ಬೆಂಗಳೂರು [ಸೆ.09]:  ವಿಶ್ವ ಮಾನ್ಯತೆ ಪಡೆದ ಬೆಂಗಳೂರು ನಗರದಲ್ಲಿ ತ್ವರಿತವಾಗಿ ಮೂಲಸೌಕರ್ಯ ಕಲ್ಪಿಸುವ ದೃಷ್ಟಿಯಿಂದ 15 ದಿನಕ್ಕೊಮ್ಮೆ ನಗರ ಪ್ರದಕ್ಷಿಣೆ ನಡೆಸಿ ಕಾಮಗಾರಿಗಳ ಪರಿಶೀಲನೆ ಜೊತೆಗೆ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರದ ಬಳಿಕ  ಮೊದಲ ಬಾರಿಗೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ ಬಿಬಿಎಂಪಿ, ಮೆಟ್ರೋ ಹಾಗೂ ಇತರೆ ಇಲಾಖೆಗಳಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಜತೆಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ನಗರದ ಮೂಲಸೌಕರ್ಯ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿ ಸಂಬಂಧ ಪಟ್ಟಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ತಲೆಕೆಟ್ಟಿದೆಯಾ ನಿನಗೆ?’

ಕುಂದಲಹಳ್ಳಿ ಜಂಕ್ಷನ್‌ ಸಿಗ್ನಲ್‌ ಫ್ರೀ ಕಾರಿಡಾರ್‌ ಕಾಮಗಾರಿ ಪರಿಶೀಲನೆ ವೇಳೆ ಕಾಮಗಾರಿ ಸ್ಥಗಿತಗೊಳಿಸುವುದಕ್ಕೆ ಗುತ್ತಿಗೆದಾರನಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಕಾಮಗಾರಿ ಸ್ಥಗಿತಗೊಳಿಸುವುದಕ್ಕೆ ‘ತಲೆಕೆಟ್ಟಿದಿಯಾ ನಿನಗೆ’ ಎಂದು ಪ್ರಶ್ನಿಸಿದರು. ಅಲ್ಲದೇ ಕಾಮಗಾರಿ ತುಂಡು ಗುತ್ತಿಗೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

 ಈ ವೇಳೆ ಗುತ್ತಿಗೆದಾರ ಭೂಸ್ವಾಧೀನ ಪ್ರಕ್ರಿಯೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸಬೂಬು ಹೇಳಿದರು. ಆಗ ನಾಲ್ಕು ದಿನದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಪರಿಹಾರ ಮಾಡಿ ಕಾಮಗಾರಿ ಆರಂಭಿಸುವುದಕ್ಕೆ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡಿದರು.