Vijayapura ಮಕ್ಕಳ ಮಾರಾಟ ಜಾಲ ಸಕ್ರಿಯ, ಮತ್ತೆ ಮುನ್ನಲೆಗೆ ಜಯಮಾಲಾ ಕೇಸ್
- ವಿಜಯಪುರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ!
- ಬಗೆದಷ್ಟು ಆಳ ನರ್ಸ್ ಜಯಮಾಲಾ ಪ್ರಕರಣ
- ಮಕ್ಕಳ ಸಹಾಯವಾಣಿ ನಿರ್ದೇಶಕಿಯಿಂದ ಪ್ರಕರಣ ಬೆಳಕಿಗೆ
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ.24) : ಗುಮ್ಮಟನಗರಿ ವಿಜಯಪುರ (Vijyapura) ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರೀಯವಾಗಿದೆಯಾ ಎನ್ನುವ ಅನುಮಾನಗಳು ಕಾಡ್ತಿವೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಒಬ್ಬಳ ಬಳಿ 5 ಮಕ್ಕಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೆಲ ಮಕ್ಕಳನ್ನ ಕೆಲವರಿಗೆ ಮಾರಾಟ ಮಾಡಿದ್ದಾಳೆ ಎನ್ನುವ ಅನುಮಾನಗಳು ವ್ಯಕ್ತವಾಗ್ತಿವೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ.
ಸರ್ಕಾರಿ ಆರೋಗ್ಯ ಕೇಂದ್ರದ ನರ್ಸ್ ವಿರುದ್ಧ FIR: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿವಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿರೋ ಜಯಮಾಲಾ ಬಿಜಾಪುರ (nurse Jayamala Bijapur ) ವಿರುದ್ಧ ಅನಾಥ ಮಕ್ಕಳನ್ನು ಅಕ್ರಮವಾಗಿ ಪೋಷಣೆ ಮಾಡುತ್ತಿರುವ ಬಗ್ಗೆ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ವಿಜಯಪುರ ನಗರದ ಅಥಣಿ ಗಲ್ಲಿಯ ನಿವಾಸಿಯಾಗಿರೋ ಜಯಮಾಲಾ ವಿರುದ್ಧ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ (Childline officer Sunanda Vasudev Tholabandi) ಅವರು ದೂರು ನೀಡಿದ್ದಾರೆ. ವಿಜಯಪುರ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳ ಸಹಾಯವಾಣಿಯಿಂದ (Child helpline) ಹೊರಬಿದ್ದ ಪ್ರಕರಣ: ಹಾಗೇ ನೋಡುವುದಾದ್ರೆ ಈ ಪ್ರಕರಣ ಹೊರಗೆ ಬೀಳುತ್ತಲೇ ಇರಲಿಲ್ಲ. ಆದ್ರೆ ನರ್ಸ್ ಜಯಮಾಲಾ ಅಕ್ರಮವಾಗಿ 5 ಮಕ್ಕಳನ್ನ ಸಾಕಿದ್ದಾಳೆ. ಈ ಪೈಕಿ ಮೂರು ಮಕ್ಕಳನ್ನ ಈಗಾಗಲೇ ಬೇರೆಯವರಿಗೆ ನೀಡಿದ್ದಾಳೆ ಎಂಬೆಲ್ಲ ಮಾಹಿತಿ ಮೊದಲು ಬಂದಿದ್ದೆ ವಿಜಯಪುರ ಜಿಲ್ಲಾ ಮಕ್ಕಳ ಸಹಾಯವಾಣಿ ನಿರ್ದೇಶಕಿ ಸುನಂದಾ ತೋಳಬಂದಿ ಅವರಿಗೆ. ಮಾಹಿತಿ ಬರ್ತಿದ್ದಂತೆ ಸುನಂದಾ ತೋಳಬಂದಿ ಅಲರ್ಟ್ ಆಗಿ ಇಡೀ ಪ್ರಕರಣ ಮಾಹಿತಿ ಕಲೆ ಹಾಕಿದ್ದಾರೆ. ಆಗ ನರ್ಸ್ ಜಯಮಾಲಾ ಮಕ್ಕಳನ್ನ ಅಕ್ರಮವಾಗಿ ಸಾಕಿರೋದು, ಸಾಗಾಟ ಮಾಡಿರೋದು ಬೆಳಕಿಗೆ ಬಂದಿದೆ.
