ಬಿಜೆಪಿ ನಾಯಕನ ವಿರುದ್ಧ ಎಸ್ಪಿಗೆ ದೂರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡುವ ಸಂಚು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ.
ತುಮಕೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇಡೀ ಕುಟುಂಬವನ್ನು ಹತ್ಯೆ ಮಾಡುವ ಸಂಚು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕನ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಎಐಸಿಸಿ ವೀಕ್ಷಕರಾದ ನಸೀಂಖಾನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಐಸಿಸಿ ವೀಕ್ಷಕ ನಸೀಂಖಾನ್, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವನ್ನು ಹತ್ಯೆ ಮಾಡುತ್ತೇನೆ ಎಂದು ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಥೋಡ್ ಮೇಲೆ 40 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದು ಇತ್ತೀಚೆಗೆ ರಿವಾಲ್ವರ್ ಹಿಡಿದುಕೊಂಡು ತಿರುಗಿಸಿದ ವೀಡಿಯೋ ಕೂಡ ಬಹಿರಂಗವಾಗಿದೆ ಎಂದರು.
50 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇರುವ ಮುತ್ಸದ್ದಿ ನಾಯಕ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ತೀವ್ರ ಅಸಹನೆ ದ್ವೇಷದಿಂದ ಕೊಲೆ ಮಾಡುವ ಮನಸ್ಥಿತಿ ಹೊಂದಿರುವ ವ್ಯಕ್ತಿ ಮಣಿಕಂಠ ರಾಥೋಡ್ ಈಗಾಗಲೇ ಗಡಿಪಾರಿಗೆ ಗುರಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ರವರ ಇಡೀ ಕುಟುಂಬ ಮತ್ತು ಶಾಸಕರಾಗಿರುವ ಪ್ರಿಯಾಂಕ ಖರ್ಗೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದು ಆಘಾತಕಾರಿ ವಿಚಾರವಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ದುರುದ್ದೇಶದಿಂದ ದ್ವೇಷಪೂರಿತವಾಗಿ ಹತ್ಯೆ ಮಾಡಲು ಆಲೋಚನೆ ಹೊಂದಿರುವ ಅಪಾಯಕಾರಿ ವ್ಯಕ್ತಿ ಮಣಿಕಂಠ ರಾಥೋಡ್ ಸುಪಾರಿ ಹಂತಕನಾಗಿದ್ದು, ಆತನ ವಿರುದ್ಧ ಕೊಲೆಯತ್ನ, ಗಲಭೆಗೆ ಸಂಚು ರೂಪಿಸಿದ ಪ್ರಕರಣಗಳಡಿ ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಮಾತನಾಡಿ, ಇತ್ತೀಚೆಗೆ ಮಾಜಿ ಡಿಸಿಎಂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ್ ಅವರ ಪರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬಂದು ಪ್ರಚಾರ ಮುಗಿಸಿ ವಾಪಸ್ ತೆರಳಬೇಕಾದರೆ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಿದರು. ಇದಾದ ನಂತರ ರಣ ಹೇಡಿಗಳು ಕಲ್ಲಿನಿಂದ ತಲೆಗೆ ಹೊಡೆದು ಪರಮೇಶ್ವರ್ ಅವರನ್ನು ಗಾಯಗೊಳಿಸಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬವನ್ನು ಹತ್ಯೆ ಮಾಡುವುದಾಗಿ ಹೇಳಿರುವ ಬಿಜೆಪಿ ಮುಖಂಡರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣಸಿದ್ಧಯ್ಯ, ಅತೀಕ್ ಅಹಮದ್, ಸಿದ್ಧಲಿಂಗೇಗೌಡ, ನರಸೀಯಪ್ಪ, ಹೆಚ್.ಸಿ.ಹನುಮಂತಯ್ಯ, ಸಂಜೀವ್‌ಕುಮಾರ್, ಜಗದೀಶ್, ನಾಗರಾಜ್, ನಟರಾಜು, ಮಂಜುನಾಥ್, ಪ್ರಕಾಶ್, ಡಾ.ಅರುಂಧತಿ, ವಸುಂಧರ, ಎಸ್.ವಿ.ಗೀತಾ, ಸುಜಾತ, ತಾಜುದ್ದೀನ್ ಷರೀಫ್, ಮುಂತಾದವರು ಭಾಗವಹಿಸಿದ್ದರು.
ರಾಜೇಶ್ ಗೌಡರನ್ನು ಗೆಲ್ಲಿಸಿ
ಶಿರಾ : ರಾಜ್ಯಾದ್ಯಂತ ನಡೆದ ಹಲವು ಸಮೀಕ್ಷೆಗಳಲ್ಲಿ ಹಾಗೂ ಬಿಜೆಪಿ ಆಂತರಿಕ ಸಮೀಕ್ಷೆಗಳಲ್ಲಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಪಷ್ಟಬಹುಮತದಿಂದ ಸರ್ಕಾರ ರಚಿಸಲಿದೆ. ಆದ್ದರಿಂದ ಮತದಾರರು ಡಾ.ಸಿ.ಎಂ. ರಾಜೇಶ್ ಗೌಡ ಅವರನ್ನು ಗೆಲ್ಲಿಸಿ, ಶಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಿ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದೇಶದಲ್ಲಿ ಪ್ರಧಾನಿ ಮೋದಿಯವರ ಹಾಗೂ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮೋದಿಯವರ ರಾಜ್ಯಾದ್ಯಂತ ಹಲವು ಕಡೆ ರೋಡ್ ಶೋ ನಡೆಸಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸವನ್ನು ಹಿಮ್ಮಡಿಗೊಳಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಶಿರಾ ಕ್ಷೇತ್ರವೂ ಅಭಿವೃದ್ಧಿಯಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳು ಅನುಕಂಪದ ಆಧಾರದಲ್ಲಿ ಮತ ಕೇಳುವುದು ಸರಿಯಲ್ಲ. ಮಾಜಿ ಮಂತ್ರಿಗಳು ನನ್ನ ಕೊನೆ ಚುನಾವಣೆ ಎಂದರೆ, ಜೆಡಿಎಸ್ ಅಭ್ಯರ್ಥಿ ನಾನು ಬಡವ ಎಂದು ಮತ ಕೇಳುತ್ತಿದ್ದಾರೆ. ಆದರೆ ಬಿಜೆಪಿ ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳುತ್ತಿದೆ. ಆದ್ದರಿಂದ ಮತದಾರರು ಅನುಕಂಪದ ಆಧಾರದ ಮೇಲೆ ಮತ ನೀಡಬೇಡಿ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಸಶಕ್ತವಾಗಿದ್ದು, ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಉಪಚುನಾವಣೆಯಲ್ಲಿ ಕೊಟ್ಟಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಮುಂದೆಯೂ ತಾಲೂಕನ್ನು ಜಿಲ್ಲಾ ಕೇಂದ್ರದ ಮಟ್ಟಕ್ಕೆ ಅಭಿವೃದ್ಧಿ ಮಾಡಿ ಜಿಲ್ಲಾ ಕೇಂದ್ರವನ್ನಾಗಿ ಮಾಡುತ್ತೇವೆ ಎಂದರು.