ಹುಬ್ಬಳ್ಳಿ(ಮೇ.30): ಕೊರೋನಾ ವಾರಿಯರ್ಸ್‌ಗಳಾದ ದಾದಿಯರ ಮೇಲೆ ಕಿಮ್ಸ್‌ ಸಿಇಒ ರಾಜಶ್ರೀ ಜೈನಾಪುರ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಸರ್ಕಾರಿ ಶುಶ್ರೂಷಕರ ಸಂಘದ ಧಾರವಾಡ ವಿಭಾಗ ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅವರಿಗೆ ದೂರು ನೀಡಿದೆ.

ಶುಶ್ರೂಷಕಿಯರು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ವಿನಾಕಾರಣ ದೂರುವ ಸಿಇಒ ರಾಜಶ್ರೀ, ತಾವು ಅಧಿಕಾರಕ್ಕೆ ಬಂದ ದಿನದಿಂದಲೂ ಮಾನಸಿಕ ಕಿರುಕುಳ ನೀಡುತ್ತಾರೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕರ್ತವ್ಯದಿಂದ ಅಮಾನತು ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಏಕವಚನದಲ್ಲಿ ನಿಂದನೆ ಮಾಡುತ್ತ ದಬ್ಬಾಳಿಕೆ ಮಾಡುತ್ತಿರುತ್ತಾರೆ. ಶುಶ್ರೂಷಕರನ್ನು ಕಳ್ಳರು, ಸುಳ್ಳರು ಎಂದು ಅವಹೇಳನ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರಿಗೆ ನೋಟಿಸ್‌ ಕೂಡ ನೀಡಿದ್ದಾರೆ. ಹೀಗಾಗಿ ಶುಶ್ರೂಷಕರು ಒತ್ತಡಕ್ಕೆ ಒಳಗಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಾಗಿದೆ.

ಲಾಕ್‌ಡೌನ್‌ ಸಡಿಲ: ಹೆಚ್ಚುವ ಅಪರಾಧಿ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ಇರಲಿ, ಸಚಿವ ಬೊಮ್ಮಾಯಿ

ಕೋವಿಡ್‌​-19 ಸಂಕಷ್ಟದ ಸಮಯವಾದ ಈ ಸಂದರ್ಭದಲ್ಲಿ ಎಲ್ಲ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನೋವಾಗುವಂತೆ ಮಾತನಾಡುವುದು ಸರಿಯಲ್ಲ ಎಂದು ಮನವಿಯಲ್ಲಿ ದೂರಲಾಗಿದೆ. ಅಲ್ಲದೆ, ಹಲವು ಸಿಬ್ಬಂದಿ ಇವರ ದಬ್ಬಾಳಿಕೆಗೆ ಬೇಸತ್ತು ಕರ್ತವ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೆ ಪುನರಾವರ್ತನೆ ಆದರೆ ಸಿಬ್ಬಂದಿ ಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ ಸಿಇಒ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಅವರನ್ನು ತಕ್ಷಣ ವಿಚಾರಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಮಾತನಾಡಿದ ಸರ್ಕಾರಿ ಶುಶ್ರೂಷಕರ ಸಂಘದ ಧಾರವಾಡ ವಿಭಾಗದ ಅಧ್ಯಕ್ಷೆ ಸುನೀತಾ ಡಿ. ನಾಯ್ಕ, ಬಹುತೇಕ ಎಲ್ಲ ಸಿಬ್ಬಂದಿ ಕೂಡ ಸಿಇಒ ರಾಜಶ್ರೀ ಅವರ ಮೇಲೆ ದೂರು ನೀಡುತ್ತಿದ್ದಾರೆ. ಹೀಗಾಗಿ ಕಿಮ್ಸ್‌ ನಿರ್ದೇಶಕರಿಗೆ ದೂರು ನೀಡಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.