ಬೀದಿ ಫೋಕರಿಯೊಬ್ಬ ಮಕ್ಕಳ ಶಿಕ್ಷಣ ನಿರ್ಧರಿಸುವುದು ರಾಜ್ಯದ ದೌರ್ಭಾಗ್ಯವೆಂದ ಕಾಂಗ್ರೆಸ್
ಪೊಲೀಸರ ಸಹಾಯದೊಂದಿಗೆ ಮಕ್ಕಳ ರಕ್ಷಣೆ: ನರ್ಸ್ ಜಯಮಾಲಾ 5 ಮಕ್ಕಳನ್ನ ಅಕ್ರಮವಾಗಿ ಇರಿಸಿಕೊಂಡಿದ್ದಾಳೆ. ಈ ಪೈಕಿ ಎರೆಡು ಮಕ್ಕಳು ಆಕೆಯ ಮನೆಯಲ್ಲೆ ಇವೆ ಎನ್ನುವ ಮಾಹಿತಿ ತಿಳಿದ ಸುನಂದಾ ತೋಳಬಂದಿ ಪೊಲೀಸರ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ. 5 ವರ್ಷದ ಗಂಡು ಮಗು ಹಾಗೂ 3 ವರ್ಷದ ಹೆಣ್ಣು ಮಗುವಿನ ರಕ್ಷಣೆ ಮಾಡಿದ್ದಾರೆ. ಈ ಮಕ್ಕಳನ್ನ ಸಿದ್ದೇಶ್ವರ ದತ್ತು ಕೇಂದ್ರದಲ್ಲಿರಿಸಿದ್ದಾರೆ.
ಮತ್ತೆರೆಡು ಹೆಣ್ಣು ಮಗು ಪತ್ತೆ!
ಎರಡು ಮಕ್ಕಳ ರಕ್ಷಣೆಯಾಗ್ತಿದ್ದಂತೆ, ಇನ್ನೊಂದು 3 ವರ್ಷದ ಹೆಣ್ಣು ಮಗುವನ್ನ ನಗರದ ದರಬಾರ್ ಗಲ್ಲಿಯ ಶಾಂತಮ್ಮ ಹೆರಕಲ್ ಎಂಬುವರ ಬಳಿ ಇರಿಸಿದ್ದು ಗೊತ್ತಾಗಿದೆ. ಈ ಮಗುವಿನ ಪಾಲನೆಗಾಗಿ ಪ್ರತಿ ತಿಂಗಳು 3 ಸಾವಿರ ರೂಪಾಯಿಯನ್ನ ಸ್ವತಃ ನರ್ಸ್ ಜಯಮಾಲಾಳೆ ನೀಡುತ್ತಿದ್ದಳು ಎನ್ನಲಾಗಿದೆ. ಈ ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಇನ್ನೊಂದು 11 ತಿಂಗಳ ಮಗುವನ್ನ ಸಹ ಬೇರೆಯವರಿಗೆ ಸಾಕಲು ನೀಡಿದ್ದಾಳೆ ಎನ್ನುವ ಮಾಹಿತಿಯು ಲಭ್ಯವಾಗಿದೆ.
ನಾನ್ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿ ಇನ್ನು ಸಿಇಟಿ ಪರೀಕ್ಷೆ
5ನೇ ಮಗು ಮಹಾರಾಷ್ಟ್ರಕ್ಕೆ ಮಾರಾಟ!
ಇದು ನಾಲ್ಕು ಮಕ್ಕಳ ಕಥೆಯಾದ್ರೆ, 5ನೇ ಪ್ರಕರಣದಲ್ಲಿ 5 ವರ್ಷದ ಹೆಣ್ಣು ಮಗುವನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಟ್ಟಿರೋ ಮಾಹಿತಿಯು ಮಕ್ಕಳ ಸಹಾಯವಾಣಿ ಮೂಲಕ ಪೊಲೀಸರಿಗೆ ಲಭ್ಯವಾಗಿದೆ.. ಈ ಮಗುವನ್ನ ಮಾರಾಟ ಮಾಡಿರೋ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಸೊಲ್ಲಾಪುರದಲ್ಲಿರೋ ಮಗು ರಕ್ಷಣೆಗೆ ಪೊಲೀಸರ ತಂಡ ತೆರಳಿದೆ.
