Asianet Suvarna News Asianet Suvarna News

ಹುಬ್ಬಳ್ಳಿ-ಧಾರವಾಡ: ಪ್ರಾಯೋಗಿಕವಾಗಿ ಕಸ ಸಂಗ್ರಹಣಾ ಕೇಂದ್ರ ಆರಂಭ

ಚಿಂದಿ ಆಯುವವರಿಂದ ಕೇರಳ ಮಾದರಿ ಸೆಂಟರ್‌ನಲ್ಲಿ 32ಬಗೆಯ ಕಸ ವಿಂಗಡಣೆ| ಮರುಬಳಕೆ ವಸ್ತು ಕೊಳ್ಳಲಿದ್ದಾರೆ ಗುಜರಿ ವ್ಯಾಪಾರಿಗಳು|ಮಹಾನಗರ ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಣ ಕೇಂದ್ರದ ಬಳಿ ಇದನ್ನು ನಿರ್ಮಿಸಲಾಗುತ್ತಿದೆ|

Commencement of Experimental Garbage Collection Center in Hubballi-Dharwad
Author
Bengaluru, First Published Dec 28, 2019, 7:36 AM IST
  • Facebook
  • Twitter
  • Whatsapp

ಮಯೂರ ಹೆಗಡೆ

ಹುಬ್ಬಳ್ಳಿ[ಡಿ.28]: ಮಹಾನಗರದ ಕಸ ವಿಲೇವಾರಿ ನಿರ್ವಹಣೆಗಾಗಿ ಇನ್ನೊಂದು ಹೆಜ್ಜೆ ಇಟ್ಟಿರುವ ಮಹಾನಗರ ಪಾಲಿಕೆಯು ಐದು ಡಿಡಬ್ಲೂಸಿಸಿ (ಒಣ ತ್ಯಾಜ್ಯ ಸಂಗ್ರಹಣ ಕೇಂದ್ರ) ತೆರೆಯಲು ಮುಂದಾಗಿದ್ದು, ಇಂದಿರಾ ನಗರದಲ್ಲಿ ಪ್ರಾಯೋಗಿಕವಾಗಿ ಕಾರ್ಯ ಆರಂಭವಾಗಿದೆ. ಇಲ್ಲಿ ಚಿಂದಿ ಆಯುವವರು 32 ಬಗೆಯ ಒಣ ಕಸ ವಿಂಗಡಣೆ ಮಾಡಿ ಮರುಬಳಕೆಗೆ ಬರುವಂತವನ್ನು ಸಂಗ್ರಹಿಸಿ ಆದಾಯ ಗಳಿಸಿಕೊಳ್ಳುವರು.

ಮನೆಮನೆ ಕಸ ಸಂಗ್ರಹಣದ ಮುಂದುವರಿದ ಭಾಗವಾಗಿ ಡಿಡಬ್ಲೂಸಿಸಿ ಸೆಂಟರ್‌ಗಳು ಕಾರ್ಯಾರಂಭ ಮಾಡಲಿವೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳು ಒಣಕಸವನ್ನು ಈ ಸೆಂಟರ್‌ಗೆ ನೀಡಲಿವೆ. ಇಲ್ಲಿ ಒಣಕಸ ವಿಂಗಡಣೆ ಪ್ರಕ್ರಿಯೆ ನಡೆದ ಬಳಿಕ ಮರುಬಳಕೆಗೆ ಕಳಿಸಲಾಗುತ್ತದೆ. ಸದ್ಯ ಇಂದಿರಾ ನಗರದಲ್ಲಿ ಆರಂಭಿಸಲಾದ ಸೆಂಟರ್‌ಗೆ ಹಳೆ ಹುಬ್ಬಳ್ಳಿ ಮಾರುಕಟ್ಟೆ ಭಾಗದಿಂದ ಸಂಗ್ರಹಿಸಲಾದ ಕಸ ನೀಡಲಾಗುತ್ತಿದೆ.

ಸದ್ಯ ಈಗಾಗಲೇ ವಲಯ 11ರಲ್ಲಿ ಆರಂಭವಾಗಿದ್ದು, ವಲಯ 4ರಲ್ಲಿ ಶೀಘ್ರ ಆರಂಭಿಸಲಿವೆ. ಟಿಪ್ಪರ್‌ಗಳ ಮೂಲಕ ಮಾತ್ರವಲ್ಲದೆ, ಸ್ಥಳೀಯರು ನೇರವಾಗಿ ಒಣಕಸವನ್ನು ತಂದುಕೊಟ್ಟರೂ ಇಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‌ಡಬ್ಲೂಎಂ ಅಭಿಯಂತರ ವಿಜಯಕುಮಾರ್‌ ಆರ್‌. ತಿಳಿಸಿದರು.

ಚಿಂದಿ ಆಯುವವರಿಗೇನು ಕೆಲಸ?

ಹಸಿರು ದಳ ಎಂಬ ಎನ್‌ಜಿಒ ಈಗಾಗಲೆ ಮಹಾನಗರದಲ್ಲಿ 1 ಸಾವಿರಕ್ಕೂ ಹೆಚ್ಚಿನ ಚಿಂದಿ ಆಯುವವರ ಸರ್ವೇ ನಡೆಸಿ ಗುರುತಿಸಿದ್ದು, ಅವರಿಗೆ ಗುರುತಿನ ಪತ್ರ ನೀಡಿದೆ. ಅಲ್ಲದೆ, ಕಸ ವಿಂಗಡಣೆಗಾಗಿ ತರಬೇತಿ ನೀಡಲಾಗುತ್ತಿದೆ. ಇವರು ಇಲ್ಲಿ ಒಂದೇ ವಸ್ತುವಿನಲ್ಲಿನ ಬೇರೆ ಬೇರೆ ಮೌಲ್ಯದ ಪರಿಕರವನ್ನು ವಿಭಾಗಿಸುತ್ತಾರೆ. ಅಂದರೆ ಒಂದು ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ಮೇಲಿನ ಹಾಗೂ ಕೆಳಭಾಗದ ಎರಡು ಗಟ್ಟಿಯಾದ ಭಾಗ ಹಾಗೂ ಮಧ್ಯದ ಮೃದು ಪ್ಲಾಸ್ಟಿಕ್‌ ಮತ್ತು ಮುಚ್ಚಳ ಎಂಬ ನಾಲ್ಕು ರೀತಿಯ ವಿಂಗಡಣೆ ಇದೆ. ಇದರ ಕುರಿತಂತೆ ಹಂತಹಂತವಾಗಿ ತರಬೇತಿ ನೀಡಲಾಗುತ್ತಿದೆ. ಇವರು ಡಿಡಬ್ಲೂಸಿಸಿ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

32 ಬಗೆಯ ಒಣತ್ಯಾಜ್ಯ

ನಗರಗಳಲ್ಲಿ ಒಟ್ಟಾರೆ 180 ರೀತಿಯ ಒಣಕಸಗಳನ್ನು ಗುರುತಿಸಲಾಗಿದೆ. ಆದರೆ, ಪ್ರಾಥಮಿಕ ಹಂತದಲ್ಲಿ ನಗರದಲ್ಲಿ 32 ಬಗೆಯ ಕಸ ಅಂದರೆ, ಪಾಸ್ಟಿಕ್‌ ಹಾಗೂ ಫೈಬರ್‌ ನಾನಾ ರೀತಿಯ ವಸ್ತುಗಳು, ಪಿಂಗಾಣಿ ವಸ್ತು, ಎಲೆಕ್ಟ್ರಾನಿಕ್‌ ತ್ಯಾಜ್ಯ, ಗಾಜಿನ ವಸ್ತುಗಳು, ಚರ್ಮದ ವಸ್ತು, ಬಟ್ಟೆಹಾಗೂ ಲೋಹದ ವಸ್ತುಗಳು ಸೇರಿ 32 ವಸ್ತುಗಳು ಇಲ್ಲಿ ವಿಂಗಡಣೆ ಆಗಲಿವೆ. ಹಸಿರು ದಳದವರು ಈಗಾಗಲೆ ಮಹಾನಗರದಲ್ಲಿ 60 ಗುಜರಿ ವ್ಯಾಪಾರಿಗಳನ್ನು ಸಂಪರ್ಕಿಸಿದ್ದು, ಸೆಂಟರ್‌ನಲ್ಲಿ ಶೇಖರಿಸಿ, ವಿಂಗಡಿಸಿದ ವಸ್ತುಗಳನ್ನು ಖರೀದಿ ಮಾಡುವಂತೆ ಇವರನ್ನು ಒಪ್ಪಿಸಿದ್ದಾರೆ. ಇದರಿಂದ ಬರುವ ಆದಾಯ ಚಿಂದಿ ಆಯುವವರಿಗೆ ಲಭಿಸಲಿದೆ. ಇದರಿಂದ ವಿವಿಧೆಡೆ ಅಲೆಯುವುದು, ಆರೋಗ್ಯ ಕೆಡಿಸಿಕೊಳ್ಳುವುದು ತಪ್ಪಲಿದೆ.

ಸೆಂಟರ್‌ ಹೇಗಿದೆ?

ಪರಿಸರ ಅಭಿಯಂತರಾದ ನಯನಾ ಕೆ.ಎಸ್‌. ಮಾತನಾಡಿ, ಕೇರಳ ಮಾದರಿಯ ಸೆಂಟರ್‌ಗಳು ಇವಾಗಿವೆ. ಇದು ಕನಿಷ್ಠ ವೆಚ್ಚದಲ್ಲಿ ನಿರ್ಮಿಸಲಾದ ಸೆಂಟರ್‌. ಮಹಾನಗರ ಪಾಲಿಕೆಯಿಂದ ತ್ಯಾಜ್ಯ ಸಂಗ್ರಹಣ ಕೇಂದ್ರದ ಬಳಿ ಇದನ್ನು ನಿರ್ಮಿಸಲಾಗುತ್ತಿದೆ. ಮುಂದೆ ಎಲ್ಲ ವಲಯಗಳಲ್ಲಿ ತಲಾ ಒಂದು ಡಿಡಬ್ಲೂಸಿಸಿ ತೆರೆಯುವ ಉದ್ದೇಶವಿದೆ. ಕೇರಳದಲ್ಲಿ ಇದರ ಕುರಿತು ಅಧ್ಯಯನ ನಡೆಸಿಕೊಂಡು ಬಂದಿದ್ದೇವೆ. ಅಲ್ಲಿ . 9 ಲಕ್ಷ ವೆಚ್ಚದಲ್ಲಿ ಇಂತಹ ಸೆಂಟರ್‌ ರೂಪಿಸಿದ್ದಾರೆ. ಆದ್ರೆ, ನಾವು ಅತೀ ಕಡಿಮೆ ಹಣದಲ್ಲಿ 5/80 ಸ್ಥಳದಲ್ಲಿ ಸೆಂಟರ್‌ ರೂಪಿಸಲು ನಿರ್ಧರಿಸಿದ್ದೇವೆ ಎಂದರು.

ಈ ಬಗ್ಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು, ಮಹಾನಗರದಲ್ಲಿ ಐದು ಡಿಡಬ್ಲೂಸಿಸಿ ಸೆಂಟರ್‌ಗಳನ್ನು ಆರಂಭಿಸುತ್ತಿದ್ದೇವೆ. ಇದರಿಂದ ಒಣ ಕಸದ ಸಮರ್ಪಕ ನಿರ್ವಹಣೆ, ಮರುಬಳಕೆ ಆಗಲಿದೆ ಎಂದು ತಿಳಿಸಿದ್ದಾರೆ. 

ಈ ಸೆಂಟರ್‌ನಿಂದ ಚಿಂದಿ ಆಯುವವರ ಜೀವನೋಪಾಯಕ್ಕೆ ಸಹಾಯವಾಗಲಿದೆ. ಜೊತೆಗೆ ಒಣಕಸ ವ್ಯರ್ಥವಾಗಿ ಡಂಪಿಂಗ್‌ ಯಾರ್ಡ್‌ ಸೇರುವುದು ತಪ್ಪಲಿದೆ ಎಂದು ಆರ್‌. ಎಸ್‌ಡಬ್ಲೂಎಂ ಅಭಿಯಂತರ ವಿಜಯಕುಮಾರ್‌ ಅವರು ಹೇಳಿದ್ದಾರೆ. 

ಹಸಿರು ದಳದಿಂದ ಚಿಂದಿ ಆಯುವವರಿಗೆ ಒಣತ್ಯಾಜ್ಯದ ಸಮರ್ಪಕ ನಿರ್ವಹಣೆ ಬಗ್ಗೆ ತರಬೇತಿ ನೀಡಿ ಗುರುತಿನ ಪತ್ರ ನೀಡುತ್ತಿದ್ದು, ಡಿಡಬ್ಲೂಸಿಸಿ ಸೆಂಟರ್‌ನಲ್ಲಿ ಇವರು ಕೆಲಸ ಮಾಡಲಿದ್ದಾರೆ ಎಂದು ಹಸಿರುದಳ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ ಬಾರಕೇರ ತಿಳಿಸಿದ್ದಾರೆ. 
 

Follow Us:
Download App:
  • android
  • ios