*  ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತದ ಪ್ರಭಾವ*  ಆಯಿಲ್ ಕಂಪನಿಗಳ ಭವಿಷ್ಯವೇ ಸರ್ಕಾರಕ್ಕೆ ಹೆಚ್ಚಾಯಿತೆ?*  ರೈತ ಸಮುದಾಯದ ಆರ್ಥಿಕತೆ ಮೇಲೆ ಭಾರೀ ಹೊಡೆತ 

ತುಮಕೂರು(ಮೇ.31): ಗಗನಮುಖಿಯಾಗಿದ್ದ ಖಾದ್ಯ ತೈಲಗಳ ಬೆಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಇಳಿಸಿರುವುದು ನೇರವಾಗಿ ಅನ್ನದಾತರ ಮೇಲೆ ಪ್ರಭಾವ ಬೀರಿದೆ. ಸುಂಕ ಇಳಿಕೆ ನೀತಿಯಿಂದಾಗಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. 

ಜನವರಿ, ಫೆಬ್ರವರಿಯಲ್ಲಿ ಕ್ವಿಂಟಾಲಿಗೆ 17,400 ರೂ. ಇದ್ದ ಉಂಡೆ ಕೊಬ್ಬರಿ ಇದೀಗ 13,500 ರೂ. ಅಂಚಿಗೆ ತಲುಪಿದೆ . ಕೆಲವೇ ದಿನಗಳಲ್ಲಿ ಬೆಂಬಲ ಬೆಲೆ 11 ಸಾವಿರ ರೂಪಾಯಿಗೆ ಇಳಿದರೂ ಆಶ್ಚರ್ಯವಿಲ್ಲ. ಮಾರುಕಟ್ಟೆ ತಜ್ಞರ ಪ್ರಕಾರ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತಗೊಳಿಸಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ. ಎಣ್ಣೆ ಕಾಳುಗಳ ಬೆಲೆ ಇಳಿಕೆಯಾದಂತೆ ಕೊಬ್ಬರಿ ಎಣ್ಣೆಗೆ ಬೇಡಿಕೆ ಕಡಿಮೆಯಾಗಿರುವ ಪರಿಣಾಮ ಕೊಬ್ಬರಿ ಬೆಲೆ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ. ಕೊಬ್ಬರಿ ದರ ಕುಸಿತ ನೇರವಾಗಿ ರೈತ ಸಮುದಾಯದ ಆರ್ಥಿಕತೆ ಮೇಲೆ ಭಾರೀ ಹೊಡೆತಕ್ಕೆ ಕಾರಣವಾಗಬಹುದು ಎಂಬ ಚಿಂತನೆ ಸರ್ಕಾರದ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಯ ಜತೆಗೆ ಆಯಿಲ್ ಕಂಪನಿಗಳ ಭವಿಷ್ಯವೇ ಸರ್ಕಾರಕ್ಕೆ ಹೆಚ್ಚಾಯಿತೇ ಎಂಬ ಮಾತು ಕೇಳಿಬರುತ್ತಿವೆ.

ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

ಕೇಂದ್ರ ಹಾಗೂ ರಾಜ್ಯದ ಸಚಿವರು ವಿದೇಶಗಳಿಗೆ ಹೋದಾಗ ಅಲ್ಲಿನ ಎನ್.ಆರ್.ಐ/ ಅನಿವಾಸಿ ಭಾರತೀಯರನ್ನು ವಿದ್ಯುನ್ಮಾನ/ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಔಷಧ ಕಂಪನಿಗಳ ಸ್ಥಾಪನೆಗೆ ಬಂಡವಾಳ ಹೂಡುವಂತೆ ಕೆಂಪು ಹಾಸಿನ ಸ್ವಾಗತ ಕೋರಿ ಆಹ್ವಾನಿಸುತ್ತಾರೆ. ಆದರೆ ರೈತರ ಏಳಿಗೆಗಾಗಿ ಆತ್ಮನಿರ್ಭರ ಯೋಜನೆಯಡಿ ರೈತರ ಉತ್ಪನ್ನಗಳ ಉದ್ದಿಮೆಗಳ ಸ್ಥಾಪನೆಗೆ ವಿದೇಶಿ ಭಾರತಿಯರನ್ನು ಆಹ್ವಾನಿಸಿ ವಿದೇಶಗಳಲ್ಲಿ ಇಲ್ಲಿನ ರೈತರ ಉತ್ಪನ್ನದ ಉದ್ದಿಮೆ ಪ್ರಾರಂಭಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಇದರಿಂದ ನಿಜ ಅರ್ಥದಲ್ಲಿ ರೈತರ ಆದಾಯವು ದ್ವಿಗುಣವಾಗುತ್ತದೆ. 

ಇನ್ನು ಮುಂದಾದರೂ ಸರ್ಕಾರಗಳು ಈ ನಿಟ್ಟಿನಲ್ಲಿ ಸೂಕ್ತ, ಪರ್ಯಾಯ ಕ್ರಮ ಜಾರಿಗೆ ತರದಿದ್ದರೆ ಯುವ ಸಮುದಾಯ ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ.