನ್ನೂ ಚುನಾವಣೆ ನಡೆಯಲಿದ್ದು ಇದೀಗ ಕೈ ಮುಖಂಡ ಜಯಚಂದ್ರ ಅವರು ಇವಿಎಂ ಬಗ್ಗೆ ಪ್ರಸ್ತಾಪಿಸಿದ್ದಾರೆ.

Congress Leader Jayachandra Speaks About EVM  snr
Author
Bengaluru, First Published Nov 29, 2020, 11:05 AM IST

ಶಿರಾ (ನ.29):  ನನ್ನ ರಾಜಕೀಯ ಜೀವನದಲ್ಲಿ 10 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಸೋಲು ಗೆಲುವುಗಳನ್ನು ಕಂಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸೋತಿದ್ದರೂ ಶಿರಾ ಕ್ಷೇತ್ರದ ಮತದಾರರು ನೀಡಿರುವ ತೀರ್ಪನ್ನು ಗೌರವವಾಗಿ ಸ್ವೀಕರಿಸಿ ಮತ್ತೆ ಈ ಕ್ಷೇತ್ರದ ಜನರ ಸೇವೆಯಲ್ಲೇ ಮುಂದುವರೆಯುತ್ತೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಭಾವುಕರಾಗಿ ನುಡಿದರು.

ಅವರು ನಗರದ ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಳೆದ 10 ಚುನಾವಣೆಗಳ ಪೈಕಿ ಕಳ್ಳಂಬೆಳ್ಳ ಕ್ಷೇತ್ರದಿಂದ 4 ಬಾರಿ, ಶಿರಾ ಕ್ಷೇತ್ರದಲ್ಲಿ 2 ಬಾರಿ ಜಯ ಕಂಡಿದ್ದು, ಇದೇ ಕ್ಷೇತ್ರದಿಂದ ಸತತವಾಗಿ 2 ಬಾರಿ ಸೋಲು ಕಂಡಿರುವುದು ನನ್ನ ಅಭಿವೃದ್ಧಿ ಕೆಲಸಗಳ ನಡುವೆಯೂ ಸೋಜಿಗದ ಸಂಗತಿಯಾಗಿದೆ. ಕಳೆದ ಉಪಚುನಾವಣೆಯಲ್ಲಿ ಇಡೀ ಚುನಾವಣಾ ಸಿಬ್ಬಂದಿ, ತಾಲೂಕು ಆಡಳಿತ ಸರ್ಕಾರದ ಏಜೆಂಟರಾಗಿ ಕೆಲಸ ಮಾಡಿದ್ದಾರೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಚುನಾವಣೆಯಲ್ಲಿ ನಡೆಯುತ್ತಿದ್ದ, ನೀತಿ ಸಂಹಿತೆಯ ಉಲ್ಲಂಘನೆಯ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಚುನಾವಣೆಯಲ್ಲಿ ಬರೀ ಬಿಜೆಪಿಗೆ ಗೆಲುವು: ಇದೆಲ್ಲ ಇವಿಎಂನ ಕರಾಮತ್ತು ಎಂದ ಮಾಜಿ ಸಚಿವ ...

ದಿವಾಳಿ ಸರ್ಕಾರ:

ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹಲವು ಯೋಜನೆಗಳು ರದ್ದಾಗಿವೆ. ವಿಧವೆಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಸಿಗುತ್ತಿರುವ ಸೌಲಭ್ಯಗಳು ಮಾಯವಾಗುತ್ತಿವೆ. ಶಿಕ್ಷಕರಿಗೆ ವೇತನ ನೀಡಲೂ ಕೂಡ ಸರ್ಕಾರದಲ್ಲಿ ಹಣವಿಲ್ಲ. ಈ ವಾತಾವರಣ ನೋಡುತ್ತಿದ್ದರೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬಂತಾಗುತ್ತಿದೆ. ಜಾತಿಗೊಂದು ನಿಗಮಗಳನ್ನು ಸ್ಥಾಪಿಸಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರ ಅಭಿವೃದ್ಧಿ ಜಪ ಮಾಡಲಿ:

ಕಳೆದ 70 ವರ್ಷಗಳಿಂದ ದೊರಕದ ರಾಜಕೀಯ ಪ್ರಾತಿನಿಧ್ಯ ಈ ಬಾರಿ ಶಿರಾ ಕ್ಷೇತ್ರಕ್ಕೆ ಲಭಿಸಿದೆ. ಈಗ ಕ್ಷೇತ್ರದಲ್ಲಿ ಓರ್ವ ಶಾಸಕರು ಹಾಗೂ ಇಬ್ಬರು ವಿಧಾನಪರಿಷತ್‌ ಸದಸ್ಯರು, ಇಬ್ಬರು ನಿಗಮದ ಅಧ್ಯಕ್ಷರುಗಳು ಇದ್ದು, ಆಯ್ಕೆಗೊಂಡ ಈ ಜನಪ್ರತಿನಿಧಿಗಳು ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಿ ತಾವು ಅಧಿಕಾರಕ್ಕೆ ಬಂದಾಗ ಇಂತಹ ಕೆಲಸಗಳನ್ನು ಮಾಡಿದ್ದೇವೆ ಎಂಬ ಹೆಸರುಳಿಸಿಕೊಳ್ಳಲಿ ಎಂದು ನೂತನವಾಗಿ ಆಯ್ಕೆಯಾದ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು.

ಈ ಕ್ಷೇತ್ರದಲ್ಲಿ ನಾನು ಸೋತಿದ್ದರೂ 63 ಸಾವಿರಕ್ಕೂ ಹೆಚ್ಚು ಮತ ಜನತೆ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ಅಧಿಕಾರ ಇಲ್ಲದಿದ್ದರೂ ನಿಮ್ಮ ಸೇವೆಯಲ್ಲಿ ನಿಮ್ಮ ಕಷ್ಟಸುಖಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸದಾ ನಿಮ್ಮ ಜೊತೆಯಲ್ಲಿರುತ್ತೇನೆ ಎಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜ್‌, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅದ್ಯಕ್ಷ ಗುರುಮೂರ್ತಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಎಸ್‌.ರವಿ, ಮಾಜಿ ಎಪಿಎಂಸಿ ಅಧ್ಯಕ್ಷ ಸತ್ಯನಾರಾಯಣ, ಮಾಜಿ ಉಪಾಧ್ಯಕ್ಷ ಹನುಮಂತರಾಯಪ್ಪ, ಹಾರೋಗೆರೆ ಮಹೇಶ್‌, ರಾಜಣ್ಣ, ದಿವಾಕರ್‌, ಭಾನುಪ್ರಕಾಶ್‌, ಪಿ.ಬಿನರಸಿಂಹಯ್ಯ, ನೂರುದ್ದೀನ್‌, ಚಿದಾನಂದ್‌, ಷಣ್ಮುಖಪ್ಪ ಸೇರಿದಂತೆ ಹಲವರು ಹಾಜರಿದ್ದರು.

 ಇವಿಎಂ ಬೇಡ, ಬ್ಯಾಲೆಟ್‌ ಬರಲಿ

ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ಇಂತಹ ಉತ್ತಮ ವ್ಯವಸ್ಥೆಯಲ್ಲಿ ಇತ್ತೀಚಿನ ಸರ್ಕಾರಗಳು ಜನಮತ ಚುನಾವಣೆಗಳನ್ನು ಇವಿಎಂ ಯಂತ್ರದ ಚುನಾವಣೆಯನ್ನಾಗಿ ಬದಲಿಸಿ ಈ ಯಂತ್ರದ ಮೇಲೆಯೇ ಮತದಾರರು ಅನುಮಾನ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಅತಿದೊಡ್ಡ ಶ್ರೀಮಂತ ರಾಷ್ಟ್ರ ಅಮೆರಿಕಾದಲ್ಲಿ ಇಂದಿಗೂ ಬ್ಯಾಲೆಟ್‌ ಮತದಾನ ಪದ್ಧತಿ ಜಾರಿಯಲ್ಲಿದೆ. ಭಾರತದಲ್ಲಿ ಮತ್ತೆ ಪ್ರಜಾಪ್ರಭುತ್ವ, ಪ್ರಜೆಗಳ ಅಧಿಕಾರ ಉಳಿಯಬೇಕಾದರೆ ಬ್ಯಾಲೆಟ್‌ ಮತದಾನ ಪದ್ಧತಿ ಜಾರಿಗೆ ಬರಬೇಕು ಎಂಬುದು ಹಲವು ರಾಜ್ಯಗಳ ಅನಿಸಿಕೆಯೂ ಆಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Follow Us:
Download App:
  • android
  • ios