ರಾಮನಗರ (ನ.27):  ಕರ್ನಾಟಕದ ಜನರು ಪ್ರಜ್ಞಾವಂತರಿದ್ದು, ತಾಯಿ ಸಮಾನವಾದ ಪಕ್ಷಕ್ಕೆ ದ್ರೋಹ ಬಗೆದವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಪಕ್ಷಾಂತರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಚುನಾವಣಾ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ  ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದರು. 

ಈ ಹಿಂದೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಜನರು ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಇಲ್ಲಿಯೂ ಅಂತಹದ್ದೇ ತೀರ್ಪು ಹೊರಬೀಳಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನಕಪುರದಲ್ಲಿ ಮೆಡಿಕಲ್ ಕಾಲೇಜು ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಮಾಜಿ ಸಚಿವ ಡಿಕೆಶಿ ನಾನು ಯಾವುದೇ ರಾಜಕೀಯ ಮಾಡುತ್ತಿಲ್ಲ. ಯಡಿಯೂರಪ್ಪ ಚಿಕ್ಕಬಳ್ಳಾಪುರಕ್ಕೆ ನೂರು ಮೆಡಿಕಲ್ ಕಾಲೇಜು ಕೊಡಲಿ. ನಾನು ಅಲ್ಲಿಗೆ ಮಾಡಬೇಡಿ ಎಂದಿಲ್ಲ. ಆದರೆ ಸಿದ್ದರಾಮಯ್ಯ ನನ್ನ ಕ್ಷೇತ್ರಕ್ಕೆ ಕಾಲೇಜು ಮಂಜೂರು‌ ಮಾಡಿದ್ದು, ಕುಮಾರಸ್ವಾಮಿ ಅನುದಾನ ನೀಡಿದ್ದರು. ಅದನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಚುನಾವಣೆ ಬಳಿಕ ಈ ವಿಚಾರವಾಗಿ ಮಾತನಾಡುತ್ತೇನೆ ಎಂದರು.

ರಾಜ್ಯದ 15 ಕ್ಷೇತ್ರಗಳಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆ  ನಡೆಯಲಿದ್ದು ಡಿಸೆಂಬರ್ 9 ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.