ನಮ್ಮ ಮೆಟ್ರೋ ರೈಲು ನಿಗಮದಲ್ಲಿ ಅಕ್ರಮವಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರು, ಕೇಂದ್ರ ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಅವರು ದೂರು ನೀಡಿದ್ದಾರೆ. 

ಬೆಂಗಳೂರು (ಜ.10): ನಮ್ಮ ಮೆಟ್ರೋ ರೈಲು ನಿಗಮದಲ್ಲಿ ಅಕ್ರಮವಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ. ಆದರೆ, ಇದನ್ನು ಮೆಟ್ರೋ ನಿಗಮ ನಿರಾಕರಿಸಿದೆ. ಈ ಬಗ್ಗೆ ರೈಲ್ವೆ ಸಚಿವರು, ಕೇಂದ್ರ ನಗರಾಭಿವೃದ್ಧಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಅವರು ದೂರು ನೀಡಿದ್ದಾರೆ. ಅಧಿಸೂಚನೆ, ಮೀಸಲಾತಿ, ಸಂದರ್ಶನ ಇಲ್ಲದೆ ಸುಮಾರು ನೂರಾರು ಗುತ್ತಿಗೆ ಆಧಾರಿತ ನೌಕರರನ್ನು ನೇರವಾಗಿ ನೇಮಕಾತಿ ಮಾಡಲಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಇವರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಒಂದು ವರ್ಷಕ್ಕೆ ಗುತ್ತಿಗೆ ಎಂದು ನೇಮಿಸಿಕೊಂಡು ಆರೇಳು ವರ್ಷ ಮುಂದುವರಿಸಲಾಗಿದೆ. ನಿವೃತ್ತರಾಗಿ 60-70 ವರ್ಷ ದಾಟಿದವರನ್ನೂ ನೇಮಿಸಿಕೊಂಡಿರುವ ಮಾಹಿತಿ ಇದೆ. ಒಂದೇ ವರ್ಷದಲ್ಲಿ ಒಬ್ಬ ಅಧಿಕಾರಿಯ ಸಂಬಳವನ್ನು ನಾಲ್ಕು ಬಾರಿ ಹೆಚ್ಚಿಸಿದ ಪ್ರಕರಣವೂ ಉಂಟು. ಅಲ್ಲದೆ, ಅಧಿಸೂಚನೆ ಪ್ರಕಾರ ವಿದ್ಯಾರ್ಹತೆ, ಅನುಭವ ಇಲ್ಲದಿದ್ದರೂ ಹುದ್ದೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಜನರಲ್‌ ಮ್ಯಾನೇಜರ್‌, ಚೀಫ್‌ ಜನರಲ್‌ ಮ್ಯಾನೇಜರ್‌, ಅಡ್ವೈಸರ್‌ ಕನ್ಸಲ್ಟಂಟ್‌, ಡೆಪ್ಯುಟಿ ಜನರಲ್‌ ಮ್ಯಾನೇಜರ್‌, ಡೆಪ್ಯೂಟಿ ಚೀಫ್‌ ಎಂಜಿನಿಯರ್‌, ಡೆಪ್ಯುಟಿ ಚೀಫ್‌ ಸೆಕ್ಯುರಿಟಿ ಆಫೀಸರ್‌, ಸೂಪರ್‌ವೈಸರ್‌ ಸೇರಿ ಟೆಕ್ನಿಕಲ್‌ ಹಾಗೂ ನಾನ್‌ ಟೆಕ್ನಿಕಲ್‌ ಸೇರಿದಂತೆ ಎಲ್ಲ ಹಂತದ ಹುದ್ದೆಗೂ ಸಿಬ್ಬಂದಿಯನ್ನು ಈ ರೀತಿ ನೇಮಿಸಿಕೊಳ್ಳಲಾಗಿದೆ. 500 ಉದ್ಯೋಗಿಗಳನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಗುತ್ತಿಗೆ ನೌಕರರ ನೇಮಕಾತಿ: ಪರ್ವೇಜ್‌
ಆರೋಪಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ಅವರು, ಮಾನವೀಯತೆ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿದ್ದೇವೆ. ಹೊರ ಗುತ್ತಿಗೆ ಆಧಾರದಲ್ಲಿ ಆರು ವರ್ಷ ಕೆಲಸ ಮಾಡಿದ ನೌಕರರನ್ನು ಮಾತ್ರ ಮೆಟ್ರೋ ಉದ್ಯೋಗಿಗಳಾಗಿ ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಹೀಗಾಗಿ ಇಷ್ಟು ವರ್ಷ ದುಡಿದವರಿಗೆ ನ್ಯಾಯ ಸಿಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೆ.ಆರ್‌.ಪುರ-ವೈಟ್‌ಫೀಲ್ಡ್‌ ಮೆಟ್ರೋ ಶೀಘ್ರ: ‘ನಮ್ಮ ಮೆಟ್ರೋ’ ನೇರಳೆ ಮಾರ್ಗದ ಮುಂದುವರಿದ 2ನೇ ಹಂತದ ಯೋಜನೆ ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮಾರ್ಗದ ಸುರಕ್ಷತಾ ಪರೀಕ್ಷೆಯನ್ನು ‘ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ’ (ಸಿಎಂಆರ್‌ಎಸ್‌) ಫೆಬ್ರವರಿಯಲ್ಲಿ ನಡೆಸಲಿದೆ.

