Asianet Suvarna News Asianet Suvarna News

ಅಳ್ನಾವರ: ಮೀಸಲಾತಿ ಪ್ರಕಟವಾಗಿದ್ದೇ ತಡ ತಾಪಂ ಸದಸ್ಯ ಸ್ಥಾನಕ್ಕೆ ಭಾರೀ ಪೈಪೋಟಿ..!

* ಧಾರವಾಡ ಜಿಲ್ಲೆಯ ಅಳ್ನಾವರ ದೇಶದಲ್ಲಿಯೇ ಸಣ್ಣ ತಾಲೂಕು. ಕೇವಲ 12 ಹಳ್ಳಿಗಳು. 1 ಪಟ್ಟಣ ಇರುವ ತಾಲೂಕು
* ಇದೆ ಮೊದಲ ಭಾರಿ ನಡೆಯುತ್ತಿರುವ ತಾ.ಪಂ ಚುನಾವಣೆ 
* ದೇಶದ ರಾಜಕೀಯ ಇತಿಹಾಸದಲ್ಲಿಯೇ ಊರಿಗೊಬ್ಬ ತಾ.ಪಂ.ಸದಸ್ಯನಿರುವ ಮೊದಲ ತಾಲೂಕು
 

Competition in Taluk Panchayat Member Seat at Alnavar in Dharwad
Author
Bengaluru, First Published Jul 3, 2021, 7:40 AM IST

ಶಶಿಕುಮಾರ ಪತಂಗೆ

ಅಳ್ನಾವರ(ಜು.03): ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಇದೀಗ ಅಳ್ನಾವರ ಭಾಗದಲ್ಲಿ ಸದಸ್ಯತ್ವ ಸ್ಥಾನ ಪಡೆಯಲು ಪೈಪೋಟಿ ಶುರುವಾಗಿದೆ.

ನೂತನ ತಾಲೂಕು ಆಗುವ ಮುಂಚೆ ಧಾರವಾಡ ತಾಲೂಕಿನಲ್ಲಿದ್ದ ಅಳ್ನಾವರ ಭಾಗದಲ್ಲಿ ಇರುವ 11 ಗ್ರಾಮಗಳಿಗೆ 11 ತಾಪಂ ಕ್ಷೇತ್ರಗಳನ್ನಾಗಿ ರಚಿಸಲಾಗಿದೆ. ರಾಜ್ಯದಲ್ಲಿಯೇ ಅತೀ ಸಣ್ಣ ತಾಲೂಕು ಇದಾಗಿದ್ದು 11 ಗ್ರಾಮಗಳನ್ನೊಳಗೊಂಡ ಅಳ್ನಾವರ ತಾಲೂಕಿನಲ್ಲಿ ಊರಿಗೊಬ್ಬ ಮೇಂಬರ್‌ ಎನ್ನುವ ಹಾಗಿದೆ. ರಾಜ್ಯದ ರಾಜಕೀಯ ಇತಿಹಾಸದಲ್ಲಿ ಪ್ರತಿ ಗ್ರಾಮಕ್ಕೊಬ್ಬ ತಾಪಂ ಸದಸ್ಯ ಇರುವ ಮೊದಲ ತಾಲೂಕು ಇದು. ಅದರಂತೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ಕೂಡ ಈ ಹಿಂದೆ ನಿಗದಿ ಕ್ಷೇತ್ರದಲ್ಲಿತ್ತು ಇದೀಗ ಹೊನ್ನಾಪೂರ ಕ್ಷೇತ್ರವಾಗಿದೆ.

ಈ ಮೂದಲು ಇಬ್ಬರು ತಾಪಂ ಸದಸ್ಯರು ಮಾತ್ರ ಆಯ್ಕೆಯಾಗುತ್ತಿದ್ದರು. ಜಿಪಂ ಕ್ಷೇತ್ರ ನಿಗದಿ ಬರುತ್ತಿದ್ದ ಕಾರಣ ಆ ಭಾಗದವರೇ ಆಗಿರುತ್ತಿದ್ದರು. ಇದೀಗ ನೂತನ ತಾಲೂಕಿನಲ್ಲಿ ತಾಪಂ, ಜಿಪಂ ಸದಸ್ಯರಾಗಲು ಬಹಳಷ್ಟು ಅವಕಾಶಗಳು ಸೃಷ್ಟಿಯಾಗಿವೆ. ಹಾಗಾಗಿ ರಾಜಕೀಯ ಮುಖಂಡರು ಪಕ್ಷಗಳಿಂದ ಟಿಕೆಟ್‌ ಪಡೆಯಲು ಸೆಣಸಾಟ ನಡೆಸುತ್ತಿದ್ದಾರೆ. ಇನ್ನು ಕೆಲವರುಂತೂ ಯಾವುದೇ ಪಕ್ಷದಿಂದಲು ಟಿಕೆಟ್‌ ಸಿಗದಿದ್ದರೂ ಪಕ್ಷೇತರವಾಗಿಯಾದರೂ ಸ್ಪರ್ಧಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ನಾಯಕರೇ ಇಲ್ಲದ ಜೆಡಿಎಸ್‌ಗೆ ಚುನಾವಣೆ ಸವಾಲು..!

ಕಾರ್ಯಕರ್ತರ ಹೋರಾಟ:

ಪ್ರತಿ ಗ್ರಾಮದಲ್ಲಿಯೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ತಮಗೆ ಟಿಕೆಟ್‌ ನೀಡುವಂತೆ ತಮ್ಮ ಪಕ್ಷಗಳ ಹಿರಿಯ ಮುಖಂಡರಿಗೆ, ಶಾಸಕರಿಗೆ ದುಂಬಾಲು ಬೀಳುತ್ತಿದ್ದಾರೆ. ಅದರಲ್ಲೂ ಜಿಪಂ, ತಾಪಂ ಟಿಕೆಟ್‌ ಪಡೆಯಲು ನಾವು ಜನಬಲ ತೋರಿಸುತ್ತೇವೆ. ನಮಗೆ ಟಿಕೆಟ್‌ ಕೊಡಿಸಿ ಎಂದು ಹಿರಿ- ಕಿರಿಯ ಮುಖಂಡರಲ್ಲಿ ಒಳ ಒಪ್ಪಂದಗಳು ಆರಂಭವಾಗುತ್ತಿವೆ. ಪ್ರಸ್ತುತ ಯುವ ಮುಖಂಡರು, ಕಾರ್ಯಕರ್ತರು ಹಿರಿಯ ಮುಖಂಡರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದು, ಈ ಚುನಾವಣೆಯಲ್ಲಿ ಜಾತಿ, ಸಮುದಾಯಗಳ ಮುಖಂಡರುಗಳು ಸ್ಪರ್ದಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರಗಳಲ್ಲಿ ಕೇಳಿ ಬರುತ್ತಿವೆ. ಹಾಗೆಯೇ ಈ ಹಿಂದೆ ಗ್ರಾಪಂ ಚುನಾವಣೆಯಲ್ಲಿ ಹಿನ್ನಡೆ ಕಂಡಿರುವ ವ್ಯಕ್ತಿಗಳು ಸಹ ಗ್ರಾಮಕ್ಕೊಬ್ಬ ಸದಸ್ಯರ ಆಯ್ಕೆ ಇರುವ ಕಾರಣ ಇನ್ನೊಂದು ಬಾರಿ ಸ್ಪರ್ಧೆ ನಡೆಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಒಡಕಾದ ಕಾಂಗ್ರೆಸ್‌:

ಕಲಘಟಗಿ ಕ್ಷೇತ್ರದ ಕಾಂಗ್ರೆಸ್‌ ಪಕ್ಷದಲ್ಲಿ ಲಾಡ್‌ ಹಾಗೂ ಛಬ್ಬಿ ಬಣಗಳಾಗಿದ್ದು ಎರಡೂ ಗುಂಪುಗಳ ಕಾರ್ಯಕರ್ತರು ನಾಮುಂದು- ತಾಮುಂದು ಎನ್ನುತ್ತಿದ್ದಾರೆ. ಕೊನೆಗೆ ಎಲ್ಲಿ ಯಾರಿಗೆ ಕಾಂಗ್ರೆಸ್‌ ಟಿಕೆಟ್‌ ಲಭಿಸಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಪ್ರತಿ ಕ್ಷೇತ್ರದಲ್ಲೂ ಎರಡೂ ಗುಂಪಿನ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಎರಡೂ ಮುಖಂಡರು ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ಲಾಬಿ ನಡೆಸಲಿದ್ದಾರೆ. ಇದರಲ್ಲಿ ಯಾವ ಗುಂಪಿನ ಕೈಮೇಲಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ತಾಲೂಕು ಪಂಚಾಯಿತಿ ಚುನಾವಣೆ ಪಕ್ಷದ ಚಿನ್ಹೆಯ ಮೇಲೆಯೇ ನಡೆಯಲಿದ್ದು, ಈ ಭಿನ್ನಾಭಿಪ್ರಾಯ, ಒಡಕು ಪಕ್ಷಕ್ಕೆ ಹಿನ್ನಡೆ ಆಗಬಹುದಾಗಿದ್ದು, ಎರಡೂ ಗುಂಪನ್ನು ಸಮತೋಲಿತವಾಗಿ ಗುರುತಿಸಿ ಟಿಕೆಟ್‌ ನೀಡುವ, ಇತರರನ್ನು ಸಮಾಧಾನ ಮಾಡುವ ಕಾರ್ಯ ನಡೆಯಬೇಕಾಗಿದೆ. ದೊಡ್ಡವರ ಗುದ್ದಾಟದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಟಿಕೆಟ್‌ ಕೈ ತಪ್ಪುವ ಎಲ್ಲ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಈ ಗೊಂದಲದಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರ ಹೇಗಾದರೂ ಮಾಡಿ ಇರುವ ಅವಕಾಶವನ್ನು ಬಿಟ್ಟುಕೊಡಬಾರದು ಎಂಬ ಯೋಜನೆ ಸಹ ರೂಪಿಸುತ್ತಿದ್ದಾರೆ.

ಅಳ್ನಾವರ ನೂತನ ತಾಲೂಕು ಆಗಿದ್ದರಿಂದ ಪ್ರತಿ ಗ್ರಾಮಗಳಿಗೂ ಒಬ್ಬ ಅಭ್ಯರ್ಥಿಯನ್ನು ಆಯ್ಕೆಮಾಡುವ ಅವಕಾಶವಿದೆ. ಈ ಚುನಾವಣೆಯಲ್ಲಿ ನಾವು ಹೆಚ್ಚಿನದಾಗಿ ಯುವ ಮುಖಂಡರನ್ನು ಆಯ್ಕೆ ಮಾಡುವ ಜೊತೆಗೆ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರಬೇಕಿದೆಯೇ ಹೊರತು ಪೊಳ್ಳು ರಾಜಕಾರಣಿಗಳನ್ನು ಕೈ ಬಿಡಬೇಕಿದೆ ಎಂದು ಹಿಂಡಸಗೇರಿ ಗ್ರಾಮದ ಯುವ ಮುಖಂಡ ಶ್ರೀಧರ ನರಗುಂದ ತಿಳಿಸಿದ್ದಾರೆ.     
 

Follow Us:
Download App:
  • android
  • ios