ನರ್ಸ್ ಜಯಮಾಲಾ ಒಟ್ಟು ಐದು ಮಕ್ಕಳನ್ನು ಅನಧಿಕೃತವಾಗಿ ಸಾಕಾಣಿಕೆ, ಸಾಗಾಣಿಕೆ ಮಾಡಿರೋದು ತನಿಖೆಯಲ್ಲಿ ಕಂಡು ಬಂದಿದೆ. ಹೀಗಾಗಿ ಇದೊಂದು ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಕ್ಕಳ ಮಾರಾಟ ಜಾಲವಾ ಎನ್ನುವ ಸಂಶಯಗಳು ಮೂಡುತ್ತಿವೆ. ಇದೆ ನರ್ಸ್ ಅನಧಿಕೃತವಾಗಿ ಮಕ್ಕಳ ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದಳಾ ಅನುಮಾನಗಳು ವ್ಯಕ್ತವಾಗ್ತಿವೆ. ಐದೈದು ಮಕ್ಕಳನ್ನ ತಂದದ್ದು ಎಲ್ಲಿಂದ, ಅವುಗಳನ್ನ ಬೇರೆಯವರಿಗೆ ಅಕ್ರಮವಾಗಿ ನೀಡಿದ್ದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಮೂಡತೊಡಗಿವೆ. ಪ್ರಮುಖವಾಗಿ ಇದೆಲ್ಲದ ಹಿಂದೆ ಇರೋದು ಯಾರು? ಎನ್ನುವ ಅನುಮಾನಗಳು ಮೂಡ್ತಿವೆ..!
ಬಗೆದಷ್ಟು ಆಳ ಮಕ್ಕಳ ಮಾರಾಟ ಜಾಲ!
ಕೆಲ ತಿಂಗಳ ಹಿಂದಷ್ಟೇ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗು ಮಾರಾಟ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆವರಣ ಮರದ ಕೆಳಗೆ ಕುಳಿತ ಬಾಣಂತಿಯಿಂದ ಅಲ್ಲೆ ಇದ್ದ ನರ್ಸ್ ಒಬ್ಬಳು ಮಗು ಖರೀದಿ ಮಾಡಿದ್ದಳು ಎನ್ನುವ ಮಾತು ಕೇಳಿ ಬಂದಿದ್ದವು. ಆಗಲೇ ಇಲ್ಲೊಂದು ಮಕ್ಕಳ ಮಾರಾಟ ಜಾಲ ಸಕ್ರೀಯವಾಗಿರಬಹುದು ಎಂಬ ಅನುಮಾನಗಳು ಮೂಡಿದ್ದವು. ಈ ನೋಡಿದ್ರೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿರೋ ಜಯಮಾಲಾ ಅಕ್ರಮವಾಗಿ ಮಕ್ಕಳನ್ನ ಸಾಗಾಟ ಮಾರಾಟ ಮಾಡಿರೋ ಪ್ರಕರಣ ಹೊರಬಿದ್ದಿದೆ..!
ಪ್ರಕರಣ ಬಹಿರಂಗ ಬಳಿಕ ನರ್ಸ್ ನಾಪತ್ತೆ?
ಪ್ರಕರಣ ಹೊರಗೆ ಬರ್ತಿದ್ದಂತೆ ನರ್ಸ್ ನಾಪತ್ತೆಯಾಗಿದ್ದಾಳಾ? ಅಥವಾ ಪೊಲೀಸ್ ಕಸ್ಟಡಿಯಲ್ಲಿದ್ದಾಳಾ ಎನ್ನುವ ಬಗ್ಗೆ ಅನುಮಾನಗಳಿವೆ. ಎಸ್ಪಿ ಆನಂದಕುಮಾರ್ ಮಾತನಾಡಿದ ಪ್ರಕರಣ ಬಹಿರಂಗವಾಗ್ತಿದ್ದಂತೆ ನರ್ಸ್ ಜಯಮಾಲಾ ನಾಪತ್ತೆಯಾಗಿದ್ದಾಳೆ. ಅವಳಿಗಾಗಿ ಹುಡುಕಾಡ್ತಿದ್ದೇವೆ ಎಂದಿದ್ದಾರೆ. ಇನ್ನು ಓರ್ವ ಸರ್ಕಾರಿ ಆಸ್ಪತ್ರೆ ನರ್ಸ್ ಬಳಿ ಅಕ್ರಮವಾಗಿ ಸಾಕಲ್ಪಟ್ಟ 5 ಮಕ್ಕಳು ಸಿಕ್ಕಿವೆ ಎಂದರೇ ಸುಮ್ನೇನಾ? ಇದರ ಹಿಂದಿರುವ ಎಲ್ಲ ಮಾಹಿತಿಯನ್ನ ಪೊಲೀಸರು ಕೆದಕುತ್ತಿದ್ದಾರೆ.