ಬೆಂಗಳೂರು(ಜೂ.26): ಕಚೇರಿಯ ನಾಲ್ವರು ಸಿಬ್ಬಂದಿಗೆ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿಯನ್ನು ಎರಡು ದಿನಗಳು ಸೀಲ್‌ಡೌನ್‌ ಮಾಡಲಾಗಿದೆ.

ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಸರ್ಕಾರಿ ಗೃಹ ಕಚೇರಿಯ ಭದ್ರತೆಗೆ ನಿಯೋಜಿತರಾಗಿದ್ದ ಮೂವರು ಪೊಲೀಸರು, ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಹಾಗೂ ಬೆಸ್ಕಾಂ ನೌಕರ ಸೇರಿದಂತೆ ನಾಲ್ವರು ಸೋಂಕಿತರಾಗಿದ್ದಾರೆ.

ಜಾರ್ಖಂಡ್ ಗ್ರಾಮದ ಮಕ್ಕಳಿಗೆ ಮೈಕ್‌ನಲ್ಲಿ ಪಾಠ..!

ಈ ಸಿಬ್ಬಂದಿಯ ವೈದ್ಯಕೀಯ ವರದಿ ಬಂದಕೂಡಲೇ ಎಚ್ಚೆತ್ತ ಅಧಿಕಾರಿಗಳು, ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನು ಸ್ಯಾನಿಟೈಸ್‌ ಮಾಡಿ ಶುದ್ಧಿಗೊಳಿಸಿದ್ದಾರೆ. ಈಗ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಹಾಗೂ ಶನಿವಾರ ಸೀಲ್‌ಡೌನ್‌ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಗೃಹ ಕಚೇರಿಯ ಓರ್ವ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿತ್ತು.

ಆಗ ಕಚೇರಿಯಲ್ಲಿ ಪೂರ್ವನಿಗದಿಯಾಗಿದ್ದ ತಮ್ಮಲ್ಲ ಸಭೆ ಹಾಗೂ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ರದ್ದುಪಡಿಸಿ, ವಿಧಾನಸೌಧಕ್ಕೆ ಸ್ಥಳಾಂತರಿಸಿದ್ದರು. ಈಗ ಮತ್ತೆ ಗೃಹ ಕಚೇರಿ ಸಿಬ್ಬಂದಿ ಪೈಕಿ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಮುಖ್ಯಮಂತ್ರಿಗಳ ಸಾರ್ವಜನಿಕರ ಭೇಟಿ ಮತ್ತಷ್ಟು ಕಠಿಣವಾಗಲಿದೆ.