75 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಅಸ್ತು
ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು, ಹಾರ್ನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗ(ಆ.06): ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕುಂಸಿ, ಆಯನೂರು, ಹಾರ್ನಹಳ್ಳಿ ಹೋಬಳಿಯ 75 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಟೆಂಡರ್ ಪ್ರಕ್ರಿಯೆ ಶೀಘ್ರ ಆರಂಭ:
ಪತ್ರಿಕಾಗೋಷ್ಠಿಯಲ್ಲಿ ಅವರು, ತುಂಗಾ, ಭದ್ರಾ ನದಿಗಳಿದ್ದರೂ ನಮ್ಮ ಜಿಲ್ಲೆ ನೀರಾವರಿ ಯೋಜನೆಯಲ್ಲಿ ಅಂತಹ ಪ್ರಗತಿ ಸಾಧಿಸಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿನ ಏತ ನೀರಾವರಿ ಯೋಜನೆಗೆ ಮಂಜೂರಾತಿ ನೀಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
ಯೋಜನೆಯಿಂದ 145 ಗ್ರಾಮಕ್ಕೆ ಅನುಕೂಲ:
ಯೋಜನೆಯನ್ವಯ ಮೂರು ಹೋಬಳಿಗಳ 75 ಕೆರೆಗಳಿಗೆ ತುಂಗಾ ನದಿಯಿಂದ ನೀರು ತುಂಬಿಸಲಾಗುತ್ತದೆ. ಇದರಿಂದ ಹೆಚ್ಚಾದ ನೀರನ್ನು ಅಂಜನಾಪುರ ಜಲಾಶಯಕ್ಕೆ ಹರಿಸಲಾಗುವುದು. ಯೋಜನೆಯಿಂದ 3 ಹೋಬಳಿಗಳ 145 ಗ್ರಾಮಗಳಿಗೆ ನೀರು ಲಭ್ಯವಾಗುತ್ತದೆ. ತುಂಗಾ ನದಿಯಿಂದ 0.75 ಟಿಎಂಸಿ ನೀರನ್ನು ಯೋಜನೆಗಾಗಿ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
250 ಕೋಟಿ ರುಪಾಯಿ ವೆಚ್ಚದ ಯೋಜನೆ:
ಸುಮಾರು 250 ಕೋಟಿ ಯೋಜನೆ ಜಾರಿಗೊಳ್ಳುತ್ತಿರುವುದರ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರ ಪರಿಶ್ರಮ ಸಾಕಷ್ಟಿದೆ. ಅಲ್ಲದೆ, ಸೂಗೂರು ಸಮೀಪ .10 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಅನುಮೋದನೆ ದೊರೆತಿದ್ದು, ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಎಂ.ಶಂಕರ್, ಎನ್.ಜೆ. ರಾಜಶೇಖರ್, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎಚ್.ಸಿ. ಬಸವರಾಜಪ್ಪ, ಮಧುಸೂದನ್, ಹಿರಣ್ಣಯ್ಯ ಉಪಸ್ಥಿತರಿದ್ದರು.