ವಿಧಾನಸಭೆ ಚುನಾವಣೆ ಆರಂಭದ ದಿನಗಳಿಂದ ಕಾಂಗ್ರೆಸ್‌ ವೀರಶೈವ-ಲಿಂಗಾಯತ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ವೀರಶೈವ ಲಿಂಗಾಯತ ಮುಖಂಡರು ಆರೋಪಿಸಿದರು.

 ಮೈಸೂರು : ವಿಧಾನಸಭೆ ಚುನಾವಣೆ ಆರಂಭದ ದಿನಗಳಿಂದ ಕಾಂಗ್ರೆಸ್‌ ವೀರಶೈವ-ಲಿಂಗಾಯತ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ವೀರಶೈವ ಲಿಂಗಾಯತ ಮುಖಂಡರು ಆರೋಪಿಸಿದರು.

ವಾಣಿವಿಲಾಸ ರಸ್ತೆಯಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ ಅವರು, ಅಧಿಕಾರದಲ್ಲಿ ಇದ್ದಾಗ ವೀರಶೈವ- ಲಿಂಗಾಯತರಿಗೆ ಸೂಕ್ತ ಸ್ಥಾನವಾನ ನೀಡಲು ಕಾಂಗ್ರೆಸ್‌ ಚುನಾವಣೆ ಸಂದರ್ಭದಲ್ಲಿ ನಮ್ಮ ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಆಗಿ ಅತ್ಯುತ್ತಮ ಆಡಳಿತ ನೀಡುತ್ತಿದ್ದ ವೀರಶೈ ಲಿಂಗಾಯಿತ ಸಮುದಾಯದ ವೀರೇಂದ್ರ ಪಾಟೀಲರಿಗೆ ಕಿರುಕುಳ ನೀಡಿ ಅವಮಾನಕರ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದಲ್ಲದೆ ಬಿ.ಡಿ. ಜತ್ತಿ, ಎಸ್‌.ಆರ್‌. ಕಂಠಿ, ಎಂ. ರಾಜಶೇಖರಮೂರ್ತಿ, ಎಂ. ಮಹದೇವ್‌ ಮುಂತಾದ ನಾಯಕರನ್ನು ಕೆಟ್ಟದಾಗಿ ಕಾಂಗ್ರೆಸ್‌ ನಡೆಸಿಕೊಂಡಿತ್ತು ಎಂದರು.

ಈ ಚುನಾವಣೆಯಲ್ಲೂ ಕಾಂಗ್ರೆಸ್‌ ಇದೆ ನೀತಿಯನ್ನು ಅನುಸರಿಸಿಕೊಂಡು ಹೋಗುತ್ತಿರುವ ಕಾರಣ ವೀರಶೈವ ಲಿಂಗಾಯತರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಹೇಳಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ಮೂಲಕ ವೀರಶೈವ ಲಿಂಗಾಯಿತ ಸವಾಜದಲ್ಲಿ ಒಡಕುಂಟು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಾರಿಯ ಚುನಾವಣೆಲ್ಲಿ ಬಿಜೆಪಿ 68 ಮಂದಿ ವೀರಶೈವ ಲಿಂಗಾಯತರಿಗೆ ಟಿಕೆಟ್‌ ನೀಡಿ ಸ್ಪರ್ಧಿಸಲು ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಲಿಂಗಾಯಿತರು ಮೂರುವರೆ ಲಕ್ಷಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಿಂದ ಬಿಜೆಪಿ ನಾಲ್ಕು ಮಂದಿ ವೀರಶೈವ ಲಿಂಗಾುಂತರಿಗೆ ಸ್ಪರ್ಧಿಸಲು ಟಿಕೆಟ್‌ ನೀಡಿದೆ ಎಂದರು.

ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಅನವಶ್ಯಕವಾಗಿ ನಮ್ಮ ಸಮುದಾಯದವರಲ್ಲಿ ಗೊಂದಲವನ್ನುಂಟು ಮಾಡುವ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿರುವುದು ಕಂಡು ಬಂದಿದೆ. ಬೇರೆ ಪಕ್ಷಗಳಿಗಿಂತ ಬಿಜೆಪಿ ನಮ್ಮ ಸಮಾಜಕ್ಕೆ ಇಂದಿನಿಂದಲೂ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿರುವ ಹಿನ್ನೆಲೆಯಲ್ಲಿ ಸಮಾಜದವರು ಯಾವುದೇ ಗೊಂದಲಕ್ಕೆ ಒಳಗಾಗದೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಅವರು ಕೋರಿದರು.

ವೀರಶೈವ- ಲಿಂಗಾಯಿತ ಸಮಾಜದ ಮುಖಂಡರಾದ ಸುನಂದಾ ಪಾಲನೇತ್ರ, ಬಿ.ವಿ. ಮಂಜುನಾಥ್‌, ಜಯಶಂಕರ್‌, ಬಿ. ನಿರಂಜನಮೂರ್ತಿ, ಬಿ.ಪಿ. ಸುರೇಶ್‌, ಎಲ್‌. ಜಗದೀಶ್‌, ನಾಗೇಂದ್ರ ಕುಮಾರ್‌, ಯು.ಎಸ್‌. ಶೇಖರ್‌, ನಂದೀಶ್‌ ಇದ್ದರು.