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌ವರೆಗಿನ ಮಾರ್ಗವನ್ನು ಮಾಚ್‌ರ್‍ನಲ್ಲಿ ಪ್ರಯಾಣಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ. ಹಾಗಾಗಿ ಫೆ.15ರಿಂದ 20ರವರೆಗೆ ಸಿಎಂಆರ್‌ಎಸ್‌ ಈ ಸುರಕ್ಷತಾ ಪರೀಕ್ಷೆ ಕೈಗೊಳ್ಳಲಿದೆ. ಪ್ರಸ್ತುತ ಈ ಮಾರ್ಗದ ಟ್ರ್ಯಾಕ್‌, ಸಿಗ್ನಲಿಂಗ್‌ ಸೇರಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಸದ್ಯ ಒಂದು ರೈಲಿನ ಮೂಲಕ ಪ್ರಾಯೋಗಿಕ ಚಾಲನೆ ನಡೆಸಲಾಗುತ್ತಿದೆ. ಶೀಘ್ರವೇ ಜೋಡಿ ಹಳಿಗಳಲ್ಲಿ ಎರಡು ರೈಲುಗಳ ಪ್ರಾಯೋಗಿಕ ಚಾಲನೆ ಕೂಡ ಆರಂಭವಾಗಲಿದೆ.

ಬೆಂಗಳೂರಿಗರೆ ಮೆಟ್ರೋ ಮಾರ್ಗದ ಅಡಿಯ ರಸ್ತೆಗಳಲ್ಲಿ ಹೋಗೋವಾಗ ಹುಷಾರ್‌!

‘ಕನ್ನಡಪ್ರಭ’ ಜತೆ ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಮ್‌ ಪರ್ವೇಜ್‌ ‘ಪ್ರಾಯೋಗಿಕ ಚಲನೆ ವೇಳೆ ಕಂಡುಬರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿದ್ದೇವೆ. ಬಾಕಿ ಇರುವ ಚಿಕ್ಕಪುಟ್ಟಕಾಮಗಾರಿಗಳನ್ನು ಫೆ.15ರೊಳಗೆ ಪೂರ್ಣಗೊಳಿಸಲಾಗುವುದು. ವಿದ್ಯುತ್‌ ಪೂರೈಕೆ, ಬೋಗಿಗಳ ಚಲನೆ ಸೇರಿ ಇತರೆ ಸಂಗತಿಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಕೊಳ್ಳಲಾಗುವುದು. ಇದರ ಜತೆಗೆ ಈ ಮಾರ್ಗದಲ್ಲಿನ ನಿಲ್ದಾಣಗಳ ಲಿಫ್‌್ಟ, ಎಸ್ಕಲೇಟರ್‌ ವ್ಯವಸ್ಥೆ, ಎಲೆಕ್ಟ್ರಿಕಲ್‌ ಇನ್‌ಸ್ಟಾಲೇಶನ್‌ನಲ್ಲಿ ಆಗಬೇಕಾದ ಸುಧಾರಣೆ ತಪಾಸಣೆ ನಡೆಸಲಿದ್ದೇವೆ’ ಎಂದು ತಿಳಿಸಿದರು.

ಮೆಟ್ರೋ ಪಿಲ್ಲರ್‌ ಬಿದ್ದು ಇಬ್ಬರ ಸಾವು, ಬಿಎಂಆರ್‌ಸಿಎಲ್‌, ಗುತ್ತಿಗೆದಾರರ ವಿರುದ್ಧ ಪ್ರಕರಣ!

ಸಿಎಂಆರ್‌ಎಸ್‌ ಆಗಮಿಸುವುದಕ್ಕೂ ಮೊದಲು ಅಲ್ಲಿನ ತಜ್ಞರ ತಂಡ ಆಗಮಿಸಿ ದಾಖಲಾತಿಗಳನ್ನು ಪರಿಶೀಲಿಸಲಿದೆ. ಇವರು ವರದಿ ನೀಡಿದ ಬಳಿಕ ಆಯುಕ್ತರ ತಂಡ ಆಗಮಿಸಲಿದೆ. ಆಯುಕ್ತರ ತಂಡ ಕೇವಲ ರೈಲ್ವೆ ಸಂಚಾರ ಮಾತ್ರವಲ್ಲದೆ ಪ್ರಯಾಣಿಕರಿಗೆ ಒದಗಿಸಲಾದ ಸೌಕರ್ಯ ಸೇರಿ ಸಮಗ್ರವಾಗಿ ಸುರಕ್ಷತಾ ಪರೀಕ್ಷೆ ನಡೆಸಲಿದೆ. ಸಮರ್ಪಕವಾಗಿದ್ದರೆ ಅವರು ಚಾಲನೆಗೆ ಸುರಕ್ಷತಾ ಪ್ರಮಾಣಪತ್ರ ನೀಡಲಿದ್ದಾರೆ ಎಂದು ಅವರು ವಿವರಿಸಿದರು.