Karnataka Politics : ಕಾಂಗ್ರೆಸ್ - ಜೆಡಿಎಸ್ ಪೈಪೋಟಿಯಲ್ಲಿ ಬಿಜೆಪಿ ಈಗ ಲೆಕ್ಕಕ್ಕಿಲ್ಲ
- ಹಾಲಿ, ಮಾಜಿ ಶಾಸಕರಿಗೆ ಪ್ರತಿಷ್ಠೆಯ ಕಣ
- ಅಸೆಂಬ್ಲಿ ಚುನಾವಣೆ ಗೆಲ್ಲಲು ಪುರಸಭೆ ಗೆಲುವು ಅನಿವಾರ್ಯ
- ಕಾಂಗ್ರೆಸ್ - ಜೆಡಿಎಸ್ ಪೈಪೋಟಿಯಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಡಿ.19): ಮುಂಬರುವ ಮಾಗಡಿ ವಿಧಾನಸಭಾ ಕ್ಷೇತ್ರ ಚುನಾವಣೆ (Assembly Election ) ದೃಷ್ಟಿಯಿಂದ ಹಾಲಿ ಮತ್ತು ಮಾಜಿ ಶಾಸಕರಿಗೆ ಬಿಡದಿ ಪುರಸಭೆ (Bidadi) ಚುನಾವಣೆ (Election) ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿದೆ. ಸ್ಥಳೀಯ ಸಂಸ್ಥೆಗಳ ಆಡಳಿತ ತಮ್ಮ ಹಿಡಿತದಲ್ಲಿದ್ದರೆ ಅಸೆಂಬ್ಲಿ ಚುನಾವಣೆ ಗೆಲ್ಲಲು ಅನುಕೂಲವಾಗುತ್ತದೆ ಎಂಬುದು ಜೆಡಿಎಸ್ (JDS) ಶಾಸಕ ಎ.ಮಂಜುನಾಥ್ ಹಾಗೂ ಕಾಂಗ್ರೆಸ್ (Congress) ನಾಯಕರಾದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣರವರ ರಾಜಕೀಯ (Politics) ಲೆಕ್ಕಾಚಾರ. ಈ ಕಾರಣದಿಂದಾಗಿ ಹಾಲಿ ಮತ್ತು ಮಾಜಿ ಶಾಸಕರು ಸದ್ಯ ನಡೆದಿರುವ ಪುರಸಭೆ ಚುನಾವಣೆಯಲ್ಲಿ (Election) ತಮ್ಮ ಪಕ್ಷ ಅದಕ್ಕಿಂತ ಮೇಲಾಗಿ ತಮ್ಮ ಬೆಂಬಲಿತರನ್ನು ಆಯ್ಕೆಗೊಳಿಸಲು ಕಸರತ್ತು ನಡೆಸಿದ್ದಾರೆ. ಅದಕ್ಕಾಗಿ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತಿದ್ದಂತೆ ಅಖಾಡಕ್ಕಿಳಿದಿದ್ದಾರೆ.
ಬಿಜೆಪಿ (BJP) ಆಟಕ್ಕುಂಟು ಲೆಕ್ಕಕ್ಕಿಲ್ಲ: ಶಾಸಕ ಎ.ಮಂಜುನಾಥ್ ರವರು ಬೆಳಗಾವಿ (Belagavi) ಅಧಿವೇಶನದಲ್ಲಿ ಪಾಲ್ಗೊಂಡಿದ್ದರೆ, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಪಕ್ಷದ ಕಾರ್ಯಕರ್ತರೊಂದಿಗೆ ಮತಬೇಟೆ ಆರಂಭಿಸಿದ್ದಾರೆ. ಇನ್ನು ನಾಯಕತ್ವದ ಕೊರತೆಯಿಂದ ಸೊರಗಿರುವ ಬಿಜೆಪಿ (BJP) ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಮಾಗಡಿ ಕ್ಷೇತ್ರದಲ್ಲಿ ಯಾವುದೇ ಚುನಾವಣೆಗಳು (Election) ನಡಯಲಿ ಅಲ್ಲಿ ಅಭಿವೃದ್ಧಿಗಿಂತ ಮಂಜುನಾಥ್ ಮತ್ತು ಬಾಲಕೃಷ್ಣ ನಡುವಣ ಕಲಹವೇ ಕೇಂದ್ರ ಬಿಂದು ಆಗಿರುತ್ತದೆ. ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ (JDS) ಸ್ವಲ್ಪ ಮಟ್ಟಿನ ಹಿನ್ನಡೆ ಅನುಭವಿಸಿರುವ ಕಾರಣ ಪುರಸಭೆ ಚುನಾವಣೆ ಮಂಜುನಾಥ್ ಪಾಲಿಗೆ ಸವಾಲಾಗಿದೆ.
ಸಮಬಲದ ವಾತಾವರಣ: ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಬಡ್ತಿ ಪಡೆದ ನಂತರ ಜರುಗಿದ ಪ್ರಥಮ ಚುನಾವಣೆಯಲ್ಲಿ ಜೆಡಿಎಸ್ (JDS) -12 ಮತ್ತು ಕಾಂಗ್ರೆಸ್ (Congress) 11 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಜೆಡಿಎಸ್ (JDS) ನಲ್ಲಿ ಶಾಸಕರಾಗಿದ್ದ ಬಾಲಕೃಷ್ಣ ಪಕ್ಷಕ್ಕೆ ಪುರಸಭೆ ಅಧಿಕಾರ ಕೊಡಿಸಿ ತಮ್ಮ ಹಿಡಿತ ಸಾಧಿಸಿದ್ದರು. ಮೊದಲ 5 ವರ್ಷಗಳ ಅವಧಿಯಲ್ಲಿ ಜೆಡಿಎಸ್ (JDS) ಪಾರುಪತ್ಯ ಮೆರೆದು ಅಧಿಕಾರ ಅನುಭವಿಸಿತ್ತು.
ಬಾಲಕೃಷ್ಣ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಾಗ ಬಹುತೇಕ ಸದಸ್ಯರು ಪಕ್ಷ ನಿಷ್ಟೇ ಮೆರೆದು ಜೆಡಿಎಸ್ ನಲ್ಲಿಯೇ ಉಳಿದುಕೊಂಡರು. ಎ.ಮಂಜುನಾಥ್ ಜತೆ ಜೆಡಿಎಸ್ ಗೆ ಬಂದ ಕೆಲ ಕಾಂಗ್ರೆಸ್ ಸದಸ್ಯರ ಸೇರ್ಪಡೆಯೊಂದಿಗೆ ಜೆಡಿಎಸ್ ಬಲ 12 ರಿಂದ 17ಕ್ಕೆ ಏರಿಕೆಯಾಗಿತ್ತು. ಆದರೀಗ ಬಿಡದಿ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಪೈಪೋಟಿಯಲ್ಲಿ ಸಮಬಲದ ಹೋರಾಟದ ವಾತಾವರಣ ಕಂಡು ಬರುತ್ತಿದೆ. ಈಗ ಬದಲಾದ ರಾಜಕೀಯದಲ್ಲಿ ಬಿಡದಿ (Bidadi) ಭಾಗದ ಮುಖಂಡರು ಮತ್ತೆ ತಮ್ಮ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜುನಾಥ್ ಗೆಲುವಿಗೆ ಹೆಗಲು ನೀಡಿದ್ದ ಅನೇಕ ನಾಯಕರು ಜೆಡಿಎಸ್ ತೊರೆದು ಬಾಲಕೃಷ್ಣ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಹಾಲಿ ಮತ್ತು ಮಾಜಿ ಶಾಸಕರು ಪಕ್ಷದ ಅಭ್ಯರ್ಥಿಗೆ ಠಕ್ಕರ್ ನೀಡಲು ಜಾತಿ ಲೆಕ್ಕಾಚಾರದ ಮೇಲೆ ಹಾಗೂ ಪಕ್ಷದ ಕಾರ್ಯಕರ್ತರನ್ನು ಸೆಳೆದುಕೊಳ್ಳುವುದರೊಂದಿಗೆ ಜಾಣ್ಮೆಯೊಂದಿಗೆ ತಮ್ಮದೇ ರೀತಿಯಲ್ಲಿ ಪೈಪೋಟಿಗೆ ಇಳಿದು ಮೇಲುಗೈ ಸಾಧಿಸಲು ಹವಣಿಸುತ್ತಿದ್ದಾರೆ.
ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರ
ಪುರಸಭೆಗೆ ತಮ್ಮವರನ್ನು ಆಯ್ಕೆಗೊಳಿಸಿ ಮುಂದಿನ ವಿಧಾನಸಭೆ ಚುನಾವಣೆಗೆ (Assembly Electiion) ವೇದಿಕೆ ರೂಪಿಸಿಕೊಳ್ಳಲು ಬಿಡದಿ ಪುರಸಭೆ ಸೇರಿದ ಮಾಗಡಿ ವಿಧಾನಸಭೆ ಕ್ಷೇತ್ರದ ಶಾಸಕ ಎ.ಮಂಜುನಾಥ್ ಮತ್ತು ಮಾಜಿ ಶಾಸಕ ಬಾಲಕೃಷ್ಣ ಚುನಾವಣೆ ರಣತಂತ್ರ ರೂಪಿಸಿದ್ದಾರೆ. ಪುರಸಭೆ ಆಡಳಿತ ತಮ್ಮ ಕೈಯಲ್ಲಿದ್ದರೆ ತಮ್ಮ ಪ್ರಭಾವ ಬಳಸಿ ಸ್ಥಳೀಯವಾಗಿ ಒಂದಿಷ್ಟುಕೆಲಸ ಮಾಡಿಸಬಹುದು. ಅಲ್ಲದೆ, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರದಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪುರಸಭೆ ಚುನಾವಣೆಯಲ್ಲಿ ಸಕ್ರಿಯರಾಗಿ ತಮ್ಮ ಪಕ್ಷ ಹಾಗೂ ತಮ್ಮ ಬೆಂಬಲಿತರ ಆಯ್ಕೆಗೆ ಮುಂದಾಗಿದ್ದಾರೆ.