Asianet Suvarna News Asianet Suvarna News

ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌: ಮೇ.29ರ ವರೆಗೆ ಭಾರಿ ಮಳೆ ಮುನ್ಸೂಚನೆ

ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ಗುರುವಾರ ದ.ಕ.ಜಿಲ್ಲೆಯಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಗುಡುಗು, ಮಿಂಚು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

Coastal Yellow Alert Heavy rain forecast till May 29th gvd
Author
First Published May 24, 2024, 11:44 PM IST

ಮಂಗಳೂರು (ಮೇ.24): ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದೆ. ಗುರುವಾರ ದ.ಕ.ಜಿಲ್ಲೆಯಲ್ಲಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಗುಡುಗು, ಮಿಂಚು, ಸಿಡಿಲು, ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಈ ನಡುವೆ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರಾತ್ರಿ ಸಿಡಿಲಿಗೆ ಉತ್ತರ ಭಾರತದ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದ.ಕ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗುರುವಾರ ನಸುಕಿನ ಜಾವ ಮಳೆಯಾಗಿದೆ. ಮಧ್ಯಾಹ್ನವರೆಗೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಕೆಲವು ಕಡೆ ಬಿಸಿಲು ಕಾಣಿಸಿದೆ. ಅಪರಾಹ್ನ ಮಂಗಳೂರಿನಲ್ಲಿ ತುಂತುರು ಮಳೆಯಾಗಿದ್ದು, ಸುಳ್ಯ, ಬೆಳ್ತಂಗಡಿಗಳಲ್ಲಿ ಹನಿ ಮಳೆಯಾಗಿದೆ.

ಸಿಡಿಲು ಬಡಿದು ಸಾವು: ನಗರದ ಜೆಪ್ಪಿನಮೊಗರಿನಲ್ಲಿ ಸಿಡಿಲು ಬಡಿದು ರಾಜ್‌ ಕುಮಾರ್‌ ಚೌಧುರಿ(55) ಎಂಬವರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಇವರು ಉತ್ತರ ಪ್ರದೇಶ ಮೂಲದ ಕಾರ್ಮಿಕನಾಗಿದ್ದು, ಬಾಡಿಗೆ ಮನೆಯ ಅಂಗಳದಲ್ಲಿ ನಿಂತಿದ್ದ ವೇಳೆ ಹಠಾತ್‌ ಸಿಡಿಲಾಘಾತಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಬರ ನಿರ್ವಹಣೆ ಕೆಲಸದ ಕಡೆ ಗಮನ ಕೊಡಿ: ಸಿಎಂ ಸಿದ್ದರಾಮಯ್ಯ ಸೂಚನೆ

6 ದಿನ ಭಾರಿ ಮಳೆ ಮುನ್ಸೂಚನೆ: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಏಳುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಚಂಡಮಾರುತದ ಪರಿಚಲಯನೆ ಕೇರಳದ ಕೆಳ ಮತ್ತು ಮಧ್ಯಮ ಉಷ್ಣ ವಲಯದ ಮಟ್ಟದಲ್ಲಿದೆ. ಅದರ ಪ್ರಭಾವ ಮುಂದಿನ 6 ದಿನಗಳಲ್ಲಿ ಅಂದರೆ, ಮೇ 24ರಿಂದ 29ರ ವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಒಳನಾಡಿನಲ್ಲೂ ಭಾರಿ ಮಳೆಯಾಗಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಉಳ್ಳಾಲದಲ್ಲಿ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 45.1 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ಸರಾಸರಿ ಮಳೆ 17.9 ಮಿಲಿ ಮೀಟರ್‌ ದಾಖಲಾಗಿದೆ. ಜಿಲ್ಲೆಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಬೆಳ್ತಂಗಡಿ 9.6 ಮಿ.ಮೀ, ಬಂಟ್ವಾಳ 19.5 ಮಿ.ಮೀ, ಮಂಗಳೂರು 17.5 ಮಿ.ಮೀ, ಪುತ್ತೂರು 16.6 ಮಿ.ಮೀ, ಸುಳ್ಯ 22.1 ಮಿ.ಮೀ, ಮೂಡುಬಿದಿರೆ 33.5 ಮಿ.ಮೀ, ಕಡಬ 17.6 ಮಿ.ಮೀ. ಹಾಗೂ ಮೂಲ್ಕಿಯಲ್ಲಿ 9.4 ಮಿ.ಮೀ. ಮಳೆ ದಾಖಲಾಗಿದೆ.

ಧರ್ಮಸ್ಥಳ ದರ್ಶನ ಮುಗಿಸಿ ಬರುವಾಗ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರು ಸಾವು!

ತುಂಬೆ ಡ್ಯಾಂ ಗೇಟ್‌ ತೆರವು: ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ಹೊಸ ಡ್ಯಾಂನಲ್ಲಿ ನೀರಿನ ಮಟ್ಟ 5.4 ಮೀಟರ್‌ ಸಂಗ್ರಹವಿದ್ದು, ಗುರುವಾರ ಬೆಳಗ್ಗಿನಿಂದಲೇ ಒಂದು ಗೇಟ್‌ನ್ನು ತೆರೆಯಲಾಗಿದೆ. ಡ್ಯಾಂಗೆ ನದಿ ಮಳೆ ನೀರಿನ ಒಳಹರಿವು ಬರುತ್ತಿದ್ದು, ಡ್ಯಾಂ ಭರ್ತಿಯಾಗಿದೆ. ಇದರಿಂದಾಗಿ ಒಂದು ಗೇಟ್‌ನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ತುಂಬೆ ಡ್ಯಾಂನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಈಗಾಗಲೇ ಮಂಗಳೂರು ನಗರದಲ್ಲಿ ನೀರಿನ ರೇಷನಿಂಗ್‌ನ್ನು ಸ್ಥಗಿತಗೊಳಿಸಲಾಗಿದೆ.

Latest Videos
Follow Us:
Download App:
  • android
  • ios