ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಕುಸಿತ

ತಾಲೂಕಿನ ರೈತರ ಜೀವನಾಧಾರ ವಾಣಿಜ್ಯ ಬೆಳೆ ತೆಂಗು ಆಗಿದ್ದು, ಅದರ ಪ್ರಮುಖ ಉತ್ಪನ್ನವಾದ ಕೊಬ್ಬರಿಯ ಬೆಲೆ ಏಷ್ಯಾದಲ್ಲೇ ಪ್ರಸಿದ್ಧವಾದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ತೀವ್ರ ಕುಸಿತವಾಗಿರುವುದು ಕಲ್ಪತರು ನಾಡಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

Coconut prices fall in Tipaturu market snr

  ತಿಪಟೂರು :  ತಾಲೂಕಿನ ರೈತರ ಜೀವನಾಧಾರ ವಾಣಿಜ್ಯ ಬೆಳೆ ತೆಂಗು ಆಗಿದ್ದು, ಅದರ ಪ್ರಮುಖ ಉತ್ಪನ್ನವಾದ ಕೊಬ್ಬರಿಯ ಬೆಲೆ ಏಷ್ಯಾದಲ್ಲೇ ಪ್ರಸಿದ್ಧವಾದ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ತೀವ್ರ ಕುಸಿತವಾಗಿರುವುದು ಕಲ್ಪತರು ನಾಡಿನ ತೆಂಗು ಬೆಳೆಗಾರರಲ್ಲಿ ತೀವ್ರ ಆತಂಕ ಉಂಟುಮಾಡಿದೆ.

ಹಲವು ಏಳುಬೀಳುಗಳ ನಡುವೆಯೂ ಕಳೆದ ವರ್ಷದವರೆಗೂ ಕ್ವಿಂಟಾಲ್‌ ಕೊಬ್ಬರಿ ಬೆಲೆ ರು.18ಸಾವಿರವರೆಗೂ ಇದ್ದು, ಬೆಳೆಗಾರರಲ್ಲಿ ಒಂದು ರೀತಿಯ ನೆಮ್ಮದಿ ತಂದಿತ್ತು. ಕಳೆದ 7-8 ತಿಂಗಳಿನಿಂದ ಕೊಬ್ಬರಿ ಬೆಲೆ ಇಳಿಯುತ್ತಲೇ ಇದ್ದು, ಜೂ.24ರ ಶನಿವಾರ ಮಾರುಕಟ್ಟೆಯಲ್ಲಿ ಕೊಬ್ಬರಿ ಕೇವಲ 8000ಕ್ಕೆ ಹರಾಜಾಗಿದ್ದು, ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಇನ್ನೆಷ್ಟುಇಳಿಕೆಯಾಗಲಿದೆ ಎಂಬ ಆತಂಕ ತೆಂಗು ಬೆಳೆಗಾರರಲ್ಲಿ ಮನೆ ಮಾಡಿದೆ.

ತಿಪಟೂರು ಕೊಬ್ಬರಿಯು ರುಚಿ ಹಾಗೂ ಗುಣಮಟ್ಟದಲ್ಲಿ ಉತ್ತಮ ದರ್ಜೆಯಾಗಿರುವ ಕಾರಣ ಕೊಬ್ಬರಿಯನ್ನು ತಿನ್ನಲು, ಸಿಹಿ ಪದಾರ್ಥಗಳನ್ನ ತಯಾರಿಸಲು, ಗುಣಮಟ್ಟದ ಕೊಬ್ಬರಿ ಎಣ್ಣೆ ಮತ್ತು ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಗೂ ಬಳಸುವುದರಿಂದ ತಿಪಟೂರು ಕೊಬ್ಬರಿಗೆ ದೇಶಾದ್ಯಂತ ಅದರಲ್ಲೂ ಉತ್ತರ ಭಾರತದ ಸಾಕಷ್ಟುರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಉತ್ತರ ಭಾರತದಲ್ಲಿ ಚಳಿಗಾಲದ ದಿನಗಳಲ್ಲಿ ಕೊಬ್ಬರಿಯನ್ನು ಹೆಚ್ಚು ಉಪಯೋಗಿಸುವುದರಿಂದ ಬೇಡಿಕೆ ಹಾಗೂ ಬೆಲೆಯೂ ಗಮನಾರ್ಹವಾಗಿ ಹೆಚ್ಚುತ್ತದೆ. ಆದರೆ ಈ ವರ್ಷ ಉತ್ತರ ಭಾರತದ ರಾಜ್ಯಗಳಲ್ಲಿ ಉಷ್ಣಾಂಶ ಹೆಚ್ಚು ಇರುವುದರಿಂದ ಕೊಬ್ಬರಿ ತಿನ್ನುವುದು ಕಡಿಮೆಯಾಗಿ ಬೇಡಿಕೆಯೂ ಸಹಜವಾಗಿ ಕಡಿಮೆ ಎಂಬ ಮಾತಿದೆ.

