ಬೆಂಗಳೂರು [ಸೆ.30]: ನಗರದ ಟ್ರಾಫಿಕ್‌ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯಿಂದ ಹೆಣಗಾಡುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಟ್ರಾಫಿಕ್‌ ಪೊಲೀಸರೊಂದಿಗೆ ಅರ್ಧದಿನ ಕಳೆದು ಅಗತ್ಯ ಸಲಹೆಗಳನ್ನು ನೀಡಲು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವಕಾಶ ನೀಡಿದ್ದಾರೆ.

ಬೆಳಗ್ಗೆ ಮತ್ತು ಸಂಜೆಯ ವೇಳೆ ನಗರದಲ್ಲಿನ ಬಹುತೇಕ ಟ್ರಾಫಿಕ್‌ ಜಂಕ್ಷನ್‌ನಲ್ಲಿ ವಾಹನ ಸವಾರರು ಸಿಲುಕಿ ಪರದಾಡುವುದು ಪ್ರತಿನಿತ್ಯದ ಸಮಸ್ಯೆಯಾಗಿದೆ. ಸಂಚಾರದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್‌ ಆಯುಕ್ತರು ಹೊಸ ಯೋಜನೆಯನ್ನು ರೂಪಿಸಿ ಸಾರ್ವಜನಿಕರಿಂದಲೇ ಸಲಹೆಗಳನ್ನು ಪಡೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಅವರು ಜನರಿಗೆ ಅನುಕೂಲವಾಗುವ ಯಾವುದಾದರೂ ಟ್ರಾಫಿಕ್‌ ಜಂಕ್ಷನ್‌ನಲ್ಲಿ ಟ್ರಾಫಿಕ್‌ ಪೊಲೀಸರೊಂದಿಗೆ ಅರ್ಧ ದಿನ ಕಳೆದು ಸಲಹೆ ನೀಡುವಂತೆ ಎಂದು ಟ್ವೀಟರ್‌ನಲ್ಲಿ ಆಹ್ವಾನಿಸಿದ್ದಾರೆ.

ಪೊಲೀಸರ ಜತೆ ಅರ್ಧ ದಿನ ಕಳೆದು ಅವರ ಸಮಸ್ಯೆಗಳನ್ನು ಅರಿತುಕೊಳ್ಳುವುದಲ್ಲದೇ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳಲು ಸಹಕಾರಿಯಾಗುವ ಸಲಹೆಗಳನ್ನು ನೀಡಬಹುದು. ಟ್ರಾಫಿಕ್‌ ಪೊಲೀಸರಿಂದ ಸೇವೆ ಪಡೆದುಕೊಳ್ಳುವುದು ನಾಗರಿಕರ ಹಕ್ಕು. ಹೀಗಾಗಿ ನಗರದ ಯಾವುದಾದರೂ ಒಂದು ಟ್ರಾಫಿಕ್‌ ಜಂಕ್ಷನ್‌ನಲ್ಲಿ ಪೊಲೀಸರೊಂದಿಗೆ ಅರ್ಧ ದಿನ ಕಳೆಯುವಂತೆ ಮನವಿ ಮಾಡಿದ್ದಾರೆ.

ಕೆಲ ಕಾಲ ಪೊಲೀಸರೊಂದಿಗೆ ಇದ್ದು ಬದಲಾವಣೆ ಮಾಡಿಕೊಳ್ಳುವ ಸಂಬಂಧ ಉತ್ತಮ ಸಲಹೆಗಳಿದ್ದರೆ ನೀಡಬಹುದು. ಅದನ್ನು ಮುಕ್ತವಾಗಿ ಸ್ವೀಕರಿಸಲಾಗುವುದು. ಪೊಲೀಸರಂತೆ ಸಾರ್ವನಿಕರು ಸಹ ಸಂಚಾರದಟ್ಟಣೆ, ಸಂಚಾರ ನಿಯಮ ಪಾಲನೆಗೆ ಪಾಲುದಾರರಾಗಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಟ್ವೀಟರ್‌ಗೆ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೆಲವರು ನಗರದ ಕೆಲವು ಸಿಗ್ನಲ್‌ನಲ್ಲಿನ ಸಮಸ್ಯೆಗಳ ಕುರಿತು ಪಟ್ಟಿಮಾಡಲಾಗಿದೆ. ಅವುಗಳ ಕಡೆ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಟ್ವೀಟರ್‌ನಲ್ಲಿ ಸಲಹೆ ನೀಡಿದ್ದಾರೆ.