ರಾಯಚೂರು(ಆ.30): ಗೆಳೆಯರ ಜೊತೆ ತುಂಗಭದ್ರಾ ನದಿಗೆ ತೆರಳಿದ್ದ ವೇಳೆ ಕಾಲು ಜಾರಿ ನದಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಹರನಾಹಳ್ಳಿ ಬಳಿ ಇಂದು(ಭಾನುವಾರ) ನಡೆದಿದೆ. ಸಂದೀಪ್ ಕುಮಾರ್(24) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ.

ಸಂದೀಪ್ ಕುಮಾರ್ ಶಾಸ್ತ್ರಿ ಕ್ಯಾಂಪಿನವನಾಗಿದ್ದಾನೆ ಎಂದು ತಿಳಿದು ಬಂದಿದೆ. ಯುವಕನ ಬಟ್ಟೆ ಮತ್ತು ಚಪ್ಪಲಿ ನದಿ ದಂಡೆಯಲ್ಲಿ ಪತ್ತೆಯಾಗಿವೆ. ನಾಪತ್ತೆಯಾಗಿದ್ದ ಸಂದೀಪ್ ಕುಮಾರ್‌ಗಾಗಿ ಬೆಳಿಗ್ಗೆಯಿಂದ ಸ್ಥಳೀಯರು ನದಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು.

ಲಿಂಗಸೂಗೂರು: ಹಳ್ಳದಲ್ಲಿ ಕಾಲು ಜಾರಿಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳ ದುರ್ಮರಣ

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ಆರಂಭಿಸಿದ್ದರು.  ಬೆಳಿಗ್ಗೆಯಿಂದ ಹುಡುಕಾಡಿದರೂ ಕೂಡ ಸಂದೀಪ್ ಕುಮಾರ್ ಮಾತ್ರ ಪತ್ತೆಯಾಗಿಲ್ಲ. ಜೊತೆಗೆ ಸ್ಥಳಕ್ಕೆ ಎನ್‌ಡಿಆರ್ ಎಫ್ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕೊನೆಗೆ ಮೀನುಗಾರಿಕೆ ಬಲೆಹಾಕಿದ ಯುವಕನ ಶವ ಪತ್ತೆಯಾಗಿದೆ.

ಮೃತಪಟ್ಟ ಸಂದೀಪ್ ಕುಮಾರ್ ಕೃಷಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ‌ ಟಾಪರ್ ಆಗಿದ್ದ ಎಂದು ತಿಳಿದು ಬಂದಿದೆ. ಫೊಟೋಗ್ರಾಫಿಯಲ್ಲಿ ಅತಿಹೆಚ್ಚಿನ ಆಸಕ್ತಿ ಹೊಂದಿದ್ದ ಸಂದೀಪ್ ಗೆಳೆಯರ ಜೊತೆ ತುಂಗಭದ್ರಾ ನದಿಗೆ ತೆರಳಿದ ವೇಳೆ ನದಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.