ತೆಂಗು ಬೆಳೆಗಾರರಿಗೆ ಈಗಿನ ತೋಟಗಾರಿಕಾ ಕೃಷಿಯ ವೆಚ್ಚ ಬಲು ದುಬಾರಿಯಾಗಿದ್ದು, ಒಂದು ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು ಕನಿಷ್ಠವೆಂದರೂ 16 ಸಾವಿರ ರು. ಖರ್ಚು ಬರುತ್ತಿದ್ದು, ವೈಜ್ಞಾನಿಕವಾಗಿ ಒಂದು ಕ್ವಿಂಟಾಲ್‌ ಕೊಬ್ಬರಿಗೆ 18 ಸಾವಿರ ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರು ತುಸು ನೆಮ್ಮದಿ ಜೀವನ ಮಾಡಬಹದಾಗಿದೆ. ಆದರೆ ಪ್ರಸ್ತುತ 8 ಸಾವಿರ ರು. ಆಸುಪಾಸಿನಲ್ಲಿ ಕೊಬ್ಬರಿ ಬೆಲೆ ಇದ್ದು, ಬೆಳೆಗಾರರು ತೀವ್ರ ನಷ್ಟಅನುಭವಿಸುವಂತಾಗಿದೆ.

ಬೆಲೆ ಇಳಿಕೆಯ ಜೊತೆಗೆ ತೆಂಗು ಬೆಳೆಗಾರರಿಗೆ ತೋಟಗಾರಿಕಾ ಮೂಲ ಸೌಲಭ್ಯಗಳ ಕೊರತೆ, ಪ್ರಕೃತಿ ವಿಕೋಪ, ತೆಂಗಿನ ಮರಗಳಿಗೆ ಎಡಬಿಡದೆ ಕಾಡುತ್ತಿರುವ ಕಪ್ಪು ತಲೆಹುಳು ರೋಗ, ರಸ ಸೋರಿಕೆ, ನುಸಿಪೀಡೆ, ಕಾಂಡಕೊರಕ ಇತ್ಯಾದಿ ರೋಗಗಳ ಭಾದೆ ಇದ್ದು, ತೋಟಗಳ ಅಭಿವೃದ್ಧಿಗೆ ಬ್ಯಾಂಕುಗಳಿಂದ ಪಡೆದಿರುವ ಸಾಲಗಳ ಮೇಲಿನ ಬಡ್ಡಿ, ಕಂತುಗಳ ತೀರಿಸಲೂ ಆಗದೇ ರೈತರು ಕಂಗಾಲಾಗಿದ್ದಾರೆ.

18 ರು.ಸಾವಿರಕ್ಕೆ ಬೆಂಬಲ ಬೆಲೆ ನಿಗದಿಯಾಗಲಿ

ವೈಜ್ಞಾನಿಕವಾಗಿರುವ ಹಾಲಿ ಇರುವ ಕೊಬ್ಬರಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ 11750 ರು.ಗಳಿಂದ ಕನಿಷ್ಟ18 ಸಾವಿರಕ್ಕಾದರೂ ಏರಿಸಿದಲ್ಲಿ ತೆಂಗು ಬೆಳೆಗಾರರು ನೆಮ್ಮದಿ ಜೀವನ ನಡೆಸಬಹುದೆಂಬ ಬೆಳೆಗಾರರು ಹಾಗೂ ರೈತ ಸಂಘಟನೆಗಳ ಅಭಿಪ್ರಾಯವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 18 ಸಾವಿರಕ್ಕೆ ನಿಗದಿಗೊಳಿಸಿದಲ್ಲಿ ಕೊಬ್ಬರಿ ದರ ತೀವ್ರ ಇಳಿಕೆಯಾಗದೆ ಒಂದು ಹಂತದಲ್ಲಿ ಸ್ಥಿರವಾಗಿರಲಿದೆ ಎಂಬುದು ಮಾರುಕಟ್ಟೆತಜ್ಞರ ಅಭಿಪ್ರಾಯವಾಗಿದೆ.

ರಾಜ್ಯದ ತಿಪಟೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ತೆಂಗು ಬೆಳೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಲಕ್ಷಾಂತರ ಕುಟುಂಬಗಳು ತೆಂಗನ್ನೇ ಜೀವಾಧಾರವಾಗಿರಿಸಿಕೊಂಡಿದ್ದು ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ತೆಂಗು ಬೆಳೆಸಲು, ಸಂರಕ್ಷಿಸಿ ಹೆಚ್ಚು ಆದಾಯ ಪಡೆಯಲು ನೂತನ ತಾಂತ್ರಿಕತೆಗಳ ಬಗ್ಗೆ ಆವಿಷ್ಕಾರಗಳನ್ನು ನಡೆಸಿ ಬೆಳೆಗಾರರಿಗೆ ಪೋ›ತ್ಸಾಹಿಸಬೇಕಿದೆ.

ಅಲ್ಲದೆ ತೆಂಗಿನಕಾಯಿ ಹಾಗೂ ಕೊಬ್ಬರಿಯ ಉಪ ಉತ್ಪನ್ನಗಳ ತಯಾರಿಕೆಗೆ ನೂತನ ತಾಂತ್ರಿಕತೆ, ಅರಿವು ಹಾಗೂ ಮಾರುಕಟ್ಟೆಸೌಲಭ್ಯಗಳ ಒದಗಿಸಿದಲ್ಲಿ ಈಗಿನ ತೆಂಗು ಬೆಳೆಗಾರರ ವೆಚ್ಚ ಕಡಿಮೆಯಾಗಿ ಕೊಬ್ಬರಿ ದರ ಕೆಲ ಬಾರಿ ಕುಸಿತ ಕಂಡರೂ ನಷ್ಟಕಡಿಮೆಯಾಗಿ ನೆಮ್ಮದಿ ಜೀವನ ನಡೆಸಬಹುದಾಗಿದೆ. ಪ್ರಮುಖವಾಗಿ ರೈತರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಗೆ ತೋಟಗಾರಿಕೆಗೆ ಅಗತ್ಯವಿರುವ ರಸಗೊಬ್ಬರ, ಔಷಧ, ಉಳುಮೆ, ಡೀಸೆಲ್‌, ಕೂಲಿದರ ಸೇರಿದಂತೆ ಇತರೆ ವೆಚ್ಚಗಳು ದಿನೇ ದಿನೇ ಗಗನಕ್ಕೇರುತ್ತಿರುವುದರಿಂದ ತೆಂಗು ಬೆಳೆಗಾರರ ಉತ್ಪನ್ನಗಳ ಬೆಲೆ ಹಾಗೂ ಬಳಕೆಯ ವಸ್ತುಗಳ ಬೆಲೆಗಳು ಒಂದಕ್ಕೊಂದು ತಾಳೆಯಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆ ರೂಪಿಸಿ ನೆರವಿಗೆ ಬರುವ ಕೆಲಸ ಮಾಡಬೇಕಿದೆ ಎಂಬುದು ರೈತರ ಆಗ್ರಹವಾಗಿದೆ.

ಕೊಬ್ಬರಿ ಬೆಲೆ ಇತ್ತೀಚಿನ ಒಂದು ವರ್ಷದಿಂದ ನಿರಂತರವಾಗಿ ಕಡಿಮೆಯಾಗುತ್ತಿದ್ದು, ನಾವು ಹಾಗೂ ರೈತ ಸಂಘದವರು ಬೆಂಬಲ ಬೆಲೆ ಏರಿಕೆ ಹಾಗೂ ರಾಜ್ಯ ಸರ್ಕಾರ ಕನಿಷ್ಟ2 ಸಾವಿರ ಸಹಾಯಧನ ನೀಡಬೇಕೆಂದು ಹೋರಾಟ ಮತ್ತು ತಿಪಟೂರು ಬಂದ್‌ ಸಹ ಮಾಡಿದೆವು. ಆದರೆ ಸರ್ಕಾರ ಈವರೆಗೆ ತೆಂಗು ಬೆಳೆಗಾರರ ನೆರವಿಗೆ ಧಾವಿಸಿಲ್ಲ. ಕೂಡಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಗಿದೆ.

ಲೋಕೇಶ್ವರ, ತೆಂಗು ಬೆಳೆಗಾರರ ಪರ ಹೋರಾಟಗಾರರು ಹಾಗೂ ಮುಖಂಡರು

ಒಂದು ಕಿಂಟಾಲ್‌ ಕೊಬ್ಬರಿ ಬೆಳೆಯಲು 18 ಸಾವಿರ ರು.ಖರ್ಚು ಬರುತ್ತಿದ್ದು, ಮಾರುಕಟ್ಟೆಯಲ್ಲಿ ಹಾಲಿ ಬೆಲೆ 8 ಸಾವಿರಕ್ಕೆ ಕುಸಿದಿದೆ. ಅದೇ ರೀತಿ ತೋಟಗಾರಿಕಾ ವೆಚ್ಚಗಳು ದಿನೇ ದಿನೇ ಗಗನಕ್ಕೇರುತ್ತಿದ್ದು, ರೋಗಬಾಧೆಗಳಿಂದ ತೆಂಗಿನ ಮರಗಳನ್ನು ಉಳಿಸಿಕೊಳ್ಳುವುದು ಒಂದು ರೀತಿಯ ಸವಾಲಾಗಿದ್ದು, ಕೂಡಲೆ ಕೇಂದ್ರ ಸರ್ಕಾರ ಕೊಬ್ಬರಿ ಬೆಂಬಲ ಬೆಲೆಯನ್ನು 18 ಸಾವಿರಕ್ಕೆ ಏರಿಸಿ, ರಾಜ್ಯ ಸರ್ಕಾರ ಕ್ವಿಂಟಾಲ್‌ಗೆ 2 ಸಾವಿರ ರುಪಾಯಿಯಾದರೂ ಸಹಾಯ ಧನ ನೀಡಬೇಕು.

ಎಂ.ಆರ್‌. ಅಭಿಷೇಕ್‌, ಎಂಎಸ್ಸಿ (ಅಗ್ರಿ) ಗೋವಿನಪುರ

Latest Videos
Follow Us:
Download App:
  • android
